Friday, September 20, 2024

ಪ್ರಾಯೋಗಿಕ ಆವೃತ್ತಿ

ಜೀವನದಲ್ಲಿ ಸಾಧಿಸುವ ಹಠ ಇದ್ದರೆ ಯಶಸ್ಸು ಸಾಧ್ಯ

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠ ಇದ್ದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಶಿವನಂಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಪತ್ರಕರ್ತರಾದ ಶಿವಪ್ರಕಾಶ್, ಕೆ.ಸಿ.ಮಂಜುನಾಥ್, ಸಿ.ಎನ್.ಮಂಜುನಾಥ್, ಕೆ.ಎನ್.ನವೀನ್ ಕುಮಾರ್, ಎನ್.ನಾಗೇಶ್, ನಂಜುಂಡಸ್ವಾಮಿ ಸೇರಿ ಹಿರಿಯ ಪತ್ರಕರ್ತ ಶಿವನಂಜಯ್ಯ ಅವರ 55ನೇ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಾನು ಬಡತನದಲ್ಲಿ ಹುಟ್ಟಿದರೂ ಏನಾದರೂ ಸಾಧಿಸುವ ಹಠ ಇಟ್ಟುಕೊಂಡು ಬಂದವನು. ಅದರಂತೆ ಬದುಕಿನಲ್ಲಿ ತಕ್ಕ ಮಟ್ಟಿಗೆ ಸಾರ್ಥಕತೆ ಕಂಡುಕೊಂಡಿದ್ದೇನೆ ಎಂದರು.

ನನಗೆ ಮಾಡಿರುವ ಈ ಸನ್ಮಾನದಿಂದ ನನ್ನ ಜವಾಬ್ದಾರಿ ಮತ್ತಷ್ಟು ತಪ್ಪಾಗಲಾರದು.ನಾನು ರೈತಾಪಿ ವರ್ಗದ ಬಡ ಕುಟುಂಬದಿಂದ ಬಂದವನು. ನನ್ನ ತಂದೆ ತಾಯಿ ಅನಕ್ಷರಸ್ಥರು, ನಾನು ಈ ಎತ್ತರಕ್ಕೆ ಬೆಳೆಯಲು ಹಸಿದ ಹೊಟ್ಟೆ, ಖಾಲಿ ಜೇಬು, ಹರಿದ ಅಂಗಿ ಹಾಗೂ ಅನುಭವಿಸಿದ ಅವಮಾನ ಕಾರಣ ಎಂದರೆ ತಪ್ಪಾಗಲಾರದು. ಪೌರವಾಣಿ ಪತ್ರಿಕೆ ಮೂಲಕ ಪತ್ರಕರ್ತ ವೃತ್ತಿ ಆರಂಭಿಸಿದ ನಾನು ಕಳೆದ 20 ವರ್ಷದಿಂದ ವಿಜಯಕರ್ನಾಟಕ ತಾಲ್ಲೂಕು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಕುಟುಂಬದವರಿಗಿಂತ ಸ್ನೇಹ ಬಳಗ ನನಗೆ ಹೆಚ್ಚು ಸಾಥ್ ನೀಡುತ್ತಿದ್ದು,ಅದು ನನ್ನ ಸೌಭಾಗ್ಯವೇ ಸರಿ ಎಂದರು.

ನನ್ನ ಪತ್ನಿ ಸರ್ವಮಂಗಳ ಪುರಸಭೆ ಸದಸ್ಯರಾಗಿ ಅವರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ನನ್ನ ಸುಪುತ್ರ ಸಂತೋಷ್ ಸಹ ಶೈಕ್ಷಣಿಕ ಸಂಸ್ಥೆಯೊಂದರ ಮುಖ್ಯಸ್ಥರಾಗಿ ಅದರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದರು.
ಜೀವನದಲ್ಲಿ ಒಬ್ಬ ವ್ಯಕ್ತಿ ಯಶಸ್ಸು ಸಾಧಿಸಬೇಕಾದರೆ ಆತ ಮೊದಲು ಶಿಸ್ತು ರೂಢಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಶಿವನಂಜಯ್ಯ ಅವರು ಸರಳ ವ್ಯಕ್ತಿತ್ವವುಳ್ಳವರಾಗಿದ್ದು ಸದಾ ಕ್ರಿಯಾಶೀಲರಾಗಿದ್ದಾರೆ. ಈ ಎತ್ತರಕ್ಕೆ ಬೆಳೆಯಲು ಸಾಕಷ್ಟು ಪೆಟ್ಟು ತಿಂದಿದ್ದಾರೆ. ಇವತ್ತು ಒಂದು ಮೂರ್ತಿಯಾಗಿ ಬೆಳೆದು ನಿಂತಿದ್ದಾರೆ ಎಂದು ಬಣ್ಣಿಸಿದರು.

