ಶ್ರೀರಂಗಪಟ್ಟಣದ ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಫೆಬ್ರವರಿ 9 ರಿಂದ 19 ರವರೆಗೆ ನಡೆಯಲಿದ್ದು, ಈ ಸಮಯದಲ್ಲಿ ಯಾವುದೇ ಲೋಪ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಿ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ಬ್ರಹ್ಮ ರಥೋತ್ಸವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಹ್ಮ ರಥೋತ್ಸವದಲ್ಲಿ ಸಹಸ್ರಾರು ಭಕ್ತಾದಿಗಳ ಹರ್ಷೋದ್ಗಾರದೊಂದಿಗೆ ಪಾಲ್ಗೊಳ್ಳುತ್ತಾರೆ. ಈ ಸಮಯದಲ್ಲಿ ಯಾವುದೇ ಅಹಿತಕರ ಅವಘಡ ಸಂಭವಿಸದಂತೆ ನೋಡಿಕೊಂಡು ಭಕ್ತಾಧಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದರು.
ರಥೋತ್ಸವದ ಜಾತ್ರೆಯಲ್ಲಿ ಅನಧಿಕೃತವಾಗಿ ಅಂಗಡಿ ಮುಗ್ಗಟ್ಟು, ಆಟಿಕೆಗಳಾದ ಜಾಯಿಂಟ್ ವೀಲ್ ಸೇರಿದಂತೆ ಇನ್ನಿತರ ಯಾವುದೇ ಅಂಗಡಿಯನ್ನು ಹಾಕದಂತೆ ನೋಡಿಕೊಳ್ಳಿ. ನಿಯಮ ಉಲ್ಲಂಘಿಸಿ ಹಾಕಿಯಲ್ಲಿ ಕಾನೂನು ಕ್ರಮ ಜರುಗಿಸಿ ಎಂದರು.
ಬ್ರಹ್ಮೋತ್ಸವ ಹಾದು ಹೋಗುವ ಬೀದಿಯಲ್ಲಿ ಸ್ವಚ್ಚತೆ ಕಪಾಡಿ, ರಥೋತ್ಸವದಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯ ಇರಲಿ. ಜೊತೆಗೆ ಆಂಬ್ಯುಲೆನ್ಸ್, ನುರಿತ ವೈದ್ಯರು ಇರಲಿ ಎಂದರು.
ಭಕ್ತಾಧಿಗಳು ಬ್ರಹ್ಮ ರಥೋತ್ಸವ ಎಳೆಯಲು ಯೋಗ್ಯ ಸ್ಥಿತಿಯಲ್ಲಿರುವುದನ್ನು ದೃಢೀಕರಿಸಿಕೊಳ್ಳಿ, ಬ್ರಹ್ಮರಥ ಚಲಿಸುವ ದೇವಾಲಯದ ಸುತ್ತಲು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿ. ಯಾವುದೇ ಅಗ್ನಿ ಅವಘಡಗಳು ಸಂಭವಿಸಿದಂತೆ ಕ್ರಮವಹಿಸಿ. ರಥೋತ್ಸವಕ್ಕೆ ಆಗಮಿಸುವ ಅತಿಥಿ ಗಣ್ಯರು ಮತ್ತು ಅಧಿಕಾರಿಗಳ ಶಿಷ್ಟಾಚಾರದ ಬಗ್ಗೆ ನೋಡಿಕೊಳ್ಳಿ ಎಂದರು.
ಸಭೆಯಲ್ಲಿ ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ, ಶ್ರೀರಂಗನಾಥ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ, ಶ್ರೀರಂಗಪಟ್ಟಣ ಪರುಶುರಾಮ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು




