Thursday, September 19, 2024

ಪ್ರಾಯೋಗಿಕ ಆವೃತ್ತಿ

ದಲಿತ ಯುವಕರ ದುರ್ಬಳಕೆ: ಶ್ರೀರಾಮಸೇನೆ ನಿಷೇಧಕ್ಕೆ ಭಾಸ್ಕರ್‌ ಪ್ರಸಾದ್ ಆಗ್ರಹ

ಕೋಮುವಾದಿ ಸಂಘಟನೆಗಳು ದಲಿತ ಯುವಕರನ್ನು ದಾರಿ ತಪ್ಪಿಸಿ, ದುರ್ಬಳಕೆ ಮಾಡಿಕೊಳ್ಳುತ್ತಿವೆ, ಹಾಗಾಗಿ ಶ್ರೀರಾಮಸೇನೆ ಸಂಘಟನೆಯನ್ನು ನಿಷೇಧ ಮಾಡಬೇಕು ಮತ್ತು ಆ ಸಂಘಟನೆಯ ರಾಜ್ಯಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಗಡಿಪಾರು ಮಾಡಬೇಕು ಎಂದು ದಲಿತ ಸಂಘಟನೆ ಮುಖಂಡ ಭಾಸ್ಕರ್‌ ಪ್ರಸಾದ್ ಆಗ್ರಹಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಗೋವುಗಳನ್ನು ಸಾಗಿಸುವವರ ಮೇಲೆ ದಾಳಿ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ದಲಿತ ಸಂಘಟನೆಗಳು ಸಭೆ ನಡೆಸಿದ ಬಳಿಕ ದೊಡ್ಡಬಳ್ಳಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ಶ್ರೀರಾಮಸೇನೆ ನಿಷೇಧಕ್ಕೆ ಆಗ್ರಹ

”ಭಯೋತ್ಪಾದಕ ಮತ್ತು ಕೋಮುವಾದಿ ಸಂಘಟನೆಯಾದ ಶ್ರೀ ರಾಮ ಸೇನೆಯನ್ನು ನಿಷೇಧ ಮಾಡಲು ಕ್ರಮ ವಹಿಸಬೇಕು. ಸಂಘಟನೆಯ ವಿರುದ್ದ SC/ST ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು” ಎಂದು ದೂರಿನಲ್ಲಿ ಕೋರಲಾಗಿದೆ.

”ದಿನಾಂಕ 24/9/2023ರಂದು ರಂದು ದೊಡ್ಡಬಳ್ಳಾಪುರದಲ್ಲಿ ಶ್ರೀರಾಮ ಸೇನೆ ಸಂಘಟನೆಯು ಮಾಡಿರುವ ದುಷ್ಕೃತ್ಯದ ಕುರಿತು ಈಗಾಗಲೇ ನಿಮ್ಮ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಪ್ಪಿತಸ್ಥರನ್ನು ದಸ್ತಗಿರಿ ಮಾಡಿರುವುದು ಶ್ಲಾಘನೀಯ. ಆದರೆ ಮುಂದೆ ಈ ರೀತಿಯ ಘಟನೆಗಳು ಮರುಕಳಿಸಿ ಸಮಾಜದ ಶಾಂತಿಗೆ ದಕ್ಕೆಯಾಗದಿರಲು ಮುಂಜಾಗ್ರತ ಕ್ರಮವನ್ನು ವಹಿಸುವ ಸಲುವಾಗಿ ನಾವು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಾ ಈ ದೂರು ನೀಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

