ಪಡೆದ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿಯನ್ನು ಹಾಕಿ ಮನೆ ಹರಾಜು ಮಾಡುವುದಾಗಿ ನೋಟಿಸ್ ಕಳುಹಿಸಿರುವ ಶಿಂಷಾ ಸಹಕಾರ ಬ್ಯಾಂಕಿನಿಂದ ನನಗೆ ನ್ಯಾಯ ದೊರಕಿಸಿಕೊಡಿ ಎಂದು ಪ್ರತಿಭಾ ಎಂಬ ಮಹಿಳೆ ಶಿಂಷಾ ಸಹಕಾರ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು.
ವಿವಿಧ ಪ್ರಗತಿಪರ ಸಂಘಟನೆಯವರ ಜೊತೆಗೂಡಿ ಪ್ರತಿಭಾ ಅವರು ಶಿಂಷಾ ಸಹಕಾರ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಆತಗೂರು ವೆಂಕಟಾಚಲಯ್ಯ ಮಾತನಾಡಿ, ಪ್ರತಿಭಾ ಅವರು ವಿ.ವಿ. ನಗರದಲ್ಲಿರುವ ಮನೆ ಅಡಮಾನ ವಿಟ್ಟು 4 ಲಕ್ಷ ಸಾಲ ಪಡೆದಿದ್ದು ಪ್ರಸ್ತುತ 6 ಲಕ್ಷ ಸಾಲ ಮತ್ತು ಬಡ್ಡಿಯನ್ನು ಪಾವತಿ ಮಾಡಿದ್ದಾರೆ.
ಆದರೆ ಇನ್ನು ಆರು ಲಕ್ಷ ಸಾಲ ಮತ್ತು ಬಡ್ಡಿ ಕಟ್ಟಬೇಕು. ತಪ್ಪಿದರೆ ಮನೆಯನ್ನು ಹರಾಜು ಹಾಕುವುದಾಗಿ ನೋಟಿಸನ್ನು ಬ್ಯಾಂಕಿನವರು ನೀಡಿದ್ದಾರೆ.
ಹಣ ಕಟ್ಟಿದ್ದರೂ ಬಡ್ಡಿ, ಚಕ್ರಬಡ್ಡಿ ಹಾಕಿ ನನಗೆ ಅನ್ಯಾಯ ಮಾಡುತ್ತಿದ್ದು, ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿದರು.
ಪ್ರತಿಭಟನಾ ಸ್ಥಳಕ್ಕೆ ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ ಹಾಗೂ ಶಿಂಷಾ ಸಹಕಾರ ಬ್ಯಾಂಕಿನ ಉಪ ವ್ಯವಸ್ಥಾಪಕ ಉಮಾಶಂಕರ್ ಬಂದು ಮನವಿ ಸ್ವೀಕರಿಸಿ ಮಂಡಳಿ ಮುಂದೆ ಚರ್ಚಿಸುವುದಾಗಿ ಪ್ರತಿಭಟನಾಕಾರರಿಗೆ ತಿಳಿಸಿದರು.
ಪ್ರತಿಭಟನೆಯಲ್ಲಿ ಬೋರಯ್ಯ. ಡಿ.ಕೆ.ಕೃಷ್ಣ. ರಾಜಮುಡಿ. ಸಣ್ಣಪ್ಪ. ಪುಟ್ಟರಾಮು.ನಾಗೇಶ. ನಾಗರಾಜು. ಶಂಕರ. ಜಯರಾಮು. ಅಂಬರೀಶ್ ಭಾಗವಹಿಸಿದ್ದರು.