Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಕ್ಕರೆ ಜಿಲ್ಲೆಗೆ ಸಿಹಿ ನೀಡದ 2022 – ಭರವಸೆಯೇ 2023

2022ರ ವರ್ಷ ತೆರೆಗೆ ಸರಿಯುತ್ತಿದೆ, ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯನ್ನು ಒಟ್ಟಾರೆಯಾಗಿ ಪರಿಗಣನೆಗೆ ತೆಗೆದುಕೊಂಡು ಅವಲೋಕಿಸಿದಾಗ ಹೇಳಿಕೊಳ್ಳುವಂತಹ ದೊಡ್ಡ ಬದಲಾವಣೆಗಳು ಗೋಚರಿಸುವುದಿಲ್ಲ.

ಕೊವೀಡ್ 19
ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವನ್ನೇ ಕಾಡಿದ ಕೊವೀಡ್ 19ಗೆ ಹಾವಳಿಗೆ ಮಂಡ್ಯವು ಜರ್ಝರಿತವಾಯಿತು. 2021ರಲ್ಲಿ ಅತೀ ಹೆಚ್ಚಾಗಿ ಕಾಡಿದರೆ, 2022 ರಲ್ಲಿ ಸ್ವಲ್ಪ ಸುಧಾರಿಸಿಕೊಳ್ಳಲ್ಲಷ್ಟೆ ಅವಕಾಶ ಮಾಡಿಕೊಟ್ಟಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕ ಹಿಂಜರಿತ ಅನುಭವಿಸಿದ್ದ ಕ್ಷೇತ್ರಗಳು ಉತ್ತಮವಾಗಿ ಅಲ್ಲದಿದ್ದರೂ, ಸ್ವಲ್ವ ಚೇತರಿಕೆ ಕಂಡು ಕೊಂಡವು.

ಬದಲಾಗದ ರೈತರ ಬದುಕು 
2022ರಲ್ಲಿ ರೈತರ ಬದುಕು ಯಾವುದೇ ಬದಲಾವಣೆ ಕಾಣಲಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಮೈಷುಗರ್ ಕಾರ್ಖಾನೆಯೊಂದನ್ನು ಸರ್ಕಾರ ಸ್ವಾಮ್ಯದಲ್ಲಿ ಉಳಿಸಿಕೊಳ್ಳಲು ರೈತರಿಂದ ಸಾಧ್ಯವಾಯಿತಷ್ಟೆ. ಆದರೆ ರೈತರ ಬೆಳೆದ ಕಬ್ಬಿಗೆ ನ್ಯಾಯಯುತವಾದ ಬೆಲೆ ಸಿಗಲಿಲ್ಲ. ಸರ್ಕಾರಗಳು ಎಂದಿನಂತೆ ಕೇವಲ ಭರವಸೆಗಳನ್ನು ನೀಡುತ್ತಾ ದಿನಗಳನ್ನು ತುಂಬಿಸಿದ್ದೆ ಆಯ್ತು. ಆದರೆ ರೈತರ ನೆರವಿಗೆ ಯಾರು ಬರಲಿಲ್ಲ. ಇನ್ನೂ ರೈತರು ಬೀದಿಯಲ್ಲೇ ಹೋರಾಟ ಮಾಡುತ್ತಾ ಕುಳಿತಿದ್ದಾರೆ. ಜಿಲ್ಲೆಯ ಅಲ್ಲಲ್ಲಿ ರೈತರ ಆತ್ಮಹತ್ಯೆಗಳು ವರದಿಯಾದವು.  ಕೃಷಿ ಕ್ಷೇತ್ರದಲ್ಲಿ ದೇಶಿ ಬಂಡಾವಾಳಿಗರು ರೈತರ ಬೆಳೆಗಳನ್ನು  ಖರೀದಿಸಲು ಹಳ್ಳಿಗಳಲ್ಲಿ ತಮ್ಮ ಶಾಖೆಗಳನ್ನು ತೆರೆದಿರುವುದು, ರೈತರಿಗೆ ಹೊಡೆತವೇ ಆಗಿದೆ.

