Saturday, May 18, 2024

ಪ್ರಾಯೋಗಿಕ ಆವೃತ್ತಿ

ಕಮಲ ಹಿಡಿಯಲು ಸಜ್ಜಾದ ಸಚ್ಚಿದಾನಂದ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ 2023ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವ ಯುವನಾಯಕ ಇಂಡುವಾಳು ಸಚ್ಚಿದಾನಂದ ಇದೇ ತಿಂಗಳ 28ರಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಆ ಮೂಲಕ ಸಚ್ಚಿದಾನಂದ ಸ್ಪರ್ಧಿಸುವುದು ಈ ಬಾರಿ 100 % ಖಚಿತವಾಗಿದೆ.

ಏಕೆಂದರೆ ಈ ಹಿಂದಿನ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನನಗೆ ಸಿಗುತ್ತದೆ, ನಾನು ಸ್ಪರ್ಧಿಸುವುದು ಖಚಿತ ಎನ್ನುತ್ತಿದ್ದ ಸಚ್ಚಿದಾನಂದನಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಗೆ ಚುನಾವಣೆ ಮಾಡಬೇಕಾದ ಸಂದರ್ಭ ಸೃಷ್ಟಿಯಾಗುತ್ತಿತ್ತು. ಇದರಿಂದ ಕ್ಷೇತ್ರದ ಜನರಲ್ಲೂ ಕೂಡ ಸಚ್ಚಿದಾನಂದ ಸ್ಪರ್ಧೆ ಎಂದರೆ ಈತ ಕೊನೆ ಗಳಿಗೆಯಲ್ಲಿ ಪಕ್ಷದ ನಾಯಕರ ರಾಜಿ,ಸಂಧಾನಕ್ಕೆ ಕಟ್ಟುಬಿದ್ದು ಸುಮ್ಮನಾಗುತ್ತಾನೆ ಎಂಬ ಮಾತು ಚಾಲ್ತಿಯಲ್ಲಿತ್ತು.

ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಸಿದ್ಧನಾಗಿದ್ದ ಸಚ್ಚಿದಾನಂದ, ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದ ರಮೇಶ್ ಬಾಬು ಬಂಡಿಸಿದ್ದೇಗೌಡರಿಗೆ ಜಾಗ ಬಿಟ್ಟು ಕೊಡಬೇಕಾಯಿತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಅಪ್ಪಣೆಯಂತೆ ರಮೇಶ್ ಬಾಬು ಪರ ಕೆಲಸವನ್ನೂ ಮಾಡಬೇಕಾಯಿತು. ಆದರೆ ಜೆಡಿಎಸ್ ಪಕ್ಷದ ಅಲೆಯಲ್ಲಿ ರಮೇಶ್ ಬಾಬು ಕೊಚ್ಚಿಕೊಂಡು ಹೋದರು.ಸಚ್ಚಿದಾನಂದ ಮತ್ತೆ ಅತಂತ್ರರಾಗ ಬೇಕಾಯಿತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡದ ಸಚ್ಚಿದಾನಂದ ತನ್ನ ರಾಜಕೀಯ ಗುರು ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಪರವಾಗಿ ಬಹಿರಂಗವಾಗಿಯೇ ಚುನಾವಣಾ ಪ್ರಚಾರ ನಡೆಸಿದರು. ಸುಮಲತಾ ಅವರು ಗೆದ್ದು ಸಂಸದೆಯಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಚ್ಚಿದಾನಂದನನ್ನು ಉಚ್ಚಾಟನೆ ಮಾಡಿತು.

ಸಾಮಾಜಿಕ ಸೇವೆ

ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯಾದ ನಂತರ ಶ್ರೀರಂಗಪಟ್ಟಣ ಕ್ಷೇತ್ರದಿಂದ 2023 ರ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಜನರು ನನ್ನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತಿಳಿದ ಸಚ್ಚಿದಾನಂದಗೆ ಭವಿಷ್ಯದ ರಾಜಕೀಯ ಅಳಿವು-ಉಳಿವಿನ ಪ್ರಶ್ನೆ ಎದುರಾಯಿತು.

ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದರಿಂದ ಒಂದಷ್ಟು ಅನುಯಾಯಿಗಳಿದ್ದರು.ಅವರನ್ನು ಕಟ್ಟಿಕೊಂಡು ಹೊಸ ಪಡೆಯನ್ನು ಸೃಷ್ಟಿಸಿಕೊಂಡ ಸಚ್ಚಿದಾನಂದ ತಮ್ಮ ತಂದೆ ಎನ್. ಶಂಕರೇಗೌಡ ಅವರ ಸ್ಮರಣಾರ್ಥ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿಕೊಂಡು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜನರಿಗೆ ಮತ್ತಷ್ಟು ಹತ್ತಿರವಾದರು.

