ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರೆ ಎಂಬುದು ವದಂತಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಶುದ್ದ ಸುಳ್ಳು ಎಂದು ಕಾಂಗ್ರೆಸ್ ಮುಖಂಡ ದರ್ಶನ್ ಲಿಂಗರಾಜು ತಿಳಿಸಿದರು.
ಶ್ರೀರಂಗಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಲತಾ ಅಂಬರೀಶ್ ಅವರು ಸ್ವಾಭಿಮಾನಿ ಹೋರಾಟದ ಮೂಲಕ ಜಿಲ್ಲೆಯ ಎಲ್ಲಾ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳು, ಜಿಲ್ಲೆಯ ಜನತೆಯ ಅಭೂತ ಪೂರ್ವ ಮತಗಳಿಂದ ಗೆಲುವು ಸಾಧಿಸಿ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅವರು ಯಾವ ಪಕ್ಷಗಳ ಕಡೆಯೂ ಒಲವು ತೋರಿಸಿಲ್ಲ. ಸದ್ಯಕ್ಕೆ ಯಾವ ಪಕ್ಷಕ್ಕೂ ಸೇರಲ್ಲ ಎಂದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.
ಮೈಸೂರು-ಬೆಂಗಳೂರು ಹೆದ್ದಾರಿಯ ಗೌಡಹಳ್ಳಿ ಬಳಿ ಬೈಪಾಸ್ ರಸ್ತೆ ನಿರ್ಮಿಸಲು ಸಂಸದೆ ಸುಮಲತಾ ಅವರು ಕೇಂದ್ರ ಸಚಿವರ ಜೊತೆ ಮಾತನಾಡಿದ್ದಾರೆ. ಅಂಡರ್ ಪಾಸ್ ನಿರ್ಮಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದರು.
2023 ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಶ್ರೀರಂಗಪಟ್ಟಣದಲ್ಲಿ ನಮ್ಮ ತಂದೆ ಎಸ್.ಎಲ್ ಲಿಂಗರಾಜು ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಕಳೆದ ಎರಡು ವರ್ಷದಿಂದ ಅವರ ಆರೋಗ್ಯ ಕೆಟ್ಟಿದ್ದರಿಂದ ಅವರು ಸಕ್ರಿಯವಾಗಿರಲಿಲ್ಲ. ಅವರ ಮಗನಾಗಿ ನಾನು ಪಕ್ಷದಲ್ಲಿ ಕೆಲಸ ಮಾಡುತ್ತಿದ್ದು, ಈಗ ನಮ್ಮ ತಂದೆ ಲಿಂಗರಾಜು ಅವರು ಸಕ್ರಿಯವಾಗಿದ್ದಾರೆ ಎಂದರು.
ಅಂಬರೀಶ್ ಆಪ್ತರಾಗಿ ಕಳೆದ 20 ವರ್ಷದಿಂದ ಕಾಂಗ್ರೆಸ್ನಲ್ಲಿರುವ ತಂದೆಯವರನ್ನು ಪಕ್ಷ ಗುರುತಿಸಿ ಜಿ.ಪಂ. ಸದಸ್ಯರನ್ನಾಗಿ ಮಾಡಿದೆ.2013 ರಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಿತ್ತು.
2010 ರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ಮುಂಬರುವ 2023 ರ ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದರು.
ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ ರಘು, ಪುರಸಭೆ ಮಾಜಿ ಸದಸ್ಯ ಈ .ಕುಮಾರ್, ಮುಖಂಡರಾದ ನಗುವನಹಳ್ಳಿ ಮಹದೇವಸ್ವಾಮಿ, ನೆಲಮನೆ ಯಶವಂತ್, ಬಲ್ಲೇನಹಳ್ಳಿ ರವಿ, ಚೇತನ್ ಮತ್ತಿತರರಿದ್ದರು