Thursday, September 19, 2024

ಪ್ರಾಯೋಗಿಕ ಆವೃತ್ತಿ

ತಮಿಳು ಕಾಲೋನಿ ನಿವಾಸಿಗಳಿಗೆ ಸುಸಜ್ಜಿತ ಮನೆ ನಿರ್ಮಾಣ : ಸುಮಲತಾ ಅಂಬರೀಶ್

ಮಂಡ್ಯ ನಗರದ ಜಿಲ್ಲಾಸ್ಪತ್ರೆ ಪಕ್ಕದಲ್ಲಿರುವ ತಮಿಳು ಕಾಲೋನಿ ನಿವಾಸಿಗಳು ಯಾರ ಹೇಳಿಕೆ ಮಾತನ್ನು ಕೇಳಬಾರದು. ಕೆರೆಯಂಗಳದಲ್ಲಿ ಕಟ್ಟಿರುವ ಸುಸಜ್ಜಿತ ಮನೆಗಳಿಗೆ ತೆರಳಬೇಕೆಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಮಂಡ್ಯದ ಕೆರೆಯಂಗಳದ ವಿವೇಕಾನಂದ ಬಡಾವಣೆಯಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ನಿರ್ಮಿಸಲಾಗಿರುವ ಜಿ+3 ಮಾದರಿಯ 576 ಮನೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅಂಬರೀಶ್ ಅವರ ಕನಸಾಗಿತ್ತು
ಬಡ ಜನರಿಗೆ ವಸತಿ ನೀಡಬೇಕೆಂಬುದು ಅಂಬರೀಶ್ ಅವರ ಕನಸಾಗಿತ್ತು. ಅದರಂತೆ ಈಗಾಗಲೇ ಹಾಲಹಳ್ಳಿ ಸ್ಲಂ ನಿವಾಸಿಗಳಿಗೆ ನಿವೇಶನ ನೀಡಲಾಗಿದೆ. ಈಗ ತಮಿಳು ಕಾಲೋನಿ ನಿವಾಸಿಗಳು ಕೆರೆಯಂಗಳದಲ್ಲಿ ನಿರ್ಮಿಸಿರುವ ಸುಸಜ್ಜಿತ ವಸತಿಗೆ ಬಂದರೆ ಅವರು ನೆಮ್ಮದಿಯಿಂದ ಜೀವನ ನಡೆಸಬಹುದು. ಯಾರದೋ ಹೇಳಿಕೆ ಮಾತು ಕೇಳಿ ಮನೆಗಳು ಅನ್ಯರ ಪಾಲಾಗಲು ಬಿಡಬಾರದು ಎಂದರು.

2013 ರಲ್ಲಿ ಅಂಬರೀಶ್ ಅವರು ಗೆದ್ದು ಹೋದ ಸಂದರ್ಭದಲ್ಲಿ ಸಚಿವ ಸ್ಥಾನ ಬೇಕೆಂದಾಗ ಅವರಿಗೆ ಲೋಕೋಪಯೋಗಿ, ಇಂಧನ ಖಾತೆ ಪಡೆಯಿರಿ ಎಂದಾಗ, ಅಂಬರೀಶ್ ಅವರು ಬಡವರಿಗೆ ಸೂರು ಒದಗಿಸಬೇಕು ಅಂತ ಹೇಳಿ ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು ಎಂದರು.

ಸಂತೋಷ ತಂದಿದೆ
ಸ್ಲಂ ಜನರು ಸಾಕಷ್ಟು ಸಂಕಷ್ಟದಲ್ಲಿದ್ದನ್ನು ಕಂಡ ಅಂಬರೀಶ್ ಅವರು ಹಾಲಹಳ್ಳಿಯಲ್ಲಿ ಬಡಜನರಿಗೆ ವಸತಿ ನಿರ್ಮಿಸಲು ಮುಂದಾದರು. ನಂತರದ ದಿನಗಳಲ್ಲಿ ಹಾಲಹಳ್ಳಿ, ತಮಿಳು ಕಾಲೋನಿ ಜನರಿಗೆ ನಿವೇಶನ ನೀಡುವ ವಿಚಾರ ನೆನೆಗುದಿಗೆ ಬಿದ್ದಿತ್ತು. ಇದನ್ನು ನಾನು ಕೈಗೆತ್ತಿಕೊಂಡು ಅಂಬರೀಶ್ ಕನಸು ನನಸು ಮಾಡಲು ಮುಂದಾದೆ. ಇದ್ದ ಗೊಂದಲ ಬಗೆಹರಿಸಿ ಇಂದು ಉದ್ಘಾಟನೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

576 ಮನೆಗಳ ಯೋಜನೆಗೆ ಅನುದಾನದ ಕೊರತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಹಲವು ಸಭೆ ಮಾಡಿದ್ದೇನೆ. ವಸತಿ ಸಚಿವ ಸೋಮಣ್ಣ ಅವರು ಸಾಕಷ್ಟು ಅನುದಾನ ನೀಡಿದರು. ಎಲ್ಲರ ಶ್ರಮ,ಒಗ್ಗಟ್ಟಿನಿಂದ ಈ ಕೆಲಸ ನಡೆದಿದೆ ಎಂದರು.

ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿಗೆ ತಡೆಯೊಡ್ಡಿ ವಿರೋಧ ಮಾಡಲು ಒಂದಷ್ಟು ಗುಂಪುಗಳು  ತಯಾರಾಗುತ್ತವೆ. ಮುಗ್ಧ ತಮಿಳು ಕಾಲೋನಿಯ ಜನರನ್ನು ದಾರಿ ತಪ್ಪಿಸಲು ಮುಂದಾಗಿದ್ದಾರೆ.ತಮಿಳು ಕಾಲೋನಿ ಜನರು ಜೋಪಡಿ,ಶೀಟ್ ಗಳನ್ನು ಹಾಕಿ‌ಕೊಂಡು ಮಳೆ, ಗಾಳಿ,ಬಿಸಿಲಿನಲ್ಲಿ ವಾಸ ಮಾಡುತ್ತಿದ್ದಾರೆ.ಇಲ್ಲಿಗೆ ಬಂದು ಸುಸಜ್ಜಿತ ಮನೆಗಳಲ್ಲಿ ವಾಸ ಮಾಡಬೇಕು. ನೀವು ಇದನ್ನು ಬೇಡ ಅಂದರೆ, ಅದು ಬೇರೆಯವರ ಪಾಲಾಗುತ್ತದೆ. ಯಾರದೋ ಮಾತು ಕೇಳಿ ಇಂತಹ ಮನೆಗಳನ್ನು ಬಿಡಬಾರದು. ಇದು ನಿಮ್ಮ ಹಕ್ಕು ಯಾಕೆ ಕಳೆದು ಕೊಳ್ತೀರಿ. ಮೂಲಭೂತ ಸೌಕರ್ಯಗಳ ಬಗ್ಗೆ ನಾನೇ ಗಮನ ಹರಿಸುತ್ತೇನೆ ಎಂದರು.

ಅಭಿವೃದ್ಧಿ ಪರ್ವ
ಮಂಡ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ‌. ಹಾಲಹಳ್ಳಿ ಸ್ಲಂ ಜನರ 632 ಮನೆಗಳ ಹಸ್ತಾಂತರವನ್ನು ಸಂಸದೆ ಸುಮಲತಾ ಅಂಬರೀಶ್ ಅವರು ಮಾಡಿದರು.ಈಗ 576 ಮನೆಗಳನ್ನು ರಾಜೀವ್ ಆವಾಸ್ ಯೋಜನೆಯಲ್ಲಿ ಜಿ‌+2 ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಕೂಡ ಸುಮಲತಾ ಅವರು ಉದ್ಘಾಟನೆ ಮಾಡಿರುವುದು ಸಂತಸದ ವಿಷಯ ಎಂದರು.

ಅಂಬರೀಶ್ ಅವರು ತಮಿಳು ಕಾಲೋನಿ ನಿವಾಸಿಗಳನ್ನು ಸೇರಿಸಿ ಹಾಲಹಳ್ಳಿ ಬಡಾವಣೆಯಲ್ಲಿ ಮನೆ ನಿರ್ಮಾಣಕ್ಕೆ ಅನುದಾನ ತಂದರು. ಆದರೆ ಇದಕ್ಕೆ ಸ್ಲಂ ಜನರು ಒಪ್ಪಲಿಲ್ಲ. ಜನರು ಒಪ್ಪದ ಕಾರಣ ಆಗಿನ ಜಿಲ್ಲಾಧಿಕಾರಿ ಕೆರೆಯಂಗಳದಲ್ಲಿ ಕೊಳಗೇರಿ ಮಂಡಳಿಗೆ ಆರು ಎಕರೆ ಜಾಗ ಬಿಟ್ಟು ಕೊಟ್ಟರು. ಅದರಲ್ಲಿ 4 ಎಕರೆ ಜಾಗದಲ್ಲಿ 576 ಸುಸಜ್ಜಿತ ಮನೆ ಕಟ್ಟಲಾಗಿದೆ ಎಂದು ತಿಳಿಸಿದರು.

ಮನೆ ನಿರ್ಮಾಣದ ಸಂದರ್ಭದಲ್ಲಿ ನಿವಾಸಿಗಳಿಗೆ ನೀರು, ಒಳಚರಂಡಿ, ಬೀದಿದೀಪ, ರಸ್ತೆಗೆ ಹತ್ತು ಕೋಟಿ ಬೇಕು ಅಂತ ಸುಮಲತಾ ಅವರು ಹಿಂದಿನ ಡಿಸಿ ವೆಂಕಟೇಶ್ ಅವರಿಗೆ ಮನವಿ ಮಾಡಿ, 5.70 ಕೋಟಿ ಹಣ ಮಂಜೂರು ಮಾಡಿಸಿಕೊಟ್ಟರು. ನಂತರ ಟೆಂಡರ್ ಮಾಡಿ ಹಾಲಹಳ್ಳಿ ಸ್ಲಂ ಜನರಿಗೆ ಮನೆ ಕೊಡಲಾಗಿದೆ. ಇದಕ್ಕೆ ಸಂಸದರು ಕಾರಣ ಎಂದರು.

ಕಾರ್ಯಕ್ರಮದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ತಾಂತ್ರಿಕ ನಿರ್ದೇಶಕ ಬಿಳಿಗಿರಿ ರಂಗನಾಥ ಸ್ವಾಮಿ, ಎಇಇ ದರ್ಶನ್ ಜೈನ್, ಕಾವ್ಯ, ನಾಗೇಂದ್ರ, ದಿನೇಶ್, ಮುಖಂಡರಾದ ಬೇಲೂರು ಸೋಮಶೇಖರ್, ಶಶಿಕುಮಾರ್, ಅರವಿಂದ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!