ಮದ್ದೂರು ತಾಲ್ಲೂಕು ಭಾರತೀನಗರದ ಸ್ಫೂರ್ತಿ ಪತ್ತಿನ ಸಹಕಾರ ಸಂಘ ಕಳೆದ 25 ವರ್ಷಗಳ ಹಿಂದೆ ಸ್ಥಾಪನೆಗೊಂಡು ಗ್ರಾಮೀಣ ಭಾಗದ ಜನರ ಆರ್ಥಿಕ ಸ್ಥಿತಿಗತಿಗಳಲ್ಲಿ ಉತ್ತಮ ಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ಅಂಗವಾಗಿ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಭಾರತೀನಗರದಲ್ಲಿ ಸೆ.13 ರಂದು ಮಾಡಲಾಗುತ್ತಿದೆ ಎಂದು ಭಾರತೀಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ ತಿಳಿಸಿದರು.
ಭಾರತೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಸ್ಪೂರ್ತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ಆಡಳಿತ ಮಂಡಳಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವೈದ್ಯಕೀಯ ಸಂಶೋದನಾ ಸಂಸ್ಥೆ, ಮೈಸೂರಿನ ನಾರಾಯಣ ಹೃದಾಯಾಲಯ, ಅನನ್ಯ ಹಾರ್ಟ್ ಫೌಂಡೇಷನ್ ವತಿಯಿಂದ ಗ್ರಾಮೀಣ ಜನರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನುರಿತ ವೈದ್ಯತಜ್ಞರಿಂದ ನಡೆಯಲಿದ್ದು, ಅಗತ್ಯ ಉಳ್ಳವರಿಗೆ ಉಚಿತ ಔಷಧಿ ವಿತರಣೆಯನ್ನು ನೀಡಲಾಗುತ್ತದೆ. ಇದರೊಂದಿಗೆ ಪರಿಸರ ಸಂರಕ್ಷಣೆಯ ದೃಷ್ಠಿಯಿಂದ 5 ಸಾವಿರ ಸಸಿ ವಿತರಣೆ ಕಾರ್ಯಕ್ರಮವನ್ನು ಭಾರತಿನಗರದ ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ಮತ್ತು ರಾಯಲ್ ಓಕ್ಸ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸೆ.13 ರಂದು ಬೆಳಿಗ್ಗೆ 8.30 ಕ್ಕೆ ಆಯೋಜಿಸಲಾಗಿದೆ. ಜೊತೆಗೆ ಸಂಘದ ಮೇಲಂತಸ್ತಿನ ಕಟ್ಟಡದ ಸಭಾಂಗಣ ಉದ್ಘಾಟನೆಗೊಳ್ಳಲಿದೆ. ಈ 3 ಬಹುಮುಖ್ಯ ಕಾರ್ಯಕ್ರಮಗಳಲ್ಲಿ ಸಂಘದ ಷೇರುದಾರರು, ಸಾರ್ವಜನಿಕರು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಮಾರಂಭಕ್ಕೂ ಮುನ್ನ ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹುಣಸೂರು ಕ್ಷೇತ್ರದ ಶಾಸಕ ಜಿ.ಟಿ.ಹರೀಶ್ ಗೌಡ ಉದ್ಘಾಟಿಸಲ್ಲಿದ್ದಾರೆ ಎಂದರು.
ಬೆಳ್ಳಿಹಬ್ಬ ಸಂಭ್ರಮದ ಉದ್ಘಾಟನೆಯನೆಯನ್ನು ಆದಿಚುಂಚನಗಿರಿ ಶಾಖಾ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಸಾನ್ನಿಧ್ಯದಲ್ಲಿ ಶಾಸಕ ಕೆ.ಎಂ.ಉದಯ್ ಅವರು ಕಾರ್ಯಕ್ರಮವನ್ನು ಬೆಳಿಗ್ಗೆ 11.30 ಕ್ಕೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡ, ದಿನೇಶ್ ಗೂಳಿಗೌಡ, ಕೆ.ವಿವೇಕಾನಂದ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಬೆಳ್ಳಿಹಬ್ಬ ಸಂಭ್ರಮದ ಸಮಾರೋಪ ಸಮಾರಂಭವು ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಘನ ಉಪಸ್ಥಿತಿಯಲ್ಲಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಸಮಾರೋಪ ಭಾಷಣ ಮಾಡಲ್ಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸದಸ್ಯರಿಗೆ ಸಾಲದ ಚೆಕ್ ವಿತರಣೆ ಮಾಡಲ್ಲಿದ್ದಾರೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಎಸ್.ಶಿವರಾಮು ಶುಕ್ರವಾರ ಮಧ್ಯಾಹ್ನ 1 ಗಂಟೆಯಲ್ಲಿ ಮಾತನಾಡಿ, ಈ ಒಂದು ಸಹಕಾರ ಸಂಘ 25 ವರ್ಷ ಪೂರೈಕೆ ಮಾಡುವುದು ಹೆಮ್ಮೆಯ ವಿಷಯವಾಗಿದೆ. ಹಾಗಾಗಿ ನಿವೃತ್ತ ಮುಖ್ಯಶಿಕ್ಷಕ ಮಾಯಪ್ಪ ಹಾಗೂ ನಿವೃತ್ತ ಪ್ರಾಂಶುಪಾಲರಾದ ಮಾ.ರಾಮಕೃಷ್ಣ ರವರು ಸ್ಪೂರ್ತಿ ಪತ್ತಿನ ಸಹಕಾರ ಸಂಘದ ಸ್ಮರಣ ಸಂಚಿಕೆಯನ್ನು ಸಹ ಹೊರತರಲ್ಲಿದ್ದಾರೆ ಎಂದರು.
ವೇದಿಕೆ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಷೇರುದಾರರ ಮಕ್ಕಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ, ಮಾಜಿ ಸೈನಿಕ ಹಾಗೂ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಪ್ರಶಾಂತ್ ಶಾಲೆಯ ಬಸವರಾಜು, ರಾಯಲ್ ಓಕ್ಸ್ನ ಶಾಲೆಯ ರಾಜಣ್ಣ, ನಿರ್ದೇಶಕರಾದ ಬಿ.ಎಸ್.ರವೀಂದ್ರ, ಅಣ್ಣೂರು ವಿನು, ಡಿ.ಎನ್.ರಘು, ಮುಖ್ಯಶಿಕ್ಷಕ ಚಂದ್ರಶೇಖರ್, ನಿವೃತ್ತ ಮುಖ್ಯಶಿಕ್ಷಕ ಮಾಯಪ್ಪ ಇದ್ದರು.




