Friday, September 20, 2024

ಪ್ರಾಯೋಗಿಕ ಆವೃತ್ತಿ

ಮಸೂದೆಗಳಿಗೆ ಅಂಕಿತ ಹಾಕಲು ವಿಳಂಬ| ಕೇರಳ ರಾಜ್ಯಪಾಲರಿಗೆ ಸುಪ್ರೀಂಕೋರ್ಟ್ ತರಾಟೆ

ಕೇರಳ ವಿಧಾನಸಭೆಯಲ್ಲಿ ಅಂಗೀಕಾರವಾದ ಬಿಲ್‌ಗಳನ್ನು ಅಂಕಿತ ಹಾಕದೆ ವಿಳಂಬ ಮಾಡಿರುವ ಬಗ್ಗೆ ಕೇರಳ  ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮಸೂದೆಗಳನ್ನು ಬಾಕಿ ಇರಿಸಿಕೊಳ್ಳಲು ರಾಜ್ಯಪಾಲರು ಯಾವುದೇ ಕಾರಣವನ್ನು ನೀಡಿಲ್ಲ. ಶಾಸಕಾಂಗ ಅಂಗೀಕರಿಸಿದ ಬಿಲ್‌ಗಳನ್ನು ತಡೆಯಲು ರಾಜ್ಯಪಾಲರು ತಮ್ಮ ಅಧಿಕಾರವನ್ನು ಬಳಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.

ಕೇರಳ ಸರ್ಕಾರದ ಅರ್ಜಿಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲು ಒಂದು ದಿನ ಮುಂಚಿತವಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು 8 ಬಾಕಿ ಉಳಿದಿರುವ ಮಸೂದೆಗಳಲ್ಲಿ 7ನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದಾರೆ. ಸುಮಾರು 3 ವರ್ಷಗಳಿಂದ ಮಸೂದೆಗಳು ಅಂಕಿತ ಹಾಕದೆ ಬಾಕಿ ಉಳಿದಿತ್ತು.

ಅವರು ಮಂಗಳವಾರ ಸಾರ್ವಜನಿಕ ಆರೋಗ್ಯ ಮಸೂದೆ-2021ಕ್ಕೆ ಅಂಕಿತ ಹಾಕಿದ್ದಾರೆ. ಲೋಕಾಯುಕ್ತ ತಿದ್ದುಪಡಿ ಮಸೂದೆ, ವಿಶ್ವವಿದ್ಯಾಲಯ ಕಾನೂನು ತಿದ್ದುಪಡಿಗಳ ಮಸೂದೆ-2022 ಮತ್ತು ಅಸ್ತಿತ್ವದಲ್ಲಿರುವ ವಿಶ್ವವಿದ್ಯಾನಿಲಯ ಕಾಯಿದೆಗೆ ತಿದ್ದುಪಡಿ ತರುವ ಕುರಿತ ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ.

ಮಸೂದೆಗಳನ್ನು ಬಾಕಿ ಉಳಿಸಿಕೊಳ್ಳುವ ಬದಲು ಏನಾದರೂ ಆಕ್ಷೇಪಾರ್ಹವೆಂದು ಕಂಡುಬಂದರೆ ಅವುಗಳನ್ನು ಹಿಂದಕ್ಕೆ ಕಳುಹಿಸಬೇಕು ಎಂದು ಈ ಮೊದಲು ಸುಪ್ರೀಂಕೋರ್ಟ್‌ ಹೇಳಿತ್ತು. ಪಂಜಾಬ್ ಸರ್ಕಾರವು  ರಾಜ್ಯಪಾಲರ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆಯ ವೇಳೆ ಕೇರಳ ರಾಜ್ಯಪಾಲರು ಕೂಡ ಈ ಕುರಿತ ತೀರ್ಪನ್ನು ಓದುವಂತೆ ಸೂಚಿಸಿದ್ದರು.

ವಿಧಾನಸಭೆಯಲ್ಲಿ ಪಾಸ್‌ ಆದ ಬಿಲ್‌ಗಳಿಗೆ ಅಂಕಿತ ಹಾಕದೆ ರಾಜ್ಯಲಪಾಲರು ಬಾಕಿಯಿಟ್ಟಿದ್ದಾರೆ ಎಂದು  ಪಿಣರಾಯಿ ವಿಜಯನ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 8 ಮಸೂದೆಗಳನ್ನು ಅಂಗೀಕರಿಸದೆ ರಾಜ್ಯಪಾಲರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತರಲಾಗಿತ್ತು. ಇದಲ್ಲದೆ ಮಸೂದೆಗಳನ್ನು ವಿಲೇವಾರಿಗೆ ರಾಜ್ಯಪಾಲರಿಗೆ ಕಾಲಮಿತಿಯನ್ನು ನಿಗದಿಪಡಿಸಲು ನಿರಾಕರಿಸಿದ ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಕೂಡ ಮೇಲ್ಮನವಿ ಸಲ್ಲಿಸಲಾಗಿತ್ತು.

ನವೆಂಬರ್ 2 ರಂದು ಸಲ್ಲಿಸಲಾದ ಅರ್ಜಿಯಲ್ಲಿ ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘನೆ ಮಾಡಿದ್ದಾರೆ ಮತ್ತು ಅನಿರ್ದಿಷ್ಟ ಅವಧಿಗೆ ಮಸೂದೆಗಳಿಗೆ ಅಂಕಿತ ಹಾಕದೆ ನಿರಂಕುಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!