ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಶ್ರೀರಂಗಪಟ್ಟಣ ತಾಲ್ಲೂಕಿನಾದ್ಯಂತ ಅಪಾರ ಪ್ರಮಾಣದ ನಷ್ಟವಾಗಿದೆ.
ಎಡೆಬಿಡದೆ ಸುರಿದ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದು ಜಮೀನಿಗೆ ನುಗ್ಗಿದ್ದರಿಂದ ಭತ್ತ,ಕಬ್ಬು ಬೆಳೆಗಳು ಜಲಾವೃತವಾಗಿದ್ದು ರೈತರು ಕಂಗಾಲಾಗಿದ್ದಾರೆ.ಕೆರೆ ಕಟ್ಟೆಗಳು ಭರ್ತಿಯಾಗಿ ಕೆರೆ ಕೋಡಿ ಬಿದ್ದು ರೈತರ ಬೆಳೆ ನಾಶವಾಗಿದೆ.
ಮಳೆಯ ಅವಾಂತರದಿಂದ ತಾಲೂಕಿನ ಚಿನ್ನಗಿರಿ ಕೊಪ್ಪಲು ಗ್ರಾಮದ ಬಳಿ ಲೋಕಪಾವನಿ ನದಿ ಉಕ್ಕಿ ಹರಿದ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿ ತೆಂಗಿನ ಮರಗಳು ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳು ಸಹ ಕೊಚ್ಚಿ ಹೋಗಿ ಅಪಾರ ನಷ್ಟವಾಗಿದೆ.
ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಮಳೆಯಿಂದಾಗಿ ಕುಸಿದಿದೆ. ಚಿಕ್ಕ ತಿಮ್ಮೇಗೌಡರ ಮಗ ರುಕ್ಮಾಂಗದ ಅವರು ತಮ್ಮ ಆಟೋವನ್ನು ಶಾಲೆಯ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಪರಿಣಾಮ ಗೋಡೆ ಕುಸಿದು ಬಿದ್ದು ಆಟೋವ ಸಂಪೂರ್ಣ ಜಖಂಗೊಂಡಿದೆ.
ಮನೆ ಕುಸಿತ :
ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ರಾಮಚಂದ್ರು ಹಾಗೂ ಮುಂಡುಗದೊರೆ ಗ್ರಾಮದ ಸುಂದರಮ್ಮ ಎಂಬುವವರ ಮನೆ ಕುಸಿದು ಬಿದ್ದಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಇವರಿಬ್ಬರು ಸೂಕ್ತ ಪರಿಹಾರ ನೀಡುವಂತೆ ತಾಲೂಕು ಆಡಳಿತದ ಅಧಿಕಾರಿಗಳನ್ನ ಒತ್ತಾಯಿಸಿದ್ದಾರೆ.
ಶೀಘ್ರ ಪರಿಹಾರ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಾದ್ಯಂತ ಒಟ್ಟು 70ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಈಗಾಗಲೇ 42 ಮನೆಗಳಿಗೆ ಪರಿಹಾರ ನೀಡಲಾಗಿದ್ದು, ಉಳಿದ ೩೦ಕ್ಕೂ ಹೆಚ್ಚು ಮನೆಗಳ ಪರಿಹಾರಕ್ಕೆ ಸ್ಥಳೀಯ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ವರದಿ ಆಧಾರದ ಮೇಲೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ನೀಡುವುದಾಗಿ ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ತಿಳಿಸಿದ್ದಾರೆ.
ಅರೆಕೆರೆ ಗ್ರಾಮದಿಂದ *ಮುಳುಗಿದ ಸೇತುವೆ* ಬಳ್ಳೆಕೆರೆ ಸಂಪರ್ಕ ಸೇತುವೆ ಮಳೆಯಿಂದಾಗಿ ಮುಳುಗಡೆಯಾಗಿದೆ. ರಾತ್ರಿ ಸುರಿದ ಭಾರೀ ಮಳೆಯಿಂದ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಬಳ್ಳೆಕೆರೆ ಸಂಪರ್ಕ ಸೇತುವೆ ಮುಳುಗಡೆಯಾಗಿ ಜನ, ಜಾನುವಾರುಗಳ ಸಂಪರ್ಕ ಕಡಿತವಾಗಿದೆ.
ತಾಲೂಕಿನ ಚಿಕ್ಕಪಾಳ್ಯ ಗ್ರಾಮದ ಬಿ.ನಾರಾಯಣ್ ಎಂಬುವರ ಜಮೀನಿನ ಮೂಲಕ ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟ ಸಂಭವಿಸಿದೆ.
ಮಳೆ ನೀರು ಹಾಗೂ ಸಿಡಿಎಸ್ ನಾಲೆ ನೀರಿನ ಪ್ರವಾಹ ಹೆಚ್ಚಾಗಿ ಸಿಡಿಎಸ್ ನಾಲೆಯ ಬಿಡುಗಂಡಿ ಕಿರುನಾಲೆ ಮೂಲಕ ಭಾರೀ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿ ಭತ್ತ, ಕಬ್ಬು, ತರಕಾರಿ ಸೇರಿದಂತೆ ಹೂವಿನ ಬೆಳೆಗಳು ನೀರಲ್ಲಿ ಕೊಚ್ಚಿಹೋಗಿ ಅಪಾರ ಪ್ರಮಾಣ ನಷ್ಟ ಉಂಟಾಗಿದೆ.
ನೀರಾವರಿ ಇಲಾಖೆ ಅಧಿಕಾರಿಗಳು ಮಳೆ ಬೀಳುತ್ತಿದ್ದರೂ ನಾಲೆ ನೀರು ಸ್ಥಗಿತ ಗೊಳಿಸದಿರುವುದು ಈ ಅವಘಡಕ್ಕೆ ಕಾರಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ನಷ್ಟಕ್ಕೊಳಗಾಗಿರುವ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.