Friday, September 20, 2024

ಪ್ರಾಯೋಗಿಕ ಆವೃತ್ತಿ

ಸುಭಾಷ್ ಪಾಳೇಕರ್ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ದಿನೇಶ್ ಗೂಳಿಗೌಡ

ನೈಸರ್ಗಿಕ ಕೃಷಿಗೆ ಒತ್ತು ನೀಡುವ ಸುಭಾಷ್ ಪಾಳೇಕರ್ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಆ ಮೂಲಕ ಗುಣಮಟ್ಟದ ಹಾಗೂ ಆರೋಗ್ಯಯುತ ಆಹಾರ ಬೆಳೆಗಳನ್ನು ಉತ್ಪಾದನೆ ಮಾಡಬೇಕು. ಈ ನಿಟ್ಟಿನಲ್ಲಿ ನನ್ನಿಂದಾಗುವ ಸಹಕಾರವನ್ನು ನಾನು ನೀಡಲು ಸಿದ್ಧ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.

ಪದ್ಮಶ್ರೀ ಡಾ. ಸುಭಾಷ್ ಪಾಳೇಕರ್ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮಂಡ್ಯದ ಕರ್ನಾಟಕ ಸಂಘದ ಕಟ್ಟಡದಲ್ಲಿ ಆಯೋಜಿಸಲಾಗಿದ್ದ 75 ಮಂದಿ ಸುಭಾಷ್ ಪಾಳೇಕರ್ ಕೃಷಿ ಪದ್ಧತಿ ಅಳವಡಿಸಿಕೊಂಡ ಕೃಷಿಕರಿಗೆ, ಕೃಷಿ ಕಾರ್ಮಿಕರಿಗೆ ಮತ್ತು ರೈತರಿಗೆ 75 ತೆಂಗಿನ ಸಸಿ ಹಂಚುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟು ಉಚಿತ, ಸಾವು ಖಚಿತ. ಈ ಜನನದಿಂದ ಸಾವಿನವರೆಗೆ ನಾವು ಏನಾದರೂ ಸಾಧಿಸಲೇಬೇಕು. ಆ ನಿಟ್ಟಿನಲ್ಲಿ ಸುಭಾಷ್ ಪಾಳೇಕರ್ ರವರು ನಮಗೆ ಅತ್ಯುತ್ತಮ ಕೃಷಿ ಪದ್ಧತಿಯನ್ನು ಬಿಟ್ಟು ಹೋಗಿದ್ದಾರೆ. ರೈತರಿಗೆ ತಮ್ಮದೇ ಆದ ನೈಸರ್ಗಿಕ ಕೃಷಿ ಪದ್ಧತಿಯನ್ನು ಬಿಟ್ಟು ಹೋಗುವ ಮೂಲಕ ಶಾಶ್ವತ ಪರಿಹಾರೋಪಾಯವನ್ನು ಕಂಡುಕೊಟ್ಟು ಹೋಗಿದ್ದಾರೆ. ಈ ಪದ್ಧತಿಯನ್ನು ಹೆಚ್ಚಿನದಾಗಿ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ರೈತರು ಅಳವಡಿಸಿಕೊಂಡಿದ್ದಾರೆ. ಇದೀಗ ಈ ಪದ್ಧತಿಯನ್ನು ನಮ್ಮ ಮಂಡ್ಯ ಜಿಲ್ಲೆಯಲ್ಲೂ ಪಸರಿಸುವ ಕಾರ್ಯ ಭರದಿಂದ ಸಾಗುತ್ತಿರುವುದು ಕೃಷಿಯ ಸಂಗತಿಯಾಗಿದೆ. ಈ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ನನ್ನ ಕೈಲಾದ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟರ್ ಭೂ ಪ್ರದೇಶದಲ್ಲಿ ವ್ಯವಸಾಯ ಚಟುವಟಿಕೆ ನಡೆಯುತ್ತಿದೆ. ಇದರಲ್ಲಿ ಸುಮಾರು 60,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. 55000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಸುಮಾರು 45,000 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಹಾಗೂ ಇನ್ನಿತರ ಪದಾರ್ಥಗಳನ್ನು ರೈತರು ಬೆಳೆಯುತ್ತಿದ್ದಾರೆ. ಬೆಳೆಯನ್ನು ಯಾವುದೇ ರೋಗಕ್ಕೆ ತುತ್ತಾಗದಂತೆ ಕಾಯ್ದುಕೊಳ್ಳುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವುದೇ ರೋಗ ಬಾಧೆಗಳು ತೊಟ್ಟ ಬಾರದು ಎಂದರೆ ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಯನ್ನು ಅನುಸರಿಸುವುದು ಬಹಳ ಸೂಕ್ತ. ಜೊತೆಗೆ ಇದರ ಬಳಕೆಯಿಂದ ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರ ಪದಾರ್ಥಗಳು ಉತ್ಪಾದನೆಯಾಗುತ್ತವೆ ಎಂಬುದು ಸಹ ಅಷ್ಟೇ ಸತ್ಯವಾಗಿರುತ್ತದೆ ಎಂದು ಹೇಳಿದರು.

