Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯವಂತ ಜೀವನಕ್ಕೆ ಕ್ರೀಡೆಯು ಸಂಜೀವಿನಿ: ಮಧುಸೂದನ್

ಆರೋಗ್ಯವಂತ ಜೀವನಕ್ಕೆ ಕ್ರೀಡೆಯು ಸಂಜೀವಿನಿ ಆಗಿರುವುದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಉತ್ತಮವಾದ ಕ್ರೀಡಾಪಟುಗಳಾಗಿ ಹೊರ ಹೊಮ್ಮವ ಮೂಲಕ ಅದ್ಭುತವಾದ ಸಾಧನೆಯನ್ನು ಮಾಡಬೇಕು ಎಂದು ಸಿಆರ್ ಪಿಎಫ್ ಯೋಧ ಮಾಕವಳ್ಳಿ ಮಧುಸೂದನ್ ಹೇಳಿದರು .

ಕೆ.ಆರ್.ಪೇಟೆ ಪಟ್ಟಣದ ಆಚಾರ್ಯ ವಿದ್ಯಾಶಾಲೆಯ ವಿದ್ಯಾರ್ಥಿಗಳಿಗೆ ಶ್ರೀಬಾಲಗಂಗಾಧರನಾಥ ಮಹಾಸ್ವಾಮೀಜಿ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಾಠ ಪ್ರವಚನಗಳಿಗೆ ನೀಡುವಷ್ಟೇ ಆದ್ಯತೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಕ್ರೀಡಾ ಚಟುವಟಿಕೆಗಳಿಗೆ ನೀಡಬೇಕು. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಸಾಧಿಸಿ ಸಮಗ್ರವಾಗಿ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳು ವರದಾನವಾಗಿವೆ. ಈ ದಿಕ್ಕಿನಲ್ಲಿ ಪಟ್ಟಣದ ಆಚಾರ್ಯ ವಿದ್ಯಾ ಶಾಲೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಶಿಸ್ತು ಸಂಯಮ ಸೇರಿದಂತೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸಿರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಮಧುಸೂದನ್ ಹೇಳಿದರು.

ಆಚಾರ್ಯ ವಿದ್ಯಾಶಾಲೆಯ ಅಧ್ಯಕ್ಷ ಹಾಗೂ ನಟ ಅರವಿಂದರಾವ್ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಆಚಾರ್ಯ ವಿದ್ಯಾಶಾಲೆ ತಾಲೂಕಿನಲ್ಲಿಯೇ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸೈನಿಕರ ರೀತಿಯಲ್ಲಿ ಸಮವಸ್ತ್ರ ವಿನ್ಯಾಸಗೊಳಿಸಿ ಮಕ್ಕಳಲ್ಲಿ ಬಾಲ್ಯದಿಂದಲೇ ಶಿಸ್ತು ತುಂಬುವ ಜೊತೆಗೆ ರಾಷ್ಟ್ರಪ್ರೇಮ ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕುವಂತೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಆಚಾರ್ಯ ವಿದ್ಯಾಶಾಲೆಯ ವ್ಯವಸ್ಥಾಪಕ ನಿರ್ದೇಶಕ ತಬ್ರೇಜ್ ನದೀಮ್, ಪ್ರಾಂಶುಪಾಲೆ ಹುಧಾ ಫಾತಿಮಾ ಡೆಲ್ವಿ, ಆಡಳಿತಾಧಿಕಾರಿ ನಾಗೇಶಬಾಬು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುಕುಮಾರ್ ಮತ್ತಿತರರು ಭಾಗವಹಿಸಿದ್ದರು. ಶಾಲಾ ಮಕ್ಕಳು ಪ್ರದರ್ಶಿಸಿದ ಆಕರ್ಷಕ ನೃತ್ಯವು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ರಂಜಿಸಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!