Saturday, May 18, 2024

ಪ್ರಾಯೋಗಿಕ ಆವೃತ್ತಿ

ಸ್ಟಾರ್ ಚಂದ್ರು ಬೆಂಬಲಿಸಿ; ಮಂಡ್ಯ ಜಿಲ್ಲೆಯ ಸ್ವಾಭಿಮಾನ ಕಾಪಾಡಿ: ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಜನತೆ ರಾಜಕೀಯವಾಗಿ ಪ್ರಬುದ್ದರು, ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವ-ಸಿದ್ಧಾಂತಗಳನ್ನು ಪಾಲಿಸುವವರು. ಜಿಲ್ಲೆಯ ಸ್ವಾಭಿಮಾನವನ್ನು ಬೇರೆಯವರಿಗೆ ಎಂದೂ ಮಾರಿಕೊಂಡಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಕೃಷಿ ಸಚಿವ ಎನ್.ಚಲುವರಾಯರಾಯಸ್ವಾಮಿ ಅವರು, ಈ ಚುನಾವಣೆ ಜಿಲ್ಲೆಯ ಸ್ವಾಭಿಮಾನದ ಸಂಕೇತವಾಗಿದ್ದು, ಹೊರ ಜಿಲ್ಲೆಯವರನ್ನು ಗೆಲ್ಲಿಸದೆ, ಮಂಡ್ಯದವರನ್ನೇ ಗೆಲ್ಲಿಸಲಿದ್ದಾರೆ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳ ಹಿಂದೆಯೇ ಸ್ಟಾರ್ ಚಂದ್ರು ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಈಗಾಗಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಸುತ್ತಿನ ಪ್ರಚಾರ ಸಭೆ ಮುಗಿದಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದೇವೆ. ಮಂಡ್ಯ ಜಿಲ್ಲೆಯ ಜನರು ಕಾಂಗ್ರೆಸ್ಸನ್ನು ಏಕೆ ಬೆಂಬಲಿಸಬೇಕು ಎಂಬುದನ್ನು ನಾಮಪತ್ರ ಸಲ್ಲಿಸಿದ ನಂತರ ತಿಳಿಸುವುದಾಗಿ ಹೇಳಿದರು.

ಬಿಜೆಪಿ ಧರ್ಮವಿರಬೇಕು

ಚುನಾವಣೆಯಲ್ಲಿ ಸತ್ಯ ಹಾಗೂ ಧರ್ಮಕ್ಕೆ ಗೆಲುವು. ಕುಮಾರಸ್ವಾಮಿ ಅವರ ಬಳಿಯೇ ಸತ್ಯ ಇದೆ ಅಂದುಕೊಂಡಿದ್ದಾರೆ. ನಮ್ಮ ಬಳಿಯೂ ಸತ್ಯ-ಧರ್ಮ ಇದೆ. ಕುಮಾರಸ್ವಾಮಿ ಧರ್ಮಯುದ್ಧ ಎಂದಿದ್ದಾರೆ. ಬಹುಶಃ ಅವರದ್ದು ಬಿಜೆಪಿ ಧರ್ಮ ಇರಬೇಕು ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಅವರಿಗಿಂತಲೂ ಹೆಚ್ಚು ಭಾವನೆ ನಮಗಿದೆ. ಇದು ನಮ್ಮ ಜನ್ಮಭೂಮಿ. ಇಲ್ಲೇ ಹುಟ್ಟಿ, ಬೆಳೆದು, ವ್ಯಾಪಾರ-ವಹಿವಾಟು ನಡೆಸಿ, ಇದೇ ನೆಲದಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಇಲ್ಲೇ ನಮ್ಮ ಮಣ್ಣು ಆಗೋದು. ಅದಕ್ಕೆ ನಮಗೆ ಕುಮಾರಸ್ವಾಮಿಗಿಂತಲೂ ಹೆಚ್ಚು ಭಾವನಾತ್ಮಕತೆ ಈ ಜಿಲ್ಲೆಯೊಂದಿಗೆ ಇದೆ ಎಂದು ಹೇಳಿದರು.