ಸಾಮಾಜಿಕ ಪಿಡುಗುಗಳಲ್ಲಿ ಸುದ್ದಿಯಾದ ಜಿಲ್ಲೆ 
ಹೆಣ್ಣು ಭ್ರೂಣಹತ್ಯೆ ವಿಚಾರದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಮಂಡ್ಯ ಜಿಲ್ಲೆಯು ಅಪಖ್ಯಾತಿಗೆ ಒಳಗಾಯಿತು. ಕೊರೋನಾ ಕಾಲಘಟ್ಟದಲ್ಲಿ ಸದ್ದಿಲ್ಲದೇ ಬಾಲ್ಯವಿವಾಹಗಳು ನಡೆದವು. ಅಲ್ಲದೇ ಮಳವಳ್ಳಿಯ ದಿವ್ಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯಾದ್ಯಂತವಲ್ಲದೇ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿಯಾಯಿತು. ಅಲ್ಲದೇ ಪಾಂಡವಪುರ ತಾಲ್ಲೂಕಿನ ಕಟ್ಟೇರಿಯ ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಗಿಂಕ ಕಿರುಕುಳವು ರಾಜ್ಯ ಮಟ್ಟದಲ್ಲಿ ಸುದ್ದಿಯಾದವು.

ಅತಿಯಾಗಿ ಸುರಿದ ಮಳೆ 
ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯೇ ಸುರಿಯಿತು. ಅಲ್ಲಲ್ಲಿ ಶಿಥಿಲಗೊಂಡಿದ್ದ ಮನೆಗಳು ಕುಸಿದು ಬಿದ್ದವು, ಜಿಲ್ಲೆಯಲ್ಲಿ ಅಲ್ಲಲ್ಲಿ ಕೆರೆಕಟ್ಟೆಗಳು ಒಡೆದು ಕೋಡಿ ಬಿದ್ದವು, ಇದರಿಂರ ರೈತರು ಬೆಳೆದ ಬೆಳೆ ಜಲಾವೃತ್ತವಾಗಿ ಅತಿವೃಷ್ಠಿಯಿಂದಲೂ ರೈತ ನಷ್ಟ ಅನುಭವಿಸುವಂತಾಯತು.

ಮುಖ್ಯವಾಗಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದಿಂದಾಗಿ ಆಗಿರುವ ಅನನೂಕೂಲಗಳನ್ನು ಈ ಮಳೆ ಸಂದರ್ಭದಲ್ಲಿ ಬೆಳಕಿಗೆ ಬಂದವು. ಹೆದ್ದಾರಿಯೂ ನೀರಿನಿಂದ ತುಂಬಿ ಹರಿದು ಸಂಚಾರಕ್ಕೆ ಅಡಚಣೆಯಾಯಿತು. ಹೆದ್ದಾರಿ ಪಕ್ಕದ ಕೆರೆಗಳು ಒಡೆದು ಸಾಕಷ್ಟು ಸಮಸ್ಯೆಗಳನ್ನು ತಂದಿಟ್ಟವು. ಹೆದ್ದಾರಿ ನಿರ್ಮಾಣದಿಂದ,  ಅದರ ಸುತ್ತಾ ಇದ್ದ ಅಂಗಡಿ ಮುಗ್ಗಟುಗಳ, ಹೋಟೆಲ್ ಗಳ ಹಲವು ಆರ್ಥಿಕ ವ್ಯವಹಾರಗಳಿಗೆ ಪೆಟ್ಟು ಬಿತ್ತು.

ರಾಜಕೀಯ ಪಕ್ಷಗಳ ಯಾತ್ರೆಗಳು 
ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ ಮಂಡ್ಯದ ಮೂಲಕ ಹಾದು ಹೋಯಿತು. ಜೆಡಿಎಸ್ ಪಂಚರತ್ನಯಾತ್ರೆ  ಜಿಲ್ಲೆಯಲ್ಲಿ ಜೋರಾಗಿಯೇ ಸದ್ದು ಮಾಡಿತು. ನಂತರ ಬಿಜೆಪಿ ಜನ ಸಂಕಲ್ಪಯಾತ್ರೆಗಾಗಿ ಕೇಂದ್ರ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಭೇಟಿ ನೀಡಿ ಮತ ಬೆಳೆ ತೆಗೆಯಲು ಕಸರತ್ತು ನಡೆಸಿದರು. ಮತ್ತೊಂದು ಸಂಗತಿಯಂದರೆ, ರಾಜಕೀಯ ಶಕ್ತಿಗಳು ಇನ್ನೂ ಜಾತಿ, ಧರ್ಮಗಳ ಹೆಸರಲ್ಲಿ ಪ್ರಬಲವಾಗುತ್ತಾ ಗಟ್ಟಿಯಾಗುತ್ತಿರುವುದು ಗಮನಿಸಬಹುದು.

