Saturday, November 21, 2026

ಪ್ರಾಯೋಗಿಕ ಆವೃತ್ತಿ

ರೈತ ಪರವಾಗಿ ಹೋರಾಟಗಳು ಸಜ್ಜುಗೊಳ್ಳಬೇಕಿದೆ : ಡಾ. ವಾಸು ಎಚ್.ವಿ

ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧವಾಗಿ ನಡೆಸಿದ ಹೋರಾಟದ ರೀತಿಯಲ್ಲಿ ರೈತರ ಪರವಾಗಿ ಹೋರಾಟಗಳು ಸಜ್ಜುಗೊಳ್ಳಬೇಕಿದೆ, ಅಷ್ಟೇ ಅಲ್ಲದೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಶಾಸನಗಳನ್ನು ಬದಲಿಸುವ, ಬರೆಯುವ ಸ್ಥಾನದಲ್ಲಿರುವ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಂಶವನ್ನು ಮನದಟ್ಟು ಮಾಡುವ ಕೆಲಸ ರೈತರಿಂದಲೇ ಆಗಬೇಕಿದೆ ಎಂದು ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಡಾ. ವಾಸು ಹೆಚ್.ವಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದ ‘ಭತ್ತ ವೈವಿಧ್ಯ ಕೇಂದ್ರ’ದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ‘ಸಂಘಟನೆ ಮತ್ತು ಅಭಿವೃದ್ಧಿಗೆ ರಾಜಕೀಯದ ಹೊಸ ದಾರಿಗಳು’ ಎಂಬ ವಿಷಯ ಕುರಿತು ವಿಚಾರ ಮಂಡಿಸಿದರು.

ಹೋರಾಟದ ಸ್ವರೂಪ ಬದಲು

20ನೇ ಶತಮಾನದಲ್ಲಿದ್ದ ಸಂಘಟನೆ, ಚಳುವಳಿ ಹಾಗೂ ಹೋರಾಟದ ಸ್ವರೂಪ ಇತ್ತೀಚಿನ ದಿನಗಳಲ್ಲಿ ಬದಲಾಗಿದ್ದು, ಮತ್ತೊಬ್ಬರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವೇಕೆ ಭಾಗಿಯಾಗಬೇಕು ಎಂಬ ಮನಸ್ಥಿತಿ ಹೆಚ್ಚಾಗಿದೆ.  ಇನ್ನು ಧರಣಿ, ಪ್ರತಿಭಟನೆಗಳ ಬಗ್ಗೆ ಇತರ ಸಾರ್ವಜನಿಕರು ತಲೆಕೆಡಿಸಿಕೊಳ್ಳುವ ಸ್ಥಿತಿ ಈಗಿಲ್ಲ.  ರಾಜಕೀಯ ಪಕ್ಷಗಳು ಅಧಿಕಾರದಲ್ಲಿರುವವರು ಧರಣಿ ಪ್ರತಿಭಟನೆಗಳು ನಡೆಯದಂತೆ ಸಮಸ್ಯೆಗಳನ್ನು ಬಗೆಹರಿಸಬೇಕಾದವರು, ಧರಣಿ ಪ್ರತಿಭಟನೆಗಳಿಗೆ ಅನುಮತಿ ನೀಡುವುದು, ಟೆಂಟ್ ಹಾಕಿಸಿಕೊಡುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಧರಣಿ, ಪ್ರತಿಭಟನೆಗಳು ಸಿದ್ದಪಡಿಸಿದ ರೀತಿಯಲ್ಲಿ ನಡೆಯುತ್ತಿದ್ದು, ಈ ರೀತಿಯ ಮನಸ್ಥಿತಿ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕೃಷಿ ಅಧಿಕಾರ ಶಾಹಿಗಳಿಂದ ಕಡೆಗಣಿಸಲ್ಪಟ್ಟಿದೆ

ಕೃಷಿ ಸಾಲವನ್ನು ಕನಿಷ್ಠ 2 ರಿಂದ 3ವರ್ಷಗಳಿಗೊಮ್ಮೆ ಮನ್ನ ಮಾಡಬೇಕು ಎಂಬ ಮಾತುಗಳು ಈ ಹಿಂದೆ ಕೇಳಿಬರುತ್ತಿದ್ದ ಉದ್ದೇಶ ಮುಂದಿನ ದಿನಗಳಲ್ಲಿಯೂ ಸಹ ಕೆಲವರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದಾಗಿತ್ತು, ಆದರೆ ಈಗ ಕೃಷಿ ಎಂಬುದು ಅಧಿಕಾರ ಶಾಹಿಗಳಿಂದ ಕಡೆಗಣಿಸಲ್ಪಟ್ಟಿದ್ದು, ಈ ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕಿದೆ ಎಂದರು.

