Thursday, September 19, 2024

ಪ್ರಾಯೋಗಿಕ ಆವೃತ್ತಿ

ಸುಮಲತಾ ಅಂಬರೀಶ್- ರವೀಂದ್ರ ಶ್ರೀಕಂಠಯ್ಯ ನಡುವೆ `ಡೀಲ್’ ಜಟಾಪಟಿ 

ಒಂದು ಕಾಲದಲ್ಲಿ ಮಂಡ್ಯ ರಾಜಕಾರಣ ಮತ್ತು ರಾಜಕಾರಣಿಗಳನ್ನು ದೇಶವೇ ಗಮನಿಸುತ್ತಿತ್ತು. ಮಂಡ್ಯ ಅಂದ್ರೆ ಇಂಡಿಯಾ ಎಂದು ಹೇಳುತ್ತಿದ್ದ ಕಾಲವೂ ಇತ್ತು. ಆದರೆ ಇಂದು ಮಂಡ್ಯ ರಾಜಕಾರಣ ಬೇರೆಯೇ ಕಾರಣಕ್ಕೆ ಗಮನ ಸೆಳೆಯುತ್ತಿದೆ‌. ನಾಲ್ಕು ವರ್ಷಗಳ ಹಿಂದೆ ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿದ ನಂತರ ದಳಪತಿಗಳು ಹಾಗೂ ಸುಮಲತಾ ನಡುವೆ ನಡೆಯುತ್ತಿರುವ ಜಟಾಪಟಿ ಬೇರೆಯೇ ಕಾರಣಕ್ಕೆ ದೇಶಾದ್ಯಂತ ಸುದ್ದಿಯಾಯಿತು. ಚುನಾವಣೆ ಗೆದ್ದುಸುಮಲತಾ ಅಂಬರೀಶ್ ಸಂಸದೆಯಾದ ನಂತರ ದಳಪತಿಗಳ ನಡುವೆ ನಡೆಯುತ್ತಿದ್ದ ವಾರ್ ಮತ್ತಷ್ಟು ತೀವ್ರಗೊಂಡಿತು.

ಅದರಲ್ಲೂ ಸಂಸದೆ ಸುಮಲತಾ ಹಾಗೂ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವೆ ಬೀದಿ ಕಾಳಗ ಸಾಕಷ್ಟು ಜೋರಾಗಿಯೇ ನಡೆಯುತ್ತಿದೆ. ಬೇರೆಲ್ಲಾ ದಳಪತಿಗಳು ಸುಮ್ಮನಿದ್ದರೂ ರವೀಂದ್ರ ಶ್ರೀಕಂಠಯ್ಯ ಹಾಗೂ ಸುಮಲತಾ ಅಂಬರೀಶ್ ನಡುವೆ ಶುರುವಾಗಿರುವ ಬೀದಿ ಕಾಳಗ, ದಿನಕಳೆದಂತೆ ಮತ್ತಷ್ಟು ತೀವ್ರತೆ ಪಡೆಯುತ್ತಿದೆ.

ಡೀಲ್ ಸಂಸದೆ ಸುಮಲತಾ

ಸಂಸದೆ ಸುಮಲತಾ ಅವರು ರವೀಂದ್ರ ಶ್ರೀಕಂಠಯ್ಯನಿಗೆ ಮೈ ತುಂಬಾ ದುರಹಂಕಾರ ಇದೆ. ಈ ಅಹಂಕಾರದಿಂದಾಗಿಯೇ ಹಲವು ಬಾರಿ ಸೋತಿದ್ದ. ಜನರು ಈಗ ಗೆಲ್ಲಿಸಿದರೂ ಇನ್ನೂ ಬುದ್ಧಿ ಬಂದಿಲ್ಲ. ಏಟ್ರಿಯಾ ಹೋಟೆಲ್ ನಲ್ಲಿ ನಡೆದ ಯಾವ ವಿಡಿಯೋ ಬೇಕು ಅದನ್ನು ಪೆನ್ ಡ್ರೈವ್ಗೆ ಹಾಕಿ ಕೊಡುತ್ತೇನೆ ಎಂದು ಹೇಳಿದ್ದರು.

ಇದರಿಂದ ಕೆರಳಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದೆ ಸುಮಲತಾ ಮತ್ತವರ ತಂಡ ಬೆಂಗಳೂರಿನ ಏಟ್ರಿಯಾ ಹೋಟೆಲ್ಲಿನ ಕೋಣೆಯಲ್ಲಿ ಕುಳಿತು ಬೆಂಗಳೂರು- ಮೈಸೂರು ಹೆದ್ದಾರಿ ನಿರ್ಮಿಸುತ್ತಿರುವ ದಿಲೀಪ್ ಬಿಲ್ಡ್ ಕಾನ್ ಅಧಿಕಾರಿಯ ಜೊತೆ ಎಷ್ಟು ಪರ್ಸೆಂಟೇಜ್ ಕೇಳಿದ್ರಿ ? ಎಷ್ಟು ಕೋಟಿ ಕೇಳಿದ್ರಿ ? ಎಂಬ ಡೀಲ್ ವಿಡಿಯೋ ಪೆನ್ ಡ್ರೈವ್ಗೆ ಹಾಕಿ ಕೊಡಿ ಎಂದು ಕೇಳಿದ್ದರು.