ಸುಮಲತಾ ನಿರ್ಧಾರ ತಿಳಿಸಲಿ

ಸಂಸದೆ ಸುಮಲತಾ ಅವರಿಗೆ ನಾನು ಏನೂ ಹೇಳೋಲ್ಲ. ಅವರು ಏನು ಬೇಕಾದರೂ ತೀರ್ಮಾನ ಮಾಡಲಿ. ಅದಕ್ಕೆ ನನ್ನ ಆಕ್ಷೇಪ ಇಲ್ಲ. ಅವರ ಬೆಂಬಲಿಗರು ಜಾ.ದಳಕ್ಕೆ ಹೇಗೆ ಕೆಲಸ ಮಾಡೋದು ಎಂದು ಹೇಳುತ್ತಿದ್ದಾರೆ. ಸುಮಲತಾ ಅವರು ಶನಿವಾರ ಬೆಂಗಳೂರಿನ ಅವರ ನಿವಾಸದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ. ಸಭೆಯ ಬಳಿಕ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ ಎಂದಷ್ಟೇ ಹೇಳಿದರು.

ಕುಮಾರಸ್ವಾಮಿ ಅವರು ಸುಮಲತಾ ಅವರನ್ನು ಅಕ್ಕ ಅಂದಿದ್ದಾರೆ. ಇದೊಂದು ವಿಪರ್ಯಾಸ ಎಂದ ಚಲುವರಾಯಸ್ವಾಮಿ, ನಾನು ಕುಮಾರಸ್ವಾಮಿ ಅವರನ್ನು ಯಾವಾಗಲೂ ಸ್ನೇಹಿತರು ಎಂದೇ ಕರೆದಿದ್ದೇನೆ. ಅವರು ಮಾತ್ರ ನನ್ನನ್ನು ಅಜಾತ ಶತ್ರು ಎಂದಿದ್ದಾರೆ. ಇನ್ನೂ ಏನು ಮಾತಾಡುತ್ತಾರೆ ಅಂತ ಮುಂದೆ ನೋಡೋಣ ಎಂದು ಹೇಳಿದರು.

ಏ.1ರಂದು ನಾಮಪತ್ರ ಸಲ್ಲಿಕೆ

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಏ. 1ರಂದು ನಾಮಪತ್ರ ಸಲ್ಲಿಸಲಿದ್ದಾರೆ, ಅಂದು ಬೆಳಿಗ್ಗೆ 9 ಗಂಟೆಗೆ ಮಂಡ್ಯ ನಗರದ ಶಕ್ತಿ ದೇವತೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಒಂದು ಲಕ್ಷ ಕಾಂಗ್ರೆಸ್ ಕಾರ್ಯಕರ್ತರು

ಅಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜಿತ್ ಸಿಂಗ್ ಸುರ್ಜೇವಾಲ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಲಿದ್ದು, ಮಂಡ್ಯ ಲೋಕಸಭೆಯ 8 ಕ್ಷೇತ್ರಗಳಿಂದ ಸುಮಾರು ಒಂದು ಲಕ್ಷ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಅಂದು ಯಾವುದೇ ಬಹಿರಂಗ ಸಭೆ ನಡೆಸುವುದಿಲ್ಲ. ತೆರೆದ ವಾಹನದ ಮೂಲಕವೇ ಸುರ್ಜೇವಾಲ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಂಡ್ಯ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಶಾಸಕ ಪಿ.ರವಿಕುಮಾರ್, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ವಿಜಯಲಕ್ಷ್ಮೀ ರಘುನಂದನ್, ಕುರುಬರ ಸಂಘದ ಅಧ್ಯಕ್ಷ ಸುರೇಶ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!