ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಗ್ರಾಮ ಪಂಚಾಯಿತಿ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ನಿಗದಿಪಡಿಸುವಂತೆ ಒತ್ತಾಯಿಸಿ ಫೆ.14ರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟ ಮುಷ್ಕರ ಆರಂಭಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ನಿರಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರಕಾರಿ ನೌಕರರನ್ನಾಗಿ ಘೋಷಿಸಬೇಕು. ಈಗಿನ ದಿನಿತ್ಯದ ಬಳಸುವ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ 25,000 ನಿಗಧಿಗೊಳಿಸಬೇಕು. ಗ್ರಾಮ ಪಂಚಾಯತ್ಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ, ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ 6,000 ರೂ. ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಗ್ರಾಮ ಪಂಚಾಯತ್ಗಳಿಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತ, ಆದರೆ ಈಗಾಗಲೇ ಗ್ರಾಮ ಪಂಚಾಯತ್ಗಳಲ್ಲಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್ ಗಳನ್ನು ನೇಮಕ ಮಾಡಿಕೊಂಡು ಮುಂದುವರೆಸಬೇಕು. ಅಲ್ಲದೇ ಈಗಾಗಲೇ ಗ್ರಾಮ ಪಂಚಾಯತ್ಗಳಲ್ಲಿ ಕೆಲಸ ನಿರ್ವಹಿಸುವ ನೌಕರರು ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದ್ದರೆ ಅವರಿಗೆ ಅವಕಾಶ ನೀಡಬೇಕು. 31.10.2017ಕ್ಕಿಂತ ಮುಂಚಿತವಾಗಿ ನೇಮಕಗೊಂಡು (ಜಿಲ್ಲಾ ಪಂಚಾಯತ್ ಅನುಮೋದನೆ ಇಲ್ಲದೆ) ಮರಣ ಹೊಂದಿದ ಕುಟುಂಬಕ್ಕೆ ಅನುಕಂಪದ ನೌಕರಿ ನೀಡಬೇಕು. 31.10.2017 ಕ್ಕೆ ಮುಂಚಿತವಾಗಿ ನೇಮಕಗೊಂಡ ನೌಕರರಿಗೆ ಜಿಲ್ಲಾ ಪಂಚಾಯತ್ಗಳಿಂದ ಏಕಕಾಲಕ್ಕೆ ಅನುಮೋದನೆ ನೀಡಬೇಕು, ಅದರಲ್ಲಿ ಜವಾನ, ಸ್ವಚ್ಛತಾಗಾರರ, ನೀರಗಂಟಿಗಳಿಗೆ ವಿದ್ಯಾರ್ಹತೆ ಕೈಬಿಟ್ಟು, ನಿರ್ಣಯ, ವೇತನ, ಹಾಜರಾತಿ ಆಧಾರದಲ್ಲಿಅನುಮೋದನೆ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿದಿನ ಧ್ವಜಾರೋಹಣ ಮಾಡುವುದಕ್ಕೆ ಭತ್ಯೆ ದಿನಕ್ಕೆ 30 ರೂ. ಇರುವುದನ್ನೂ ರೂ. 60ಕ್ಕೆ ಏರಿಸಬೇಕೆಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಗ್ರಾಮ ಪಂಚಾಯತ್ ನೌಕರರಿಗೆ ಬಯೋಮೆಟ್ರಿಕ್ ಸಹಿ ಕಡ್ಡಾಯಗೊಳಿಸಿರುವುನ್ನು ಕೈಬಿಡಬೇಕು. ಗ್ರಾಮ ಪಂಚಾಯತ್ಗಳಲ್ಲಿ ನೀರಗಂಟಿಗಳು ಬೇರೆ ಬೇರೆ ಹಳ್ಳಿಗಳಿಂದ ಸರಿಯಾದ ಸಮಯಕ್ಕೆ ಬರಲು ಆಗದಿರುವ ಕಾರಣ, ನೀರಗಂಟೆಗಳಿಗೆ ಮಲ್ಟಿ ಪರ್ಪಸ್ ಎಂದು ಇರುವುದನ್ನು ಕೈಬಿಟ್ಟು, ನಿರ್ದಿಷ್ಟವಾದ ಕೆಲಸಗಳನ್ನು ನಿಗದಿ ಪಡಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಗಾಮ ಪಂಚಾಯಿತಿಗಳಲ್ಲಿ ಸಾಲಪ್ಪ ವರದಿಯಂತೆ ಸ್ವಚ್ಛತಾಗಾರರ ಹುದ್ದೆ ಸೂಚಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯತ್ಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಜಿಸಬೇಕು. ಗ್ರೇಡ್-1 ಕಾರ್ಯದರ್ಶಿ ಹುದ್ದೆಗಳಿಗೆ ಶೇ. 100 ರಷ್ಟು ಸ್ಥಾನಗಳನ್ನು ಗ್ರೇಡ್ -2 ಕಾರ್ಯದರ್ಶಿಗಳಿಗೆ ಶೇ. 50ರಷ್ಟು ದ್ವಿ.ದ.ಲೆಕ್ಕೆ ಸಹಾಯಕ ಹುದ್ದೆಗೆ ಶೇ. 50 ರಷ್ಟು ಸ್ಥಾನಗಳನ್ನು ಬಡ್ತಿ ನೀಡಬೇಕು. ಗ್ರೇಡ್-1 ಪಂಚಾಯತ್ಗಳನ್ನು ಜನಸಂಖ್ಯೆ ಆಧರಿಸಿ ಗ್ರಾಮ ಪಂಚಾಯತ್ಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಶೇ. 60 ರಷ್ಟು ಸ್ಥಾನವನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡಬೇಕೆಂದು ಆಗ್ರಹಿಸಿ ಮುಷ್ಕರ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮುಖಂಡರಾದ ಎಂ.ಎಂ.ಶಿವಕುಮಾರ್, ಬಸವರಾಜು, ರಮೇಶ್, ಆನಂದ್ ಉಪಸ್ಥಿತರಿದ್ದರು.