ಸಂಸದೆ ಸುಮಲತಾ ಅಂಡ್ ಟೀಮ್ ಏಟ್ರಿಯಾ ಹೋಟೆಲ್ ನಲ್ಲಿ ಅಧಿಕಾರಿಯ ಜೊತೆ ಮಾಡಿರುವ ಡೀಲ್ ವೀಡಿಯೋ ದಾಖಲೆ ನನ್ನ ಬಳಿ ಇದ್ದು, ಅದನ್ನು ಚುನಾವಣೆಯ ಸಮಯದಲ್ಲಿ ಜನತಾ ನ್ಯಾಯಾಲಯದ ಮುಂದೆ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ನನಗೆ ದುರಹಂಕಾರ ಇದ್ದರೆ ನನ್ನ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ.ರವೀಂದ್ರ ಶ್ರೀಕಂಠಯ್ಯನವರಿಗೆ ಮೈ ತುಂಬಾ ದುರಂಕಾರ ತುಂಬಿದೆ ಎನ್ನಲು ಸುಮಲತಾ ಯಾರು? ಮೊದಲು ಅವರು ಕ್ಷೇತ್ರದ ಜನರು ಮತ್ತು ಅಧಿಕಾರಿಗಳ‌ ಜೊತೆ ಯಾವ ರೀತಿ ಅಹಂಕಾರದಿಂದ ನಡೆದುಕೊಂಡಿದ್ದಾರೆ, ಆ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ‌. ನನ್ನ ಬಗ್ಗೆ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

ನಮ್ಮ ಕುಟುಂಬ 1952 ರಿಂದಲೂ ರಾಜ್ಯ ರಾಜಕಾರಣದಲ್ಲಿದೆ. ರವೀಂದ್ರ ಬಂದಾಗ ಕ್ಷೇತ್ರ ಹೇಗಿತ್ತು ನಂತರ ಏನಾಗಿದೆ ಎಂಬುದು ಜನರಿಗೂ ಗೊತ್ತಿದೆ. ಸಂಸದೆ ಅವರಿಂದ ನಾನು ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ. ನನ್ನ ಅಭಿವೃದ್ಧಿ ಬಗ್ಗೆ ಮಾತನಾಡುವ ನೀವು ಮಂಡ್ಯ ಜಿಲ್ಲೆಗೆ ಏನೆಲ್ಲಾ ಅಭಿವೃದ್ಧಿ ಮಾಡಿದ್ದೀರಿ ಎಂಬ ಪಟ್ಟಿ ಮೊದಲು ಬಿಡುಗಡೆ ಮಾಡಿ. ಕೇಂದ್ರ ಸರ್ಕಾರದ ರೈಲು ಶ್ರೀರಂಗಪಟ್ಟಣದ ಬಳಿ ನಿಲ್ಲಿಸಲು ಆಗದ ನೀವೇನು,ನನ್ನ ಬಗ್ಗೆ ಮಾತನಾಡುವುದು.ಜೆಡಿಎಸ್ ಶಾಸಕರ‌ನ್ನು ಆಣೆ ಪ್ರಮಾಣಕ್ಕೆ ಕರೆಯುವ ಮೊದಲು ನೀವು ದಿಲೀಪ್ ಬಿಲ್ಡ್ ಕಾನ್ ಅಧಿಕಾರಿಯ ಜೊತೆ ಏಟ್ರಿಯಾ ಹೋಟೆಲ್ ನಲ್ಲಿ ನಡೆದ ಡೀಲ್ ಬಗ್ಗೆ ಮೊದಲು ಜನರಿಗೆ ಬಹಿರಂಗ ಮಾಡಿ ನಂತರ ಬನ್ನಿ, ದೆವ್ವದ ಬಾಯಲ್ಲಿ ಭಗವದ್ಗೀತೆ ಎಂದೆಲ್ಲಾ ರವೀಂದ್ರ ಶ್ರೀಕಂಠಯ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ದಿಶಾ ಸಭೆಯಲ್ಲಿ ಸುಮಲತಾ ಹಾಗೂ ರವೀಂದ್ರ ಶ್ರೀಕಂಠಯ್ಯ ನಡುವೆ ಸಾಕಷ್ಟು ಬಾರಿ
ದೊಡ್ಡ ಜಟಾಪಟಿಯೇ ನಡೆದಿದೆ.ಹೀಗೆ ಅವಕಾಶ ಸಿಕ್ಕಾಗಲೆಲ್ಲ ಸುಮಲತಾ ಮತ್ತು ರವೀಂದ್ರ ಶ್ರೀಕಂಠಯ್ಯ ನಡುವೆ ಮಾತಿನ ವಾಗ್ದಾಳಿ ಬಿರುಸಾಗಿಯೇ ನಡೆಯುತ್ತಿದೆ.

ಸುಮಲತಾ ಅಂಬರೀಶ್ ಹಾಗೂ ರವೀಂದ್ರ ಶ್ರೀಕಂಠಯ್ಯ ನಡುವೆ ನಡೆಯುತ್ತಿರುವ ಈ ಜಟಾಪಟಿ ಕೆಲವರಿಗೆ ಮನರಂಜನೆ ನೀಡುತ್ತಿದೆಯೇ ಹೊರತು, ಜಿಲ್ಲೆಯ ಅಭಿವೃದ್ಧಿಗೆ ಇದರಿಂದ ಯಾವುದೇ ರೀತಿಯ ಪ್ರಯೋಜನವೂ ಇಲ್ಲ. ಮಂಡ್ಯ ರಾಜಕಾರಣ ದೇಶಾದ್ಯಂತ ಈ ರೀತಿ ಸುದ್ದಿಯಾಗುತ್ತಿರುವುದು ಶೋಭೆ ತರುವ ಸಂಗತಿಯಂತೂ ಅಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!