ಆರೋಗ್ಯ ಶಿಬಿರ ಏರ್ಪಡಿಸಿ ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ಕೊಡಿಸಿದ್ದು,ದೇವಸ್ಥಾನಗಳಿಗೆ ಜೀರ್ಣೋದ್ಧಾರಕ್ಕೆ ಹಣ,ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ, ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದರು.

ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಸಚ್ಚಿದಾನಂದ ರೈತರಿಂದ ತರಕಾರಿಯನ್ನು ಕೊಂಡು ರೈತನಿಗೆ ವ್ಯಾಪಾರವಾಗುವ ಹಾಗೆ ಮಾಡಿದ್ದಲ್ಲದೆ, ಆರ್ಥಿಕವಾಗಿ ಕುಗ್ಗಿದ್ದ ಜನರಿಗೂ ತರಕಾರಿ ವಿತರಿಸಿದ್ದು ಒಳ್ಳೆಯ ಕಾರ್ಯವಾಗಿತ್ತು. ಕ್ಷೇತ್ರದ ಜನರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಲ್ಲದೆ,ಔಷಧಗಳ ಕಿಟ್, ಸ್ಯಾನಿಟೈಸರ್ ಮುಂತಾದ ವಸ್ತುಗಳನ್ನು ಆರೋಗ್ಯ ಕಾರ್ಯಕರ್ತರಿಗೆ ವಿತರಿಸಿ,ಆರ್ಥಿಕ ನೆರವನ್ನು ನೀಡಿದರು.ಇವೆಲ್ಲವೂ ಸಚ್ಚಿದಾನಂದ ಈ ಬಾರಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಕ್ಷೇತ್ರದ ಜನರು ಭಾವಿಸುವಂತಾಯಿತು.

ಬಿಜೆಪಿ ಸೇರ್ಪಡೆಗೆ ಸಿದ್ಧತೆ
ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವುದಕ್ಕಿಂತ ಒಂದು ಪಕ್ಷದಿಂದ ಸ್ಪರ್ಧಿಸಿದರೆ ಆ ಪಕ್ಷದ ಒಂದಷ್ಟು ಮತಗಳು ಇದ್ದೇ ಇರುತ್ತದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಬಿಜೆಪಿಯತ್ತ ಮುಖ ಮಾಡಿದ ಸಚ್ಚಿದಾನಂದ ಬಿಜೆಪಿ ನಾಯಕರೊಡನೆ ಹಲವು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾದ ಆರ್.ಅಶೋಕ್, ಅಶ್ವಥ್ ನಾರಾಯಣ್, ಗೋಪಾಲಯ್ಯ, ಕೆ.ಸಿ. ನಾರಾಯಣಗೌಡ,ಬಿ.ಸಿ. ಪಾಟೀಲ್ ಸೇರಿದಂತೆ ಹಲವರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಸಚ್ಚಿದಾನಂದ ಸರ್ಕಾರದ ಮಟ್ಟದಲ್ಲಿ ಕ್ಷೇತ್ರದ ಕೆಲಸಗಳನ್ನು ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ನವೆಂಬರ್ 19ರಂದು ಶ್ರೀರಂಗಪಟ್ಟಣದಲ್ಲಿ ಅಂಬಿ ಸ್ಮರಣೆ ಹಾಗೂ ಕನ್ನಡ ಹಬ್ಬ ಕಾರ್ಯಕ್ರಮ ನಡೆಸಿ ಚಿತ್ರರಂಗದ ಖ್ಯಾತ ನಟರಾದ ದರ್ಶನ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ರಚಿತಾ ರಾಮ್ ಮತ್ತಿತರರನ್ನು ಕರೆತಂದು ಸಾಂಸ್ಕೃತಿಕವಾಗಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಸದೆ ಸುಮಲತಾ ಅಂಬರೀಶ್, ನಟ ದರ್ಶನ್ ಸಚ್ಚಿದಾನಂದನಿಗೆ ಈ ಬಾರಿ ಜನ ಆಶೀರ್ವಾದ ಮಾಡಿದರೆ ಮತ್ತಷ್ಟು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ. ಅವರ ಮಾವ ಕಾಂಗ್ರೆಸ್ ಪಕ್ಷದ ಲಿಂಗರಾಜು, ಭಾಮೈದ ದರ್ಶನ್ ಲಿಂಗರಾಜು ಕೂಡ ಸಚ್ಚಿದಾನಂದ ಬೆಂಬಲಕ್ಕೆ ನಿಂತಿದ್ದಾರೆ.

ಒಟ್ಟಾರೆ ಇದೇ 28ರಂದು ಸಚ್ಚಿದಾನಂದ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದು,ಈ ಬಾರಿಯ ಚುನಾವಣಾ ಕಣ ರಂಗೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!