https://www.facebook.com/bhaskar.prasad.771/posts/6339998099460946?ref=embed_pos

ಭಯೋತ್ಪಾದಕ ಸಂಘಟನೆ

”ಶ್ರೀರಾಮ ಸೇನೆಯು ಸಂವಿಧಾನ ವಿರೋಧಿ, ಸಮಾಜ ಘಾತುಕ ಹಾಗು ಭಯೋತ್ಪಾದಕ ಸಂಘಟನೆಯಾಗಿದ್ದು. ಈ ಸಂಘಟನೆಯನ್ನು ನಿಷೇಧಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಕೋರುತ್ತೇವೆ. ತಪ್ಪಿತಸ್ಥರ ವಿರುದ್ಧ UAPA ಮತ್ತು NIA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ದಲಿತ ಯುವಕರನ್ನು ದಾರಿ ತಪ್ಪಿಸಿ ಕೋಮುವಾದಿ ಸಂಘಟನೆಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಯಬೇಕು. ದಲಿತ ಯುವಕರು ಕೋಮುವಾದಿಗಳಾಗಿ ಬೆಳೆಯುವಲ್ಲಿ ಪ್ರಚೋದನೆ ಮಾಡುತ್ತಿರುವ ಶ್ರೀರಾಮ ಸೇನೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಭಯೋತ್ಪಾದಕ ಮತ್ತು ಕೋಮುವಾದಿ ಸಂಘಟನೆಯಾದ ಶ್ರೀ ರಾಮ ಸೇನೆಯ ರಾಜ್ಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧವೂ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

”ಕೋಮುವಾದಿ ಸಂಘಟನೆಗಳಿಂದ ದಲಿತ ಯುವಕರನ್ನು ಆಚೆ ತಂದು ಅವರುಗಳು ಸಂವಿಧಾನದ ಅಡಿಯಲ್ಲಿ ತಮ್ಮ ಹಕ್ಕುಗಳನ್ನು ಹೊಂದಲು ಅಗತ್ಯ ಸಭೆಗಳನ್ನು ನಡೆಸಲು ಮತ್ತು ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಈ ದೂರಿನೊಂದಿಗೇ ಕೋರುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಅವರು, ”ಇತ್ತೀಚೆಗೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್  ಮುತಾಲಿಕ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿಯ ದಲಿತ ಯುವಕರಲ್ಲಿ ಕೋಮುವಿಷವನ್ನು ತುಂಬಿದ್ದಾರೆ. ದಲಿತ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಹಪ್ತಾ ವಸೂಲಿ ಆರೋಪ

”ದೊಡ್ಡಬಳ್ಳಾಪುರದಲ್ಲಿ ದನಗಳನ್ನು ಹಿಂದಿನಿಂದಲೂ ಸಾಗಿಸಲಾಗುತ್ತದೆ, ಈಗಲೂ ಸಾಗಿಸಲಾಗುತ್ತಿದೆ. ಆದರೆ ಇಷ್ಟು ದಿನ ಬಜರಂಗದಳ, ಶ್ರೀರಾಮ ಸೇನೆಯಂತಹ ಸಂಘಟನೆಗಳಿಗೆ ಹಪ್ತಾ ಹೋಗುತ್ತಿದ್ದರಿಂದ ಈವರೆಗೆ ದನಗ ಳನ್ನು ಸಾಗಿಸಲು ಸಮಸ್ಯೆಯಾಗಿರಲಿಲ್ಲ. ಆದರೆ ಇದೀಗ ಹಪ್ತಾ ನೀಡಿಲ್ಲ ಎನ್ನುವ ಕಾರಣಕ್ಕೆ ದನಗಳನ್ನು ಸಾಗಿಸುವ ಮುಸ್ಲಿಂ ಸಮುದಾಯದವರ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ದಾಳಿಗೆ ದಲಿತ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

”ದಲಿತ ಯುವಕರಿಗೆ ಉದ್ಯೋಗ ನೀಡುವ ಮೂಲಕ ಕೋಮುವಾದಿ ಸಂಘಟನೆಗಳಿಂದ ದೂರ ಉಳಿಯುವಂತೆ ಮಾಡಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬಜರಂಗದಳ ಸೇರಿದಂತೆ ಅನೇಕ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಿಕೊಂಡಿತ್ತು. ಆದರೆ ಇದೀಗ ಅಧಿಕಾರಕ್ಕೆ ಬಂದಿದ್ದಾರೆ ಆದಷ್ಟು ಬೇಗ ಬಜರಂಗದಳ ಶ್ರೀರಾಮ್ ಸೇನೆಯಂತಹ ಸಂಘಟನೆಗಳನ್ನು ನಿಷೇಧ ಮಾಡಬೇಕು” ಎಂದು ಭಾಸ್ಕರ್ ಪ್ರಸಾದ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!