Tuesday, September 17, 2024

ಪ್ರಾಯೋಗಿಕ ಆವೃತ್ತಿ

ಪಡಿತರ ಪಡೆಯಲು ಜನರ ಹರಸಾಹಸ

ಪಡಿತರ ಪಡೆಯಲು ಜನರು ಹರಸಾಹಸ ಮಾಡಬೇಕಾದ ದೃಶ್ಯವನ್ನು ಮಂಡ್ಯ ನಗರದ ಬಹುತೇಕ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಣಬಹುದು.

ಮಂಡ್ಯ ನಗರದ ಗುತ್ತಲು ಬಡಾವಣೆಯ ಜಯಲಕ್ಷ್ಮಿ ಟಾಕೀಸ್ ಬಳಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ದೀಪಾವಳಿ ಹಬ್ಬದ ಹಿಂದಿನ ದಿನ ಪಡಿತರ ಪಡೆಯಲು ಜನರು ಹರಸಾಹಸ ಪಡುತ್ತಾ, ಒಬ್ಬರ ಮೇಲೊಬ್ಬರು ಮುಗಿಬಿದ್ದಿದ್ದರು.

ಹಲವು ಕಾರ್ಡುದಾರರು ಬೆಳಿಗ್ಗೆ ಐದು ಗಂಟೆಯಿಂದಲೇ ಕಾದು ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲಾಗದೆ ಪರಿತಪಿಸುತ್ತಾ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಬಂದು ನಿಂತರೂ ಮಧ್ಯಾಹ್ನವಾದರೂ ಇನ್ನೂ ಪಡಿತರ ನೀಡಿಲ್ಲ. ಇಲ್ಲಿರುವ ಕಾರ್ಡುದಾರರ ಪೈಕಿ ಬಹುತೇಕರು ರೈತರು ಮತ್ತು ಬಡಜನರು. ದಿನನಿತ್ಯ ಕೂಲಿ ಮಾಡುವ ಜನರೇ ಕೂಲಿ ಬಿಟ್ಟು ಪಡಿತರ ಅಕ್ಕಿ ಮತ್ತು ರಾಗಿಗಾಗಿ ಕಾಯಬೇಕಾದ ಪರಿಸ್ಥಿತಿ ಕಳೆದ ಮೂರು-ನಾಲ್ಕು ತಿಂಗಳಿನಿಂದ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಕಾರ್ಡುದಾರರ ಆರೋಪ.

ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಸತ್ಯ ಎಂಬುವವರ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಪಡಿತರಕ್ಕಾಗಿ ಎರಡು ಬಾರಿ ಬೆರಳಚ್ಚು ನೀಡಬೇಕಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಕೆಲವೊಮ್ಮೆ ಸರ್ವರ್ ಕೂಡ ಸಿಗದೇ ಇರುವುದರಿಂದ ಜನರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉದ್ಭವವಾಗಿದೆ. ಅಲ್ಲದೆ ಜನತಾ ಬಜಾರ್ ಸೊಸೈಟಿಯ ಪಡಿತರದಾರರನ್ನು ಇಲ್ಲಿಗೆ ಸೇರಿಸಿರುವುದು‌. ಚನ್ನಪ್ಪನ ದೊಡ್ಡಿ,ಚಿಕ್ಕೇಗೌಡನ ದೊಡ್ಡಿ, ಯತ್ತಗದ ಹಳ್ಳಿಗೆ ಹೋಗಿ ಪಡಿತರ ವಿತರಿಸಬೇಕಾಗಿದೆ. ಇದರಿಂದ ಜನರಿಗೆ ಸ್ವಲ್ಪ ತೊಂದರೆಯಾಗಿದೆ ಎನ್ನುತ್ತಾರೆ.