ಬಗೆಹರಿಯದ ಸ್ಲಂ ಹೋರಾಟಗಳು
ಮಂಡ್ಯನಗರದಲ್ಲಿ ಒಟ್ಟು 24 ಸ್ಲಂಗಳಿವೆ. ಆದರೆ ಇವ್ಯಾವ ಸ್ಲಂಗಳನ್ನು ಅಲ್ಲಿನ ನಿವಾಸಿಗಳು ಪೂರ್ಣ ಪ್ರಮಾಣದಲ್ಲಿ ಹಕ್ಕುಪತ್ರಗಳು ದೊರೆತಿಲ್ಲ, ಹಾಗಾಗಿ ಅವರು ಶಾಶ್ವತ ಸೂರಿಗಾಗಿ ದಿನದಿತ್ಯ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ.

ಮಂಡ್ಯ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ
ಮಂಡ್ಯ ಜಿಲ್ಲಾಸ್ಪತ್ರೆಯೂ ಆಗಾಗ ಸುದ್ದಿಯಾಯಿತು. ವೈದ್ಯರ ಕೊರತೆ, ಹೊರ ಹಾಗೂ ಒಳರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದವು. ಅಲ್ಲದೇ ವೈದ್ಯರ ನಿರ್ಲಕ್ಷ್ಯದಿಂದಾಗಿ ಒಂದು ಮಗುವಿನ ಸಾವು ಕೂಡ ಸಂಭವಿಸಿತು. ಮಂಡ್ಯ ಜಿಲ್ಲಾಸ್ಪತ್ರೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ, ವೈದ್ಯರ ಸಿಬ್ಬಂದಿಯ ಕೊರತೆಯಿದೆ. ರೋಗಿಗಳ ಸಂಖ್ಯೆಯು ಹೆಚ್ದಾಗಿರುವುದು, ಅದಕ್ಕೆ ತಕ್ಕಂತೆ ವೈದ್ಯರ ಲಭ್ಯತೆಯು ಇಲ್ಲದಿರುವುದಿರುವುದರಿಂದ,  ನೇರವಾಗಿ ಇದರ ಪರಿಣಾಮ ರೋಗಿಗಳ ಮೇಲೆ ಬೀಳುತ್ತಿದೆ.

ಚಿರತೆಗಳ ಹಾವಳಿ 
2022ರಲ್ಲಿ ಚಿರತೆಗಳ ಹಾವಳಿಯನ್ನು ಎದುರಿಸುವಂತಾಯಿತು. ಮದ್ದೂರಿನ ಹಲವೆಡೆ, ಲೋಕಸರ ಹಾಗೂ ಕೆ ಆರ್ ಎಸ್ ನಲ್ಲಿ ಚಿರತೆಗಳನ್ನು ಸೆರೆ ಹಿಡಿಯಲಾಯಿತು. ಈ ನಡುವೆ ಮದ್ದೂರಿನಲ್ಲಿ ಒಂಟಿ ಸಲಗವು ಕಾಣಿಸಿಕೊಂಡು ಜನರನ್ನು ಭಯ ಭೀತರನ್ನಾಗಿಸಿತು.