ಜುಲೈ ಅಂತ್ಯಕ್ಕೆ ಮೈಷುಗರ್ ಪ್ರಾರಂಭ

ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಈ ತಿಂಗಳ ಕೊನೆಯಲ್ಲಿ ಪ್ರಾರಂಭಿಸಬೇಕು ಎಂಬ ತೀರ್ಮಾನ ಆಗಿದೆ. ಕಳೆದ ವರ್ಷ ರೈತರು 2,40,000 ಟನ್ ಕಬ್ಬನ್ನು ಅರೆದಿದ್ದರು. ಅಲ್ಲದೆ, ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಹಣ ಕೂಡ ಪಾವತಿಯಾಗಿದೆ. ರೈತ ಸಮೃದ್ಧಿಯಾದಾಗ ಮಾತ್ರ ಈ ದೇಶದ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳುತ್ತದೆ. ಸಿಲ್ಕ್ ಮತ್ತು ಮಿಲ್ಕ್ ಬಹಳ ಮುಖ್ಯ. ಅಂದರೆ ಹಾಲು ಹಾಕುವಂತ ರೈತನ ಹಿತವನ್ನು ಸರ್ಕಾರ ಕಾಪಾಡಬೇಕಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ 10 ಲಕ್ಷ 75000 ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ರಾಜ್ಯದಲ್ಲಿ ಒಂದು ದಿನಕ್ಕೆ 100 ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ನಮ್ಮ ಸರ್ಕಾರ ಪ್ರತಿದಿನ ರೈತರಿಗೆ 5 ಕೋಟಿ ಹಣವನ್ನು ಪ್ರೋತ್ಸಾಹ ಧನವಾಗಿ ಕೂಡ ಬೇಕಾಗಿದೆ . ಮಂಡ್ಯ ಜಿಲ್ಲೆಯಲ್ಲೂ 67 ಕೋಟಿ ರೂ. ಪ್ರೋತ್ಸಾಹ ಧನವನ್ನು ಕೊಡಬೇಕಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಅದು ಪಾವತಿಯಾಗುತ್ತದೆ ಎಂದು ಹೇಳಿದರು.

ಇವೆಲ್ಲವುಗಳ ಜೊತೆಯಲ್ಲಿ ಮುಂಗಾರು ಹಂಗಾಮಿನಲ್ಲಿ 11,000 ಕ್ವಿಂಟಲ್ ಬಿತ್ತನೆ ಬೀಜಗಳು ಮಂಡ್ಯ ಜಿಲ್ಲೆಗೆ ಬೇಕಾಗಿತ್ತು. ನಮ್ಮ ಇಲಾಖೆಯಿಂದ ಈಗ 12,000 ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನಾಗಿದೆ. ಯಾವುದೇ ಸಮಸ್ಯೆ ಇದ್ದರೂ ರೈತ ಪ್ರತಿನಿಧಿಗಳು ಚರ್ಚೆ ಮಾಡಿ. ನೆರವಿಗೆ ನಾವು ಸದಾ ಇರುತ್ತೇವೆ ಎಂದು  ಭರವಸೆ ನೀಡಿದರು.

ವೇದಿಕೆಯಲ್ಲಿ ರೈತ ಹೋರಾಟಗಾರ್ತಿ ಸುನಂದ ಜಯರಾಂ, ಬಿಜೆಪಿ ಮುಖಂಡ ಶಿವಣ್ಣ, ಮಂಡ್ಯ ಪಿ.ಇ.ಟಿ. ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ , ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು, ಮಂಡ್ಯ ಜಿಲ್ಲಾ ಕೆಡಿಪಿ ಸದಸ್ಯ ದ್ಯಾವಪ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!