ರಾಜಕೀಯ ಅಧಿಕಾರ ಎಂಬುದು ಮೇಲ್ನೋಟಕ್ಕೆ ಸಾಮಾಜಿಕ ಕಳಕಳಿ ಇರುವಂತೆ ಕಂಡರೂ ಕೂಡ ವ್ಯವಹಾರಿಕ ಹಾಗೂ ವೈಯಕ್ತಿಕ ಹಿತಾಸಕ್ತಿಯ ಹಿನ್ನಲೆಯಿಂದಲೇ ನಡೆದುಕೊಂಡು ಬರುತ್ತಿದ್ದು, ಈ ಬಗ್ಗೆ ಜನರು ಜಾಗೃತರಾಗಿ ಹೊಸ ರಾಜಕೀಯ ಸ್ವರೂಪದ ಸಂಘಟನೆಗಳ ಪಾಲ್ಗೊಳ್ಳುವಿಕೆಯನ್ನು ವಿಭಿನ್ನವಾಗಿ ಮಾಡಬೇಕಿದೆ. ಯಾವುದೇ ಒಂದು ವಿಚಾರದಲ್ಲಿ ಚುನಾವಣಾ ರಾಜಕಾರಣಕ್ಕೆ ಹೊಂದಿಕೊಳ್ಳುವಂತೆ ಹೋರಾಟಗಳು, ಚಳವಳಿಗಳು ನಡೆಯಬೇಕಿದ್ದು, ಇವುಗಳ ಪರಿಣಾಮ ನೇರವಾಗಿ ರಾಜಕಾರಣದ ಮೇಲೆ ಬೀರುವಂತೆ ನೋಡಿಕೊಳ್ಳಬೇಕು, ರಾಜಕಾರಣವನ್ನು ವಿಭಿನ್ನವಾಗಿ ಕಲ್ಪಿಸಿಕೊಳ್ಳುವ ಪ್ರಯತ್ನ ಆಗಬೇಕು ಎಂದರು.

ಇನ್ನು ಹೋರಾಟಗಳು ಲೆಕ್ಕಕ್ಕೆ ಇಲ್ಲ ಎಂಬಂತೆ ಜಾತಿ ವೈರುಧ್ಯ, ಕೋಮು ಸಂಬಂಧಿತ ವಿಚಾರಗಳನ್ನು ಜನರ ಮೇಲೇರಿ ಅಧಿಕಾರ ಪಡೆಯುವ ಕೆಲಸ ಮಾಡುತ್ತಿರುವ ಆರ್.ಎಸ್.ಎಸ್ ಮತ್ತು ಬಿಜೆಪಿಯನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಡುವ ಕೆಲಸವನ್ನು ರಾಜಕಾರಣವನ್ನು ಅರ್ಥಪೂರ್ಣವಾಗಿ ಮಾಡುವ ಹಾಗೂ ಬದಲಿಸುವ ಕೆಲಸವನ್ನು ಪ್ರಸ್ತುತ ಉದ್ದೇಶದಿಂದ ನಾವೆಲ್ಲರೂ ಜಾಗೃತರಾಗಿ ಸಂಘಟನೆ ಮಾಡಬೇಕಿದೆ ಎಂದದರು.

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ’ ಗ್ರಾಮ ಮತ್ತು ಕೃಷಿಯೇ ಪ್ರಧಾನವಾಗಿರುವ ಮಂಡ್ಯದಲ್ಲಿ ಅಭಿವೃದ್ದಿ ಹೇಗೆ ಸಾಧ್ಯ ? ಎಂಬ ವಿಚಾರ ಮಂಡಿಸಿದರು. ಮಹಿಳಾ ಕೃಷಿಕ ಸಮಾಜದ ಮುಖಂಡರಾದ ಪಿ. ಆರ್. ಕಿರಣ ಪಾಲ್ತಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನೈಸರ್ಗಿಕ ಕೃಷಿ ಸಯ್ಯದ್ ಘನಿಖಾನ್ ಹಾಗೂ ಜಾಗೃತ ಕರ್ನಾಟಕ ಮಂಡ್ಯ ಘಟಕದ ಮುಖಂಡ ನಾಗೇಶ್ ಎನ್. ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