ಆದರೆ ಪಡಿತರ ಕಾಡುದಾರರ ದೂರೇ ಬೇರೆ. ಸರ್ಕಾರಿ ರಜಾ ದಿನಗಳನ್ನು ಬಿಟ್ಟು ಬೇರೆ ಎಲ್ಲಾ ದಿನಗಳಲ್ಲೂ ಪಡಿತರ ನೀಡಬೇಕೆಂಬ ಸರ್ಕಾರದ ಆದೇಶವಿದ್ದರೂ ಇಲ್ಲಿ ತಿಂಗಳಿಗೆ 6-7 ದಿನ ಮಾತ್ರ ರೇಷನ್ ಕೊಡುತ್ತಾರೆ. ಆ ದಿನಗಳಲ್ಲೇ ನಾವು ಕೂಲಿ ಬಿಟ್ಟು ಬೆಳಗ್ಗೆ 5 ಗಂಟೆಯಿಂದಲೇ ಕಾದು ನಿಲ್ಲಬೇಕು‌. ಇದಲ್ಲದೆ ಗುತ್ತಲು ಬಡಾವಣೆಯ ಜನತಾ ಬಜಾರ್ ನ್ಯಾಯಬೆಲೆ ಅಂಗಡಿಯ ಕಾಡುದಾರರನ್ನು ಇಲ್ಲಿಗೆ ಸೇರಿಸಿರುವುದರಿಂದ ಸುಮಾರು 1500 ಪಡಿತರದಾರರಿಗೆ ಪಡಿತರ ನೀಡಬೇಕಾಗಿದೆ.ಇದರಿಂದಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಕಾರ್ಡುದಾರ ನಾಗಣ್ಣ ದೂರುತ್ತಾರೆ.

ಅವರು ಚಿಕ್ಕೇಗೌಡನ ದೊಡ್ಡಿ, ಯತ್ತಗದಹಳ್ಳಿ, ಚನ್ನಪ್ಪನ ದೊಡ್ಡಿ ಎಲ್ಲಿಗೆ ಬೇಕಾದರೂ ಹೋಗಲಿ. ಅಲ್ಲಿಗೆ ಬೇರೆ ಸಿಬ್ಬಂದಿ ಹಾಕಲಿ. ಅದು ಬಿಟ್ಟು ಇಲ್ಲಿಯ ಸಿಬ್ಬಂದಿಗಳನ್ನು ಅಲ್ಲಿಗೆ ಕಳುಹಿಸಿ ಇಲ್ಲಿ ಬೇಗ ಹಾಕಿ ಜನರನ್ನು ಬಸವಳಿಯುವಂತೆ ಮಾಡುವುದು ಎಷ್ಟು ಸರಿ? ನಮಗೆ ಸರ್ಕಾರದ ಆದೇಶದಂತೆ ಸರ್ಕಾರಿ ರಜಾ ದಿನಗಳನ್ನು ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿ ಪಡಿತರ ನೀಡಬೇಕು. ಆದರೆ ಇವರು ತಿಂಗಳಿಗೆ 5-6 ದಿನ ಮಾತ್ರ ಸೊಸೈಟಿ ತೆರೆಯುತ್ತಾರೆ. ಬೇರೆ ದಿನಗಳು ನಾವು ಬೇರೆ ಕಡೆ ಪಡಿತರ ವಿತರಿಸುತ್ತಿದ್ದೇವೆ ಎಂದು ಸಬೂಬು ಹೇಳಿ ಕಳುಹಿಸುತ್ತಾರೆ. ಇದರಿಂದ ನಮಗೆ ಕೆಲವೊಮ್ಮೆ ಪಡಿತರ ಸಿಗದೆ ಇರುವ ಸಂದರ್ಭಗಳು ಸೃಷ್ಟಿಯಾಗಿವೆ. ದಿನಕ್ಕೆ ಕೂಲಿ 700 ರಿಂದ 800 ರೂಪಾಯಿ ಇದೆ. 400 ರೂ. ಅಕ್ಕಿಗೆ 800 ರೂ. ಕೂಲಿ ಬಿಟ್ಟು ನಿಲ್ಲಬೇಕು. ಇದರಿಂದಾಗಿ ಎಷ್ಟೋ ಜನರು ಪಡಿತರವನ್ನು ಪಡೆಯದೆ ಹೋಗಿದ್ದಾರೆ. ತಿಂಗಳ ಕೊನೆಗೆ ಬಂದರೆ ಪಡಿತರ ಖಾಲಿಯಾಗಿದೆ, ಮುಂದಿನ ತಿಂಗಳು ಬನ್ನಿ ಎಂದು ಹೇಳುತ್ತಾರೆ. ಹಾಗಾದರೆ ನಮ್ಮ ಬಾಬ್ತಿನ ಪಡಿತರ ಎಲ್ಲಿ ಹೋಯಿತು ಎಂದು ಕೇಳಿದರೆ ಏನೇನೊ ಉತ್ತರ ಹೇಳಿ ಸಾಗ ಹಾಕುತ್ತಾರೆ ಎಂದು ಪಡಿತರದಾರ ನಾಗಣ್ಣ ಆರೋಪಿಸಿದರು.

