Friday, September 20, 2024

ಪ್ರಾಯೋಗಿಕ ಆವೃತ್ತಿ

ಭಾರತದಲ್ಲಿ ಹಸಿವಿನಿಂದ ಜನರು ಸಾಯುತ್ತಿರುವುದು ದುರಂತದ ಸಂಗತಿ

ಅಭಿವೃದ್ದಿ ಹೊಂದುತ್ತಿರುವ ಭಾರತದಲ್ಲಿ ಇಂದಿಗೂ ಜನರು ಹಸಿವಿನಿಂದ ಸಾಯುತ್ತಿರುವುದು ದುರಂತದ ಸಂಗತಿ ಎಂದು ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ವಿಷಾದ ವ್ಯಕ್ತಪಡಿಸಿದರು. ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದ ಆವರಣದಲ್ಲಿ ನಡೆದ ಕೃಷಿ ಕೂಲಿಕಾರರ 8 ನೇ ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿಗೂ ನಮ್ಮ ದೇಶದಲ್ಲಿ ಹಸಿವಿನಿಂದ ಜನರು ಸಾಯುತ್ತಿದ್ದಾರೆಂದು ನ್ಯಾಯಾಧೀಶರೇ ಕಳವಳ ವ್ಯಕ್ತಪಡಿಸಿದ್ದಾರೆ. ದೇಶ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಜನರು ಹಸಿವಿನಿಂದ ಸಾವನ್ನಪ್ಪುತ್ತಿರುವುದು ಸರ್ಕಾರಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಜನರು ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ಇರುವುದು ದೇಶದ ದಾರುಣತೆಗೆ ಸಾಕ್ಷಿಯಾಗಿದೆ ಎಂದರು.

ಸ್ವಾತಂತ್ರ್ಯ ಬಂದು 7⅝ ವರ್ಷವಾದರೂ ಶ್ರೀಮಂತರಿಗೆ ಸಿಗುವಷ್ಟು ಸೌಲಭ್ಯಗಳು ಬಡವರಿಗೆ ಸಿಗುತ್ತಿಲ್ಲ.ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಉಳ್ಳವರ ಪರವಾಗಿಯೇ ಕೆಲಸ ಮಾಡುತ್ತಿದೆ. ಬಂಡವಾಳ ಶಾಹಿಗಳ ಪರವಾಗಿ ನಿಲ್ಲುವ ಸರಕಾರದಿಂದ ನ್ಯಾಯ ಸಿಗುತ್ತದೆ ಎನ್ನುವುದು ಭ್ರಮೆಯಾಗಿದೆ ಎಂದರು.

ಸರ್ಕಾರಿ ಭೂಮಿಯನ್ನು ತಮಗೆ ಬೇಕಾದ ಆರ್‌ಎಸ್‌ಎಸ್ ಸಂಬಂಧಿತ ಸಂಸ್ಥೆಗಳಿಗೆ ದಾನ ಮಾಡಲು ಬಿಜೆಪಿ ಹೊರಟಿದೆ. ಸಾವಿರಾರು ಬಡ ಕುಟುಂಬಗಳಿಗೆ ಇಂದಿಗೂ ಸ್ವಂತ ನಿವೇಶನ ಇಲ್ಲ. ಕೂಲಿ ಕಾರ್ಮಿಕರು, ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ.ಆದರೆ ಶ್ರೀಮಂತರ ಲೆಕ್ಕಹಾಕಿಕೊಂಡಿರುವ ಕೇಂದ್ರ ಸರ್ಕಾರ ದೇಶ ಅಭಿವೃದ್ದಿ ಹೊಂದಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳು ಕೂಲಿಕಾರರ ಸಮಸ್ಯೆಗಳನ್ನು ನಿವಾರಿಸಲು ಮನಸ್ಸು ಕೂಡ ಮಾಡಿಲ್ಲ.ಕೃಷಿ ಕೂಲಿಕಾರರ ಕೂಲಿ ಹೆಚ್ಚಳ, ಪಿಂಚಣಿ ನೀಡಬೇಕು. ವಾರದ ರಜೆ ಸಿಗಬೇಕು ಸೇರಿದಂತೆ 28 ಬೇಡಿಕೆಗಳನ್ನು ಈಡೇರಿಸಬೇಕೆಂದು ದೇಶದ್ಯಾಂತ ಆಗಸ್ಟ್ 1ರಂದು ರಾಜ್ಯಾದ್ಯಂತ ಸಾವಿರಾರು ಕೂಲಿಕಾರರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ದಡದಪುರ ಶಿವಣ್ಣ ಮಾತನಾಡಿ, ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಬಡವರ,ಕೂಲಿಕಾರರ ಕೂಗು ಕೇಳಿಸುವುದಿಲ್ಲ, ದಪ್ಪ ಚರ್ಮದ ಸರ್ಕಾರವಾಗಿರುವ ಬಿಜೆಪಿ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡದೆ ದೇಶವನ್ನು ಸಾಲದ ಶೂಲದಲ್ಲಿ ಸಿಲುಕಿಸುತ್ತಿದೆ ಎಂದು ಕಿಡಿಕಾರಿದರು.

ಸಾರ್ವಜನಿಕರಲ್ಲಿ ರಾಜಕೀಯ ಪ್ರಜ್ಞೆ ಇಲ್ಲದಿರುವುದುರಿಂದ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವಲ್ಲಿ ವಿಫಲರಾಗುತ್ತಿದ್ದೇವೆ. ಧರ್ಮ ಮತ್ತು ಜಾತಿ ಹೆಸರಿನಲ್ಲಿ ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ಪ್ರತಿಯೊಬ್ಬರೂ ಜಾಗೃತರಾಗಿ, ಬಡವರನ್ನು ನಿರ್ಲಕ್ಷಿಸುತ್ತಿರುವವರಿಗೆ ಬುದ್ದಿ ಕಲಿಸಬೇಕೆಂದು ಕರೆ ನೀಡಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಡವರಿಗೆ ಅನ್ನಭಾಗ್ಯ, ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೊಟ್ಟಿತ್ತು, ಬಡವರ ಪರವಾದ ಅಪಾರ ಕಾಳಜಿ ಹೊಂದಿರುವ ಸಿದ್ದರಾಮಯ್ಯವರು ಬಡವರ ಪರವಾಗಿ ನಿರಂತರವಾಗಿ ಸೇವೆ ಮಾಡಿದ್ದಾರೆ, ಇಂತಹ ನಾಯಕರ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನಾ ತಾಲ್ಲೂಕು ಪಂಚಾಯಿತಿಯಿಂದ ಸಾವಿರಾರು ಕೃಷಿ ಕೂಲಿಕಾರರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜಾಥ ನಡೆಸಿದರು. ವೇದಿಕೆಯಲ್ಲಿ ಮುಖಂಡರಾದ ಹನುಮೇಗೌಡ, ಜಿಲ್ಲಾಧ್ಯಕ್ಷ ಪುಟ್ಟಮಾದು, ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ, ಕೃಷ್ಣೇಗೌಡ, ಹನುಮೇಶ್, ದ್ಯಾಪೇಗೌಡ, ಬಸವರಾಜು, ಸುರೇಂದ್ರ, ಶುಭವತಿ, ಕೃಷ್ಣ ,ಭರತ್‌ರಾಜ್, ಮಹದೇವಮ್ಮ, ಕುಮಾರಿ, ದೊಡ್ಡ ಮರೀಗೌಡ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!