Friday, September 20, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಸಂಪಾದಕರ ಅಸ್ತಿತ್ವಕ್ಕಾಗಿ ಹೋರಾಟ- ಮಂಜುಳಾ ಕಿರುಗಾವಲು

ಕರ್ನಾಟಕ ರಾಜ್ಯದ ಗಡಿಭಾಗಗಳು ಸೇರಿದಂತೆ ಎಲ್ಲಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಂಪಾದಕತ್ವದ ಪತ್ರಿಕೆಗಳು ಸಂಕಷ್ಟದಲ್ಲಿದ್ದು ನ್ಯಾಯಯುತವಾಗಿ ದೊರೆಯಬೇಕಾದ ಹಕ್ಕುಗಳಿಗಾಗಿ ಹೋರಾಟ ನಡೆಸಲು ನೂತನವಾಗಿ ರಾಜ್ಯ ಮಹಿಳಾ ಸಂಪಾದಕರ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಮಂಜುಳಾ ಕಿರುಗಾವಲು ಹೇಳಿದರು.

ಬೆಂಗಳೂರಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾನೂನು ಬದ್ಧವಾಗಿ ರಚಿಸಲಾಗಿರುವ ಟ್ರಸ್ಟ್‌ನ ಪ್ರಥಮ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಸ್ವಾತಂತ್ರ್ಯ, ಸಮಾನತೆ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿರುವ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರಿಗೆ ದೊರೆಯಬೇಕಾದ ಸಂವಿಧಾನಾತ್ಮಕ ಹಕ್ಕುಗಳು ಇನ್ನೂ ಜಾರಿಯಾಗದಿರುವುದು ವಿಷಾದನೀಯ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗದಲ್ಲಿ ಮಹಿಳೆಯರು ನಿರ್ಭಯವಾಗಿ ಕಾರ್ಯನಿರ್ವಹಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಸರ್ಕಾರ ಮಹಿಳೆಯರಿಗೆ ದೊರೆಯಬೇಕಾದ ಹಕ್ಕುಗಳನ್ನು ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸಬಾರದು. ಮಹಿಳಾ ಪತ್ರಕರ್ತರಿಗೆ ವಿಶೇಷ ಮನ್ನಣೆ ನೀಡಿ ಪತ್ರಿಕೋದ್ಯಮದಲ್ಲಿ ಗಟ್ಟಿಯಾಗಿ ನೆಲೆಗೊಳ್ಳಲು ಕಾನೂನಾತ್ಮಕ ಅವಕಾಶ ಕಲ್ಪಿಸಬೇಕು.  ಈ ಬಗ್ಗೆ ರಾಜ್ಯಾದ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಂಪಾದಕರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು ಎಂದರು.

ಪದಾಧಿಕಾರಿಗಳು

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಮಹಿಳಾ ಸಂಪಾದಕರ ಟ್ರಸ್ಟ್ ಗೌರವಾಧ್ಯಕ್ಷರಾಗಿ ಹಾಸನ ಜಿಲ್ಲೆಯ ಹಿರಿಯ ಸಂಪಾದಕಿ ಲೀಲಾವತಿ, ಮಂಜುಳಾ ಕಿರುಗಾವಲು ಅಧ್ಯಕ್ಷೆ, ಉಪಾಧ್ಯಕ್ಷರಾಗಿ ವಿಜಯಪುರದ ಲಕ್ಷ್ಮಿ ಎಸ್.ವಾಲೀಕರ್, ಪ್ರಧಾನಕಾರ್ಯದರ್ಶಿಯಾಗಿ ಮಂಡ್ಯಜಿಲ್ಲೆಯ ಬಿ.ಕೆ.ಅರುಣಜ್ಯೋತಿ,  ಸಂಘಟನಾ ಕಾರ್ಯದರ್ಶಿಯಾಗಿ ಗಡಿಜಿಲ್ಲೆ ಚಾಮರಾಜನಗರದ ಸವಿತಾ ಜಯಂತ್ ಹಾಗೂ ಖಜಾಂಚಿಯಾಗಿ ರಾಮನಗರ ಪಿ.ಸುಧಾರಾಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!