ಕುಂಭಮೇಳ-ಸಂಕೀರ್ತನಾ ಯಾತ್ರೆ
ಕೆ ಆರ್ ಪೇಟೆಯಲ್ಲಿ ಕುಂಭಮೇಳ ಹಾಗೂ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆಗೆ ಜಿಲ್ಲೆಯೂ ಸಾಕ್ಷಿಯಾಯಿತು. ಚುನಾವಣಾ ವರ್ಷದಲ್ಲಿ ಇವುಗಳನ್ನು ಆಚರಣೆಗೆ ತಂದಿದ್ದಕ್ಕೆ ಪ್ರಗತಿಪರರ ವಿರೋಧ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕೋಮು ಗಲಭೆ ಎಬ್ಬಿಸಲು ಬಿಜೆಪಿ ಸಂಘ ಪರಿವಾರ ಸಂಚು ರೂಪಿಸಿವೆ ಎಂದು ಸಮಾನ ಮನಸ್ಕರು ವಿರೋಧ ವ್ಯಕ್ತಪಡಿಸಿದರು.

ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ 
ರಾಜ್ಯ ಸರ್ಕಾರವು ವಕೀಲರ ರಕ್ಷಣಾ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚೆಯನ್ನು ಮಾಡಿ ಕಾಯ್ದೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಸರ್ಕಾರಿ ನೌಕರರು  ಹಳೇ ಪಿಂಚಣಿಯನ್ನು (ಒಪಿಎಸ್) ಜಾರಿಗೆ ತರುವಂತೆ ಹೋರಾಟ ಮಾಡಿದ್ದರು.
ಪೌರಕಾರ್ಮಿಕರು ವಸತಿ  ಹಕ್ಕಿಕ್ಕಾಗಿ, ಕೆಲಸ ಖಾಯಂ, ವೇತನಕ್ಕೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನಿಟ್ಟು ಹೋರಾಟ ಮಾಡಿದ್ದರು.
ಗುತ್ತಿಗೆ  ಪೌರಕಾರ್ಮಿಕರು, ಹೊರಗುತ್ತಿಗೆ ನೌಕರರು ತಮ್ಮ ಹುದ್ದೆ ಖಾಯಂಗೆ ಆಗ್ರಹಿಸಿ ಪ್ರತಿಭಟಿಸಿದ್ದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಘಟಿಸಿದ ಘಟನೆಯು ದೇಶಾದ್ಯಂತ ಸುದ್ದಿಯಾಗಿತ್ತು.
ರಾಜ್ಯದಲ್ಲಿ ಗುತ್ತಿದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ನಂತರ ಮಂಡ್ಯದಲ್ಲೂ ಗುತ್ತಿಗೆದಾರರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಲಾಗಿತ್ತು.
ಮಂಡ್ಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅತಿಥಿ ಉಪನ್ಯಾಸಕರ ಶೋಷಣೆ ಮಾಡಲಾಗುತ್ತಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳ ಸಮಿತಿಯು ಆರೋಸಿತ್ತು.
ಬಿಜೆಪಿ ಸರ್ಕಾರ ಜಾರಿ ಮಾಡಿರುವ ಶಾಲಾ ಪಠ್ಯಕ್ರಮವನ್ನು ವಿರೋಧಿಸಿ, ಬಿಜೆಪಿ ಸರ್ಕಾರ ಜಾರಿ ಮಾಡಿರುವ ಶಾಲಾ ಪಠ್ಯಕ್ರಮವನ್ನು ವಿರೋಧಿಸಿ, ಆತನನ್ನು ಪರಿಷ್ಕರಣಾ ಸಮಿತಿಯಿಂದ ಕೂಡಲೇ ವಜಾಗೊಳಿಸಬೇಕೆಂದು ಹಲವು ಸಂಘಟನೆಗಳು ಬಿಜೆಪಿ ಸರಕಾರಕ್ಕೆ ಆಗ್ರಹಿಸಿದ್ದರು.
ಬೀಡಿ ಉದ್ಯಮವನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಪ್ರತಿಭಟನೆ ನಡೆಸಿದ್ದರು.
ಐತಿಹಾಸಿಕ ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧ ಸಂಪೂರ್ಣವಾಗಿ ಹಾಳಾಗಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಜಿಲ್ಲೆಯ ಹೆಮ್ಮೆಯ ಸ್ಥಳ ಶಿವಪುರ ಧ್ವಜ ಸತ್ಯಾಗ್ರಹ ಸೌಧವನ್ನು ದುರಸ್ತಿ ಮಾಡಬೇಕೆಂದು ಹಿರಿಯ ಸಾಹಿತಿ ಡಾ.ಜಯಪ್ರಕಾಶ್ ಗೌಡ ಸಚಿವರನ್ನು ಒತ್ತಾಯಿಸಿದ್ದರು.

