ಶ್ರೀ ರಂಗನಾಥ ಸ್ವಾಮಿಯ ನೆಲೆವೀಡಾದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ 2023 ಚುನಾವಣೆಯಲ್ಲಿ ಯಾರ ಪಾಲಾಗಲಿದೆ ಎಂಬುದು ತೀವ್ರ ಕಾತುರ ಮೂಡಿಸಿದೆ.
ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಪುಟ್ಟೇಗೌಡ ಹಾಗೂ ಪಾಲಹಳ್ಳಿ ಚಂದ್ರಶೇಖರ್ ಕೂಡ ಟಿಕೆಟ್ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಆಪ್ತನಾದ ರಮೇಶ್ ಬಾಬು ಬಂಡಿಸಿದ್ದೇಗೌಡ ಈಗಾಗಲೇ ಎರಡು ಬಾರಿ ಶಾಸಕರಾಗಿ ಇಡೀ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಜನ ಸಂಪರ್ಕ ಹೊಂದಿದ್ದಾರೆ. ರಮೇಶ್ ಬಾಬು ಅವರು ಉಳಿದ ಇಬ್ಬರು ಆಕಾಂಕ್ಷಿಗಳಿಗಿಂತ ಪ್ರಬಲವಾಗಿ ಟಿಕೆಟ್ ಗಾಗಿ ಪೈಪೋಟಿ ನೀಡಲಿದ್ದು ಅವರೇ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತಗಳು ಕೇಳಿ ಬರುತ್ತಿದೆ.
ಹಿರಿಯ ಕಾಂಗ್ರೆಸ್ ಮುಖಂಡರಾದ ಪುಟ್ಟೇಗೌಡ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಉತ್ತಮ ಹೆಸರು ಗಳಿಸಿದ್ದಾರೆ. ಅವರು ನನಗೊಂದು ಬಾರಿ ಅವಕಾಶ ಕೊಡಿ ಎಂದು ಹಲವು ಚುನಾವಣೆಗಳಿಂದ ಕೇಳಿಕೊಂಡು ಬರುತ್ತಿದ್ದರೂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ.
ಕಾಂಗ್ರೆಸ್ ಮುಖಂಡ ಪಾಲಳ್ಳಿ ಚಂದ್ರಶೇಖರ್ ಉದ್ಯಮಿಯಾಗಿದ್ದು, ಅವರು ಕೂಡ ಈ ಬಾರಿಯಾದರೂ ನಮಗೊಂದು ಅವಕಾಶ ಕಲ್ಪಿಸಿ ಎಂದು ರಾಜ್ಯ ಕಾಂಗ್ರೆಸ್ ನಾಯಕರನ್ನು ಒತ್ತಾಯಿಸುತ್ತಿದ್ದಾರೆ.




