Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಲು ಎಸ್ಪಿ ಸೂಚನೆ

ವರದಿ : ಗುಡಿಗೆರೆ ನಾಗಮ್ಮ

ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಸಂಚಾರಿ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಪರಿಶೀಲನೆ ನಡೆಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದರು.

ಭಾರತೀನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಕಾರ್ಖಾನೆ ಕಬ್ಬು ಸರಬರಾಜು ಮಾಡುವ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಸಂದರ್ಭದಲ್ಲಿ ವಿಶ್ವೇಶ್ವರಯ್ಯ ವೃತ್ತಕ್ಕೆ ಆಗಮಿಸಿ ಸಂಚಾರಿ ವ್ಯವಸ್ಥೆ ಬಗ್ಗೆ ವಿವರಣೆ ಪಡೆದುಕೊಂಡರು.

ಭಾರತೀನಗರ ಪಟ್ಟಣದ ಫುಟ್ಪಾತ್ ವ್ಯಾಪಾರಿಗಳು ತಮ್ಮ ವ್ಯಾಪಾರ ಸ್ಥಳದ ಶುಲ್ಕಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯವರಿಗೆ ಹೊರತು ಪಡಿಸಿ ಇನ್ಯಾರಿಗೂ ಬಾಡಿಗೆ ಅಥವಾ ಸ್ಥಳದ ತೆರಿಗೆ ಹಣ ನೀಡಬಾರದು. ಫುಟ್ಬಾತ್ ವ್ಯಾಪಾರಿಗಳಿಂದ ಬಲವಂತವಾಗಿ ಹಣ ಪಡೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಬಲವಂತವಾಗಿ ಹಣ ವಸೂಲಿ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇಂತಹ ದೌರ್ಜನ್ಯಗಳ ಕುರಿತು ಸ್ಥಳಿಯ ಪೊಲೀಸರು ಗಮನಿಸಬೇಕೆಂದು ಸೂಚನೆ ನೀಡಿದರು.

ನಂತರ ಹಲಗೂರು ರಸ್ತೆ ಎದುರಿಗೆ ನಿರ್ಮಾಣ ಮಾಡುತ್ತಿರುವ ಪೊಲೀಸ್ ಚೌಕಿಯನ್ನು ವೀಕ್ಷಿಸಿ, ಸಂಚಾರಿ ಪೊಲೀಸರನ್ನು ನಿಯೋಜಿಸುವ ಮೂಲಕ ಸಾರ್ವಜನಿಕರಿಗೆ ಸಂಚಾರ ದಟ್ಟಣೆ ಉಂಟಾಗದಂತೆ ಉತ್ತಮ ಸಂಚಾರಿ ವ್ಯವಸ್ಥೆ ಕಲ್ಪಿಸುವುದಾಗಿ, ಪಾದಾಚಾರಿಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಸಾರ್ವಜನಿಕರಿಗೆ ತಿಳಿಸಿದರು.

ಭಾರತೀನಗರದಲ್ಲಿ ಕಳ್ಳತನ, ಅಪಘಾತ, ಸಂಚಾರಿ ನಿಯಮ ಉಲ್ಲಂಘನೆಯಂತಹ ಪ್ರಕರಣಗಳು ಹೆಚ್ಚುತ್ತಿರುವುದರ ಕುರಿತು ಸಾರ್ವಜನಿಕರು ಎಸ್ಪಿ ಯತೀಶ್ ಗಮನಕ್ಕೆ ತಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಯತೀಶ್, ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ಎಲ್ಲಾ ಪ್ರಮುಖ ವೃತ್ತಗಳಲ್ಲಿ ಕೆಟ್ಟುನಿಂತಿರುವ ಸಿಸಿ ಕ್ಯಾಮಾರಗಳನ್ನು ಸರಿಪಡಿಸಿ ಕಣ್ಗಾವಲು ಇರುವಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿಯೂ ಸಂಚಾರಿ ವ್ಯವಸ್ಥೆಯಲ್ಲಿ ಲೋಪವಾಗದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಇದೇ ವೇಳೆ ಡಿವೈಎಸ್ಪಿ ನವೀನ್ ಕುಮಾರ್, ಇನ್ಸ್ಪೆಕ್ಟರ್ ಆನಂದ್, ಎಸ್ಐ ರಾಮಸ್ವಾಮಿ, ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!