ಸಾಹಿತ್ಯ ಸಮ್ಮೇಳನ
ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಯಿತು.
ಮಂಡ್ಯ ತಾಲ್ಲೂಕಿನ ದುದ್ದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಿಸಿದ್ದ ಜಿ.ಎಸ್.ಬೊಮ್ಮೇಗೌಡ ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಹಯೋಗದಲ್ಲಿ  ಆಯೋಜಿಸಿದ್ದ ಮಂಡ್ಯ ತಾಲ್ಲೂಕು ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ, ಡಾ.ಲೀಲಾ ಅಪ್ಪಾಜಿ ವಹಿಸಿದ್ದರು. ಇದು ಕೂಡ ಕಳೆದ ವರ್ಷ ಯಶಸ್ವಿಯಾಗಿ ನಡೆದ ಕಾರ್ಯಕ್ರಮ.

ಇನ್ನೂ ಹಲವು ವಿಚಾರಗಳು ಕಳೆದ ವರ್ಷ ಸಕ್ಕರೆ ನಾಡಿಗೆ ಅಂತಹ ಸಿಹಿಯನ್ನೇನು ತಂದು ಕೊಡಲಿಲ್ಲ. ಮಂಡ್ಯದ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರ ಸೇರಿದಂತೆ ಮಂಡ್ಯದ ಬೆಳವಣಿಗೆ ಅಭಿವೃದ್ದಿಯನ್ನು ಭರವಸೆಯ 2023ರ ವರ್ಷವು ಪೊರೈಸಲಿ ಎಂದು ನುಡಿ ಕರ್ನಾಟಕ. ಕಾಮ್ ಆಶಿಸುತ್ತದೆ. ಓದುಗರಾದ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾ‍ಷಯಗಳು. ಶುಭವಾಗಲಿ.

ಜನವರಿ ಹೆಸರು ಬಂದಿದ್ದು ಹೀಗೆ ವರ್ಷದ ಜನವರಿ ತಿಂಗಳನ್ನು ಮೊದಲು ಜಾನಸ್ ಎಂದು ಕರೆಯಲಾಗುತ್ತಿತ್ತು. ರೋಮನ್ ದೇವರ ಹೆಸರು ಜಾನಸ್ (Janus). ಆದ್ರೆ ಕೆಲ ಸಮಯದ ನಂತರ ಜಾನಸ್ ಹೆಸರು ಜನವರಿಯಾಗಿ ಬದಲಾಯ್ತು.

ಪ್ರಪಂಚದಾದ್ಯಂತ ಡಿಸೆಂಬರ್ 31 ರ ಮಧ್ಯರಾತ್ರಿಯಿಂದ ಕ್ಯಾಲೆಂಡರ್ ಬದಲಾಗುತ್ತದೆ. ಹೊಸ ವರ್ಷವು ಜನವರಿಯಿಂದ ಪ್ರಾರಂಭವಾಗುತ್ತದೆ. ಆದರೆ ಭಾರತದಲ್ಲಿ ಇದನ್ನು ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ವರ್ಷ ಪ್ರಾರಂಭ ಎಂದು ಪರಿಗಣಿಸುತ್ತಾರೆ.

ಹೊಸ ವರ್ಷವನ್ನು ಭಾರತದ ಬೇರೆ ಬೇರೆ ಪ್ರಾಂತ್ಯದ ಜನರು ಬೇರೆ ಬೇರೆ ದಿನ ಆಚರಿಸುತ್ತಾರೆ. ಕರ್ನಾಟಕದಲ್ಲಿ ಯುಗಾದಿಯಿಂದ ಹೊಸ ವರ್ಷ ಶುರುವಾಗುತ್ತದೆ. ಪಂಜಾಬ್‌ನಲ್ಲಿ ಹೊಸ ವರ್ಷವು ಬೈಸಾಖಿಯಿಂದ ಶುರುವಾಗುತ್ತದೆ. ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ ವರ್ಷ ಬೇರೆ ಬೇರೆ ದಿನ ಶುರುವಾಗುತ್ತದೆ.

