Wednesday, September 18, 2024

ಪ್ರಾಯೋಗಿಕ ಆವೃತ್ತಿ

ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ| ‘ರಾಷ್ಟ್ರೀಯ ಕಾರ್ಯಪಡೆ’ ರಚಿಸಿದ ಸುಪ್ರೀಂ ಕೋರ್ಟ್

ದೇಶದಾದ್ಯಂತ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಸುರಕ್ಷತೆಯ ಕೊರತೆಯ ಬಗ್ಗೆ ಸುಪ್ರೀಂ ಕೋರ್ಟ್ ಇಂದು (ಆ.20) ತೀವ್ರ ಕಳವಳ ವ್ಯಕ್ತಪಡಿಸಿದೆ. ವೈದ್ಯರ ಸುರಕ್ಷತೆಗಾಗಿ ‘ರಾಷ್ಟ್ರೀಯ ಕಾರ್ಯಪಡೆ’ ರಚಿಸಿದೆ.

ಆ.9ರಂದು ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಸಂಬಂಧ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿತು.

ಈ ವೇಳೆ, ಕೋಲ್ಕತ್ತಾದ ಒಂದು ಪ್ರಕರಣ ಸಂಬಂಧ ನಾವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿಲ್ಲ. ದೇಶದಾದ್ಯಂತ ನಡೆಯುತ್ತಿರುವ ಘಟನೆಗಳನ್ನು ತಡೆಗಟ್ಟಲು ಒಂದು ವ್ಯವಸ್ಥಿತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಹಾಗಾಗಿ, ನಾವು ಪ್ರಕರಣ ಕೈಗೆತ್ತಿಕೊಂಡಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ಯುವ ವೈದ್ಯರು, ಅದರಲ್ಲೂ ಮಹಿಳಾ ವೈದ್ಯರ ಕೆಲಸದ ಸ್ಥಳದಲ್ಲಿ ಸುರಕ್ಷತೆ ಕೊರತೆ ಗಂಭೀರ ವಿಷಯವಾಗಿದೆ. ಲಿಂಗದ ಕಾರಣಕ್ಕೆ ಮಹಿಳಾ ವೈದ್ಯರು ಸುರಕ್ಷತೆಯ ಕೊರತೆ ಅನುಭವಿಸುವುದರ ಬಗ್ಗೆ ಕಳವಳ ಹೊಂದಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.

ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಅದಕ್ಕೊಂದು ರಾಷ್ಟ್ರೀಯ ಶಿಷ್ಟಾಚಾರ ಇರಬೇಕು. ಮಹಿಳೆಯರು ಕೆಲಸಕ್ಕೆ ಹೋಗಿ ಸುರಕ್ಷಿತವಾಗಿ ವಾಪಸ್ ಬರಲು ಸಾಧ್ಯವಾಗದಿದ್ದರೆ ನಾವು ಅವರಿಗೆ ಸಮಾನ ಅವಕಾಶವನ್ನು ನಿರಾಕರಿಸಿದ್ದೇವೆ ಎಂದರ್ಥ. ಹಾಗಾಗಿ, ಮಹಿಳೆಯರಿಗೆ ಸುರಕ್ಷತೆ ಒದಗಿಸಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಏನಾದರು ಮಾಡಬೇಕಾಗಿದೆ ಎಂದು ಸಿಜೆಐ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈದ್ಯರ, ವಿ‍ಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನುಸರಿಸಬೇಕಾದ ವಿಧಾನಗಳ ಕುರಿತು ಶಿಫಾರಸುಗಳನ್ನು ನೀಡಲು ನ್ಯಾಯಾಲಯವು ದೇಶದ ಪ್ರಮುಖ ಸಂಸ್ಥೆಗಳ ವೈದ್ಯರನ್ನು ಒಳಗೊಂಡ ‘ರಾಷ್ಟ್ರೀಯ ಕಾರ್ಯಪಡೆ’ಯನ್ನು ರಚಿಸುತ್ತಿದೆ ಎಂದು ಸಿಜೆಐ ತಿಳಿಸಿದ್ದಾರೆ.

ಮಹಾರಾಷ್ಟ್ರ, ಕೇರಳ, ತೆಲಂಗಾಣ ಮುಂತಾದ ಹಲವಾರು ರಾಜ್ಯಗಳು ವೈದ್ಯರ ಮೇಲಿನ ದೌರ್ಜನ್ಯವನ್ನು ಎದುರಿಸಲು ರಾಜ್ಯ ಮಟ್ಟದಲ್ಲಿ ಕಾನೂನುಗಳನ್ನು ರೂಪಿಸಿವೆ ಎಂಬುವುದನ್ನು ಪೀಠವು ಗಮನಿಸಿದೆ. ಆದಾಗ್ಯೂ, ಈ ಕಾನೂನುಗಳು ಸಾಂಸ್ಥಿಕ ಸುರಕ್ಷತಾ ಮಾನದಂಡಗಳಲ್ಲಿನ ನ್ಯೂನತೆಗಳನ್ನು ಪರಿಹರಿಸಿಲ್ಲ ಎಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!