Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಬ್ಬು ಕಟಾವು ಯಂತ್ರ ಖರೀದಿಸಿದ ರೈತ ಮಹಿಳೆ

ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮದ್ದೂರು ತಾಲ್ಲೂಕಿನ ಜ್ಯೋತಿ ಎಂಬ ರೈತ ಮಹಿಳೆ 97 ಲಕ್ಷ ರೂ ವೆಚ್ಚದ ಕಬ್ಬು ಕಟಾವು ಯಂತ್ರವನ್ನು ಹಾರ್ವೆಸ್ಟ್ ಹಬ್ ಎಂಬ ಯೋಜನೆಯಡಿ ಖರೀದಿಸಿದ್ದು 39,86,000 ರೂ ಸಬ್ಸಿಡಿ ಸರ್ಕಾರದಿಂದ ದೊರೆಯುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮದ್ದೂರು ತಾಲ್ಲೂಕಿನ ಬೆಳತೂರು ಗೇಟ್ (ಮದ್ದೂರು-ಕೊಪ್ಪ ರಸ್ತೆ) ನಲ್ಲಿ ನಡೆದ ಕಬ್ಬು ಕಟಾವು ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷಿಯನ್ನು ಮಾಡಲು ಜಿಲ್ಲೆಯಲ್ಲಿ ಬಹಳ ಜನ ಆಸಕ್ತಿ ಹೊಂದಿದ್ದೀರಾ, ಬಹಳಷ್ಟು ಜನ ಕೃಷಿ ಇಲಾಖೆಯಿಂದ ದೊರೆಯುವ ಸಂಪನ್ಮೂಲ, ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೀರಾ, ಜೊತೆಗೆ ಕೃಷಿ ಬಗ್ಗೆ ತರಬೇತಿ ಪಡೆಯುವುದು, ಸಂಶೋಧನ ಕೇಂದ್ರದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಮೇರಿಕ ಹಾಗೂ ಇನ್ನಿತರೆ ದೇಶಗಳಲ್ಲಿ ಕೃಷಿ ಪದ್ದತಿಯು ಸಂಪೂರ್ಣವಾಗಿ ಯಂತ್ರದಿಂದ ಕೂಡಿರುವುದನ್ನು ನೋಡಿದಾಗ ನಮ್ಮ ದೇಶದ ರೈತರು ಕೃಷಿಯಲ್ಲಿ ಬಹಳ ಯಂತ್ರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಹಲವಾರು ಕಾರಣಗಳಿಂದ ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಬೇಕಿದೆ. ಇದರ ಬಗ್ಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಸುವ ತರಬೇತಿಯಲ್ಲಿ ಹೆಚ್ಚು ಜನರು ಭಾಗವಹಿಸಬೇಕು ಎಂದರು.

97 ಲಕ್ಷ ರೂ ಗಳ ಕಬ್ಬು ಕಟಾವು ಯಂತ್ರವನ್ನು ಪರಿಶಿಷ್ಟ ಜಾತಿ ಪಂಗಡದವರಿಗೆ ನೀಡಿದರೆ ಇದೇ ಯಂತ್ರಕ್ಕೆ 49 ಲಕ್ಷ ರೂ ಸಬ್ಸಿಡಿ ನೀಡಲಾಗುವುದು. ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸರ್ಕಾರ ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ರೈತರಿಗೆ ಹೆಚ್ಚಿನ ಇಳುವರಿ ಹಾಗೂ ಲಾಭ ಬರಲಿದೆ. ಇದನ್ನು ರೈತರು ಮನಗಂಡು ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದರು.

ಕಬ್ಬು ಕಟಾವು ಯಂತ್ರವನ್ನು ಬಾಡಿಗೆಗೆ ನೀಡಿ ಕೆಲವು ವರ್ಷಗಳ ನಂತರ ಯಂತ್ರದಿಂದ ಲಾಭ ಬರಲಿದೆ. ಈ ಯಂತ್ರವನ್ನು ಬೆಳಗಾವಿಯಲ್ಲಿ ಹೆಚ್ಚು ಜನರು ಬಳಸುತ್ತಿದ್ದಾರೆ. ಮೊದಲ ಬಾರಿಗೆ ಬೆಳಗಾವಿಯಲ್ಲಿ 20 ಯಂತ್ರವನ್ನು ‌ನೀಡಲಾಗಿತ್ತು. ಈ ಬಾರಿ ಕಬ್ಬು ಕಟಾವು ಯಂತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು, 100 ಯಂತ್ರಗಳಿಗೆ 500 ಅರ್ಜಿಗಳು ಬಂದಿವೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕಟಾವಿಗಾಗಿ ಹೊರ ಜಿಲ್ಲೆಯಿಂದ ಅವರಿಗೆ ಮುಂಗಡ ನೀಡಿ ಕರೆತರಲಾಗುತ್ತದೆ. ಇಂತಹ ಯಂತ್ರ ಖರೀದಿಗೆ ರೈತರನ್ನು ಸಕ್ಕರೆ ಕಾರ್ಖಾನೆಗಳು ಪ್ರೋತ್ಸಾಹಿಸಬೇಕು ಎಂದರು.

ಭತ್ತ ಹಾಗೂ ರಾಗಿ ಬೆಳೆಯ ನಾಟಿಯನ್ನು ಮಾಡುವ ರೈತರು ನೀರನ್ನು ಸಮ ಪ್ರಮಾಣದಲ್ಲಿ ಹಾಯಿಸಬೇಕು. ನೀರನ್ನು ಹೆಚ್ಚಾಗಿ ಹಾಯಿಸಿದಲ್ಲಿ ಬೆಳೆ ಇಳುವರಿ ಕಡಿಮೆಯಾಗುವುದು. ವೈಜ್ಞಾನಿಕ ವಿಧಾನವನ್ನು ತಿಳಿದು ಕೃಷಿ ಮಾಡುವುದು ಸೂಕ್ತ. ಭತ್ತ ರಾಗಿಯ ಬಿತ್ತನೆ, ಗೊಬ್ಬರ ಹಾಗೂ ಔಷಧಿಯನ್ನು ಸರ್ಕಾರದಿಂದ ರೈತರಿಗೆ ಯಾವುದೇ ಕೊರತೆ ಬಾರದಂತೆ ನೀಡಲಾಗುತ್ತಿದೆ. ಇನ್ನೂ ಹಲವಾರು ಹೊಸ ಕಾರ್ಯಕ್ರಮಗಳನ್ನು ರೈತರಿಗೆ ನೀಡುವ ಸಲುವಾಗಿ ಸರ್ಕಾರವು ಚಿಂತಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ರವಿಕುಮಾರ್, ಮದ್ದೂರು ಶಾಸಕ ಉದಯ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