ಜನವರಿ ಒಂದು ಹೊಸ ವರ್ಷದ ಮೊದಲ ತಿಂಗಳಾಗಿದ್ದು ಹೇಗೆ?
ಜನವರಿ ಶುರುವಾಗ್ತಿದ್ದಂತೆ ಹೊಸ ವರ್ಷ ಆರಂಭವಾಗಿ ಎನ್ನುತ್ತೇವೆ. ಶತಮಾನಗಳ ಹಿಂದೆ, ಹೊಸ ವರ್ಷ ಜನವರಿ ಒಂದಾಗಿರಲಿಲ್ಲ. ವಿವಿಧ ದೇಶಗಳಲ್ಲಿ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸಲಾಗ್ತಿತ್ತು. ಕೆಲವರು ಮಾರ್ಚ್ 25 ರಂದು ಆಚರಿಸಿದ್ರೆ ಮತ್ತೆ ಕೆಲವರು ಡಿಸೆಂಬರ್ 25 ರಂದು ಆಚರಿಸುತ್ತಿದ್ದರು. ನಂತರ ಜನವರಿ ಒಂದರಂದು ಹೊಸ ವರ್ಷಾರಚಣೆ ಶುರುವಾಯ್ತು.

ಮೊದಲ ಬಾರಿ ರೋಮ್ ನಲ್ಲಿ ಇದು ಶುರುವಾಯ್ತು. ಅಲ್ಲಿ ರಾಜ ನುಮಾ ಪೊಂಪಿಲಸ್ ರೋಮನ್ ಕ್ಯಾಲೆಂಡರ್ ಬದಲಾಯಿಸಿದ. ಈ ಕ್ಯಾಲೆಂಡರ್ ಬಂದ ನಂತರ, ಹೊಸ ವರ್ಷವನ್ನು ಜನವರಿ ಮೊದಲ ದಿನದಂದು ಆಚರಿಸಲಾಗ್ತಿದೆ.

ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಹೊಸ ವರ್ಷ ಜನವರಿ (January) ಮೊದಲ ತಾರೀಕಿನಿಂದ ಪ್ರಾರಂಭವಾಗುತ್ತದೆ. ಎಲ್ಲಾ ದೇಶಗಳ ಸಂಸ್ಕೃತಿ ವಿಭಿನ್ನವಾಗಿದ್ದರೂ, ಆಚಾರ-ವಿಚಾರಗಳು ವಿಭಿನ್ನವಾಗಿದ್ದರೂ, ಎಲ್ಲಾ ದೇಶಗಳು ಒಟ್ಟಾಗಿ ಹೊಸ ವರ್ಷವನ್ನು ಒಂದೇ ದಿನ ಆಚರಿಸುತ್ತವೆ. ಪರಸ್ಪರ  ಶುಭಕೋರಿ, ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

4000 ವರ್ಷಗಳ ಹಿಂದೆ ಬ್ಯಾಬಿಲೋನ್‌ನಲ್ಲಿ ಪಾಶ್ಚಿಮಾತ್ಯ ನಾಗರಿಕತೆಯ ಹೊಸ ವರ್ಷವನ್ನು ಆಚರಿಸಲಾಯಿತು. ಆದರೆ ಆ ಸಮಯದಲ್ಲಿ ಹೊಸ ವರ್ಷವನ್ನು ಮಾರ್ಚ್ 21 ರಂದು ಆಚರಿಸಲಾಗಿತ್ತು. ಆದರೆ ಜೂಲಿಯನ್ ಕ್ಯಾಲೆಂಡರ್ ಆಗಮನದ ನಂತರ ಪ್ರತಿ ವರ್ಷ ಜನವರಿ 1 ರಂದು ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ವರ್ಷದಲ್ಲಿ 365 ದಿನಗಳಿವೆ, ಅದು ಪೂರ್ಣಗೊಂಡ ನಂತರ ಹೊಸ ವರ್ಷವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಪ್ರಸ್ತುತ ಪ್ರಪಂಚದಾದ್ಯಂತ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ ಎಲ್ಲರೂ ಜನವರಿ 1 ಅನ್ನು ಹೊಸ ವರ್ಷವೆಂದು ಆಚರಿಸುತ್ತಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!