ತರಕಾರಿ ಮಾರಾಟ ಮಾಡುವುದರಿಂದ ಹಿಡಿದು, ಮೈಷುಗರ್ ಕಾರ್ಖಾನೆಯಲ್ಲಿ ನೌಕರರಾಗಿ 25 ವರ್ಷಗಳ ಸೇವೆ ಸಲ್ಲಿಸಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿ, ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆ ಪ್ರಾರಂಭಿಸಿ 500ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಜೊತೆಗೆ ಶುಭಂ ಎಲೆಕ್ಟ್ರಾನಿಕ್ಸ್ ಅಂಗಡಿಯನ್ನು ತೆರೆದಿದ್ದು,50 ಕ್ಕೂ ಹೆಚ್ಚು ಉದ್ಯೋಗ ನೀಡಿ ಆ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಮ್ ಮಾತನಾಡಿ, ನನ್ನ ಶಿವನಂಜಯ್ಯ ಅವರ ಒಡನಾಟ 30 ವರ್ಷದಿದ ಇದೆ. ಶಿವನಂಜಯ್ಯ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಕೆ.ಎನ್.ರವಿ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಶಿವನಂಜಯ್ಯ ಅವರು ಸಾಮಾಜಿಕ ಕಳಕಳಿಯುಳ್ಳವರಾಗಿದ್ದು, ಜನಾನುರಾಗಿಯಾಗಿದ್ದಾರೆ. ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ಉಳ್ಳವರಾಗಿದ್ದಾರೆ. ಅದೇ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ ಎಂದು ಬಣ್ಣಿಸಿದರು.

ಪತ್ರಕರ್ತ ಸೋಮಶೇಖರ್ ಕೆರಗೋಡು ಮಾತನಾಡಿ, ಶಿವನಂಜಯ್ಯ ಅವರಲ್ಲಿ ಯಾವುದೇ ಜಾತಿ-ಭೇದವಿಲ್ಲ. ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದು ದೊಡ್ಡದಲ್ಲ. ಅವರು ಮಾಡಿರುವ ಸಾಧನೆಗಳು ದೊಡ್ಡದು. ಆ ದೇವರು ಶಿವನಂಜಯ್ಯ ಅವರಿಗೆ ಇನ್ನಷ್ಟು ಸಮಾಜಮುಖಿಯಾಗಿ ಕೆಲಸ ಮಾಡುವ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.

ಪತ್ರಕರ್ತ ಮಧುಸೂದನ್ ಮಾತನಾಡಿ, ಶಿವನಂಜಯ್ಯ ಇಷ್ಟು ಎತ್ತರಕ್ಕೆ ಬೆಳದರೂ ಇಂದಿಗೂ ತರಕಾರಿ ಮಾರಾಟ ಮಾಡುವ ಮೂಲ ವೃತ್ತಿಯನ್ನು ಬಿಟ್ಟುಕೊಟ್ಟಿಲ್ಲ. ಅವರ ಹರಿತವಾದ ಬರವಣಿಗೆಗಳು ನಿಂತಿಲ್ಲ. ವಾರದಲ್ಲಿ ಎರಡು- ಮೂರು ವಿಶೇಷ ಲೇಖನಗಳನ್ನು ಬರೆಯುತ್ತಾರೆ. ಇವರ ಶಿಸ್ತು ಬದ್ಧ ಜೀವನ ನಮಗೆಲ್ಲ ಮಾದರಿ ಎಂದ ಅವರು ಶಿವನಂಜಯ್ಯ ಅವರ 60ನೇ ವರ್ಷಕ್ಕೆ ಅಭಿನಂದನಾ ಗ್ರಂಥವನ್ನು ತರೋಣ ಎಂದರು.

ಪತ್ರಕರ್ತರಾದ ನುಡಿಭಾರತಿ ಬಸವೇಗೌಡ, ಗಣಂಗೂರು ನಂಜೇಗೌಡ, ಪುತ್ರ ಸಂತೋಷ್ ಹಾಗೂ ಕೆ.ಶ್ರೀನಿವಾಸ್ ಮಾತನಾಡಿದರು.
ಪತ್ರಕರ್ತ ಎನ್.ನಾಗೇಶ್ ಅಭಿನಂದನಾ ಪತ್ರ ವಾಚಿಸಿದರು.

ವೇದಿಕೆಯಲ್ಲಿ ಶಿವನಂಜಯ್ಯ ಅವರ ಧರ್ಮಪತ್ನಿ ಸರ್ವಮಂಗಳ, ಪುತ್ರ ಸಂತೋಷ್,ಸೊಸೆ ಕಲ್ಪಿತ ಸೇರಿದಂತೆ ಬಂಧು ಬಳಗ ಹಾಗೂ ಸ್ನೇಹಿತ ಮಿತ್ರರು ಹಾರ ಹಾಕಿ ಶಿವನಂಜಯ್ಯ ಅವರನ್ನು ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!