Friday, September 20, 2024

ಪ್ರಾಯೋಗಿಕ ಆವೃತ್ತಿ

ಕಮಲ ಕಲಹ| ವಿಪಕ್ಷ ನಾಯಕ ಅಶೋಕ್ ಕೊಠಡಿಗೆ ಕಾಲಿಡುವುದಿಲ್ಲ ಎಂದ ಬಿಜೆಪಿ ಶಾಸಕ !

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದ್ದರೆ, ವಿಪಕ್ಷ ಬಿಜೆಪಿಯೊಳಗಿನ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಬಿಜೆಪಿಯ ಭಿನ್ನಮತದ ಮುಂದುವರಿದ ಭಾಗವಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್‌ ಆರ್ ವಿಶ್ವನಾಥ್ ಮಧ್ಯೆ ಅಸಮಾಧಾನ ಭುಗಿಲೆದ್ದಿದೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಗೆ ಹೋಗಲು ವಿಶ್ವನಾಥ್ ಮತ್ತೆ ನಿರಾಕರಿಸಿದ್ದಾರೆ.

ಸದನದಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಆರ್ ಅಶೋಕ್ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ‘ಕ್ಲೋಸ್ಡ್ ಡೋರ್ ಮೀಟಿಂಗ್’ ನಡೆಯುತ್ತಿದ್ದ ಸಂದರ್ಭ ಶಾಸಕ ಮುನಿರತ್ನ, ವಿಶ್ವನಾಥ್ ಅವರನ್ನು ಅಶೋಕ್ ಕೊಠಡಿಗೆ ಕರೆದೊಯ್ಯಲು ಕೈ ಹಿಡಿದುಕೊಂಡರು.

ಈ ವೇಳೆ, ವಿಶ್ವನಾಥ್ ಅವರು, “ಅಶೋಕ್ ಹೆಸರಿನ ನಾಮಫಲಕ ಇರುವವರೆಗೂ ನಾನು ಆ ಕೊಠಡಿಗೆ ಕಾಲಿಡುವುದಿಲ್ಲ. ಬೇಕಾದರೆ ನಾಮಫಲಕ ತೆಗೆಯಲಿ, ಆಗ ಹೋಗುತ್ತೇನೆ” ಎಂದು ಕಡ್ಡಿ ಮುರಿದಂತೆ ಹೇಳಿ ಕೊಠಡಿ ಮುಂಭಾಗದ ಮೊಗಸಾಲೆಯಲ್ಲಿ ಕುಳಿತಿದ್ದಾರೆ. ಈ ಎಲ್ಲ ಬೆಳವಣಿಗೆ ಅಲ್ಲಿದ್ದ ಮಾಧ್ಯಮದವರ ಕಣ್ಣಿಗೆ ಬಿದ್ದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ವಿಶ್ವನಾಥ್, ಬಳಿಕ ವಿಜಯೇಂದ್ರ ಜೊತೆ ಮಾತುಕತೆ ನಡೆಸಿದ್ದಾರೆ.

ವಿಜಯೇಂದ್ರ ಜೊತೆಗಿನ ಮಾತುಕತೆ ವೇಳೆ ವಿಶ್ವನಾಥ್, ಅಶೋಕ್ ಮೇಲಿನ ಬೇಸರವನ್ನು ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಆನಂತರ ವಿಜಯೇಂದ್ರ, ಅದನ್ನೆಲ್ಲಾ ಮಾತನಾಡೋದು ಬಿಡಿ ಒಗ್ಗಟ್ಟಾಗಿ ಹೋಗೋಣ ಎಂದು ಮನವೊಲಿಸಿ ಸಂಧಾನ ಮಾಡಿರುವುದಾಗಿ ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!