ಶೇಕಡ. 8.5 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ 5000 ಬೆಲೆ ನಿಗದಿ ಪಡಿಸಬೇಕು. ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ರೈತರಿಗೆ ಹಣ ಪಾವತಿ ಮಾಡಬೇಕು. ತೂಕ ಮತ್ತು ಇಳುವರಿ ಘೋಷಣೆಯಲ್ಲಿ ನಡೆಯುತ್ತಿರುವ ಮೋಸ ತಡೆಗಟ್ಟಬೇಕೆಂದು ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕೊಪ್ಪ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಮಾವೇಶವನ್ನು ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಎಲ್ಲಮ್ಮ ತಾಯಿ ದೇವಸ್ಥಾನದ ಸಮುದಾಯ ಭವನದಲ್ಲಿ ಆ.13ರಂದು ನಡೆಸಲಾಗುತ್ತಿದೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್ ಎಲ್ ಭರತ್ ರಾಜ್ ತಿಳಿಸಿದರು.
ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ರೈತರು ಕೃಷಿ ಕಾಯಕ ಮಾಡುವುದೇ ಬಹಳ ಸಂಕಷ್ಟವಾಗಿದೆ. ಜನತೆಗೆ ಸಿಹಿಯನ್ನು ಉಣ ಬಡಿಸುವ ಕಬ್ಬು ಬೆಳೆಗಾರರ ಬದುಕು ಕಹಿಯಾಗಿದೆ, ಕೃಷಿ ವೆಚ್ಚ ಹೆಚ್ಚಾಗಿದ್ದು, ರೈತ ಕೃಷಿ ಉತ್ಪನ್ನಗಳಗಾಗಿ ಮಾಡಿದ ಬಂಡವಾಳವೇ ವಾಪಸ್ ಬಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದರು.
ಕಬ್ಬು ಉಪ ಉತ್ಪನ್ನಗಳಾದ ಮೊಲಾಸಸ್ ಎಥನಾಲ್ ಕಾಕಂಬಿ ಡಿಸ್ಟಿಲರಿಸ್ ಸಹ ವಿದ್ಯುತ್. ಬಯೋ ಕಾಂಪೋಸ್ಟ್ .ಪಶು ಆಹಾರ ಬಗಾಸ್ ಇತರೆ ಉಪ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ ಶೇಕಡ 50ರಷ್ಟು ಪಾಲು ನೀಡಬೇಕು. ಜಮೀನಿಗೆ ಹೊಂದಿಕೊಳ್ಳುವ ಕಬ್ಬಿನ ತಳಿಯನ್ನು ನಾಟಿ ಮಾಡಲು ರೈತನಿಗೆ ಮುಕ್ತ ಅವಕಾಶ ಸಿಗಬೇಕು. ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ 4000ಕ್ಕೂ ಹೆಚ್ಚು ಕಬ್ಬಿಗೆ ಬೆಲೆ ನಿಗದಿಯಾಗಿದ್ದು ಅದರಂತೆ ಟನ್ ಕಬ್ಬಿಗೆ 5000 ಬೆಲೆ ನಿಗದಿಪಡಿಸಬೇಕು ರಾಜ್ಯ ಸರ್ಕಾರ SAP ನಿಗದಿಪಡಿಸಿ ಬೆಲೆಯ ಅಸಮತೋಲನವನ್ನು ತಡೆಗಟ್ಟಬೇಕು. ಕಾರ್ಖಾನೆ ಮಾಲೀಕರಿಗೆ ಕಬ್ಬಿನಿಂದ 12,000ದಿಂದ 13,000 ಆದಾಯ ಬರುತ್ತಿದ್ದು, ಆ ಆದಾಯದಲ್ಲಿ ರೈತರಿಗೆ ಪಾಲನ್ನು ನೀಡಬೇಕೆಂದರು.
ಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮದ್ದೂರು ತಾಲೂಕು ಅಧ್ಯಕ್ಷ ಎಸ್.ವಿಶ್ವನಾಥ್ .ಕಾರ್ಯದರ್ಶಿ ಸಿದ್ದೇಗೌಡ, ಸೊ.ರಾ ಶಿವರಾಂ, ದರ್ಶನ್, ಬಾಲರಾಜ್, ರಾಮಚಂದ್ರ ಉಪಸ್ಥಿತರಿದ್ದರು.




