ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆ ಸಮೀಪ ಶ್ರೀಭೂಮಿಸಿದ್ದೇಶ್ವರ ಜಾತ್ರೆಯು ಯುಗಾದಿಯಾದ 2 ದಿನಗಳ ನಂತರ ಅಂದರೆ ಏ.11ರಂದು ವಿಜೃಂಭಣೆಯಿಂದ ನಡೆಯಲಿದೆ.
ಸುತ್ತಮುತ್ತಲ 24 ಗ್ರಾಮಗಳ ಜನತೆ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಭಕ್ತಿ, ಭಾವದಿಂದ ಸೇರಿ ಆಚರಣೆ ಮಾಡುತ್ತಾರೆ. ಈ ಜಾತ್ರೆಯು ಅಟ್ಟೂಣ್ಣುವ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿದೆ, ಏಕೆಂದರೆ ಸುತ್ತಮುತ್ತಲ ಗ್ರಾಮಸ್ಥರು ದೇವಾಲಯದ ವಿಶಾಲವಾದ ಆವರಣದಲ್ಲೇ ಅಡುಗೆ ಮಾಡಿ, ದೇವರಿಗೆ ಎಡೆಯಿಟ್ಟು ಪೂಜಿಸಿದ ನಂತರ ಊಟ ಮಾಡುವುದು ಪ್ರತಿ ವರ್ಷವು ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ.

ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಈ ಜಾತ್ರೆ ಭಕ್ತಾಧಿಗಳು ಆಗಮಿಸುತ್ತಾರೆ. ಏ.10ರಂದು ಸಂಜೆ ದೇವಾಲಯದ ಆವರಣದಲ್ಲಿ ಬಾಯಿಬೀಗ ಸೇರಿದಂತೆ ವಿಶೇಷ ಪೂಜೆ ಕಾರ್ಯಗಳು ನಡೆಯಲಿದೆ.
ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಅಡುಗೆ ಮಾಡಿಕೊಳ್ಳುವುದಕ್ಕಾಗಿ ಟ್ಯಾಂಕರ್ ಗಳ ಮೂಲಕವೇ ನೀರು ಸರಬರಾಜು ಮಾಡಲು ದೇವಾಲಯ ಸಮಿತಿಯು ಸಿದ್ದತೆ ಮಾಡಿಕೊಂಡಿದೆ. ಅಲ್ಲದೇ ಬರುವ ಜನರಿಗೆ ನೀರು, ಮಜ್ಜಿಗೆ, ಪಾನಕವನ್ನು ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಭೂಮಿಸಿದ್ದೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೊತ್ತತ್ತಿ ತಮ್ಮಣ್ಣ, ಕಾರ್ಯದರ್ಶಿ ಕೆ.ಎಸ್.ಬೋರೇಗೌಡ, ಭೂಮಿಗೌಡ, ಕುಮಾರಗೌಡ ಹಾಗೂ ಪ್ರಚಾರ ಸಮಿತಿಯ ಲಂಕೇಶ್ ಮಂಗಲ, ಕಾರಸವಾಡಿ ಮಹದೇವು, ರಾಜು ಎಸ್ ಹಾಗೂ ಚಲಂದ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




