Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ : ಲಕ್ಷ ದೀಪೋತ್ಸವಕ್ಕೆ ಸರ್ವ ಸಿದ್ಧತೆ

ಶ್ರೀರಂಗಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಮಕರ ಸಂಕ್ರಾಂತಿಯ ದಿನ ನಡೆಯುವ ಲಕ್ಷ ದೀಪೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ನಾಳೆ ನಡೆಯುವ ದೀಪೋತ್ಸವವನ್ನು ಕಣ್ತುಂಬಿ ಕೊಳ್ಳಲು ಭಕ್ತರು,ಪಟ್ಟಣದ ಜನರು ಕಾಯತೊಡಗಿದ್ದಾರೆ.

33ನೇ ವರ್ಷದ ಲಕ್ಷ ದೀಪೋತ್ಸವ ನಡೆಯುತ್ತಿದ್ದು, ಲಕ್ಷ ದೀಪೋತ್ಸವ ಸಮಿತಿಯಿಂದ ಇದಕ್ಕಾಗಿ ಶ್ರೀರಂಗನಾಥ ಸ್ವಾಮಿ ದೇವಾಲಯ ಮುಂಭಾಗ 2 ಬೃಹತ್ ವೃತ್ತಗಳಲ್ಲಿ ವರ್ಣರಂಜಿತ ದೀಪಗಳ ಅಲಂಕಾರ ಮಾಡಲಾಗಿದೆ. ಮುಂದಿನ ಎರಡೂ ಬದಿಗಳಲ್ಲಿ ಕಂಬಗಳ 10 ಸಾಲುಗಳು ಹಾಗೂ ನೆಲದ ಮೇಲೆ 8 ಸಾಲುಗಳಲ್ಲಿ ದೀಪಗಳನ್ನು ಇಡಲು ದಬ್ಬೆಗಳ ಸಹಾಯದಿಂದ ಅಟ್ಟಣಿಗಳನ್ನು ಕಟ್ಟಲಾಗಿದೆ.

ದೀಪಗಳನ್ನು ಸಾಲಾಗಿ ಜೋಡಿಸಲು ಅವಶ್ಯವಿರುವ ಹಸುವಿನ ಸಗಣಿ ಸಂಗ್ರಹಿಸಿದ್ದು, ಭಕ್ತರು, ಹಾಗೂ ಪುರಜನರು ಲಕ್ಷಗಟ್ಟಲೆ ದೀಪಗಳನ್ನು ಹಾಗೂ ಅದಕ್ಕೆ ಬೇಕಾಗುವ 70 ಟನ್ ದೀಪದ ಎಣ್ಣೆಯನ್ನು ತರಲಾಗಿದೆ.

ಈ ದೀಪಗಳನ್ನು ಸಾಲಾಗಿ ಜೋಡಿಸುವ ಹಾಗೂ ಎಣ್ಣೆ ಹಾಕುವ ಪ್ರಕ್ರಿಯೆ ಮತ್ತು ನಿರ್ವಹಣಿಗೆ ಲಕ್ಷ ದೀಪೋತ್ಸವ ಸಮಿತಿಯ ಸದಸ್ಯರು, ಅಭಿನವ ಭಾರತ್, ವಿದ್ಯಾ ಭಾರತಿ, ಚೈತನ್ಯ ದಳ ಹಾಗೂ ಪಟ್ಟಣದ ಒಟ್ಟು 100 ಸ್ವಯಂಸೇವಕರ ತಂಡ ಪಾಲ್ಗೊಳ್ಳುತ್ತಿದೆ. ಸಂಕ್ರಾಂತಿ ‘ದಿನದ ಸಂಜೆ ಗೋಧೂಳಿ ಲಗ್ನದಲ್ಲಿ ಪ್ರಥಮವಾಗಿ ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ಹಾಗೂ ವೇದಬ್ರಹ್ಮ ಡಾ.ಭಾನು ಪ್ರಕಾಶ್‌ ಶರ್ಮ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಪಠಣ ದೊಂದಿಗೆ, ವೈಕುಂಠ ದ್ವಾರ ತೆರೆದು ಬಳಿಕ ಸ್ವಾಮಿಗೆ ನವನೀತ ಅಲಂಕಾರ ಅರ್ಪಿಸಿ ದೀಪ ಬೆಳಗಲು ಚಾಲನೆ ನೀಡಲಾಗುವುದು.

nudikarnataka.com

ಪ್ರತಿವರ್ಷ ಮಕರ ಸಂಕಾಂತಿ ಹಬ್ಬದ ದಿನದಂದು ಶ್ರೀರಂಗನಾಥಸ್ವಾಮಿಯ 16 ಅಡಿ ಶೇಷಶಯನ ಮೂರ್ತಿಗೆ ದೇವಾಲಯದಲ್ಲಿ ಸುಗಂಧ ದ್ರವ್ಯಗಳ ಅಭಿಷೇಕಗಳೊಂದಿಗೆ ಸಂಪೂರ್ಣ ಬೆಣ್ಣೆ ಅಲಂಕಾರಗೊಳಿಸಿ ವಿಶೇಷ ಪೂಜೆ ಪಾರ್ಥನೆಯೊಂದಿಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಜತೆಗೆ ಶ್ರೀ ನಾರಾಯಣನ ದರ್ಶನಕ್ಕಾಗಿ ವರ್ಷಕ್ಕೊಮ್ಮೆ ವೈಕುಂಠ ದ್ವಾರವನ್ನು ತೆರೆದು ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಹಿನ್ನಲೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ರಾಜ್ಯದ ವಿವಿಧ ಭಾಗಗಳ ಲಕ್ಷಾಂತರ ಜನರು ಮತ್ತು ಭಕ್ತರು ಆಗಮಿಸಿ ಕಾವೇರಿಯಲ್ಲಿ ಮಿಂದು ಶ್ರೀ ಆದಿರಂಗನ ದರ್ಶನ ಪಡೆದು ಪ್ರಾರ್ಥಿಸುತ್ತಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!