ಪಡಿತರಕ್ಕಾಗಿ ಜಗಳ

ನಾನು ನಿನ್ನೆಯಿಂದ ರೇಷನ್ ಪಡೆಯಲು ಬಹಳ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ನಮಗೆ ಇನ್ನೂ ಚೀಟಿಯೇ ಸಿಕ್ಕಿಲ್ಲ ಸರ್ವರ್ ನೆಪ ಹೇಳಿ ಬೆಳಿಗ್ಗೆಯಿಂದಲೂ ಕಾಯಿಸುತ್ತಿದ್ದಾರೆ. ನಿನ್ನೆ ದಿನ ಕೂಡ ಸುಮಾರು 200 ಜನ ಪಡಿತರದಾರರು ಮುಂಜಾನೆಯಿಂದಲೇ ಕಾದು ನಿಂತಿದ್ದರು. ಆದರೆ ಸರ್ವರ್ ಸಮಸ್ಯೆ ಇದೆ ಎಂದು ಹೇಳಿ ಬಾಗಿಲು ಹಾಕಿದರು. ಬೆಳಿಗ್ಗೆಯಿಂದ ಕಾಯುತ್ತಿದ್ದ 200 ಜನ ಬೈದುಕೊಂಡು ಹೋದರು. ಪಡಿತರ ಪಡೆಯಲು ಜನರ ನೂಕು- ನುಗ್ಗಲಿನ ಮಧ್ಯೆ ಗಲಾಟೆಗಳು ಕೂಡಾ ನಡೆಯುತ್ತಲೇ ಇರುತ್ತದೆ. ತಿಂಗಳಿಗೆ 5-6 ದಿನ ಮಾತ್ರ ಸೊಸೈಟಿ ತೆಗೆಯುತ್ತಾರೆ. ಇದರಿಂದಾಗಿ ನಮಗೆ ತೀವ್ರ ತೊಂದರೆಯಾಗಿದೆ. ಬಡವರು ಕೂಲಿ ಬಿಟ್ಟು ಪಡಿತರಕ್ಕಾಗಿ ಗಂಟೆಗಟ್ಟಲೆ ಕಾಯಬೇಕಿದೆ. ಇಲ್ಲಿರುವ ಕಾರ್ಡುದಾರರ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಸರಿಯಾಗಿ ಪ್ರತಿದಿನ ಸೊಸೈಟಿ ತೆರೆಯಬೇಕು ಎಂದು ಪಡಿತರದಾರ ಗುತ್ತಲು ರಮೇಶ್ ಒತ್ತಾಯಿಸಿದರು.

ಪಡಿತರ ಶಿಕ್ಷೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರೆಡಿಟ್ ಗಾಗಿ ಜನರು ನ್ಯಾಯ ಬೆಲೆ ಅಂಗಡಿಗಳ ಮುಂದೆ ಕಾಯುವಂತಹ ಶಿಕ್ಷೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪಡಿತರ ಲೆಕ್ಕಾಚಾರ ತಪ್ಪದಿರಲಿ ಎಂಬ ಉದ್ದೇಶದಿಂದ ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕಾಗಿದೆ. ಸರ್ವರ್ ಸಮಸ್ಯೆ ಇರುವುದರಿಂದ ಒಂದು ಬಾರಿ ಬೆರಳಚ್ಚು ನೀಡಿ ಪಡಿತರ ಪಡೆಯುವುದೇ ದುಸ್ತರವಾಗಿತ್ತು. ಈಗ ಎರಡು ಬಾರಿ ಬೆರಳಚ್ಚು ನೀಡಬೇಕಾಗಿರುವುದರಿಂದ ಮತ್ತಷ್ಟು ಸಮಸ್ಯೆ ಬಿಗಡಾಯಿಸಿದೆ. ಸರ್ವರ್ ಸಮಸ್ಯೆಯಿಂದಾಗಿಯೇ ಜನರ ರೋಸಿದ್ದಾರೆ. ಯಾವ ಪಡಿತರವೂ ಬೇಡ ಎಂದು ಕಾದು ಬಸವಳಿದವರೂ ಇದ್ದಾರೆ.

ಸರ್ಕಾರ ಇನ್ನಾದರೂ ಪಡಿತರದಾರರಿಗೆ ಕಾಯುವ ಶಿಕ್ಷೆ ನೀಡುವುದನ್ನು ನಿಲ್ಲಿಸಬೇಕು. ಸಮರ್ಪಕವಾಗಿ ಎಲ್ಲರಿಗೂ ಪಡಿತರ ವಿತರಿಸಬೇಕು ಎನ್ನುವುದು ನುಡಿ ಕರ್ನಾಟಕ.ಕಾಮ್ ಆಶಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!