Thursday, September 19, 2024

ಪ್ರಾಯೋಗಿಕ ಆವೃತ್ತಿ

ಟಿಕೆಟ್ ಸಿಗಲಿ, ಸಿಗದಿರಲಿ ಶ್ರೀರಂಗಪಟ್ಟಣದಲ್ಲಿ ಸ್ಪರ್ಧೆ ಖಚಿತ : ತಗ್ಗಹಳ್ಳಿ ವೆಂಕಟೇಶ್

ಕಳೆದ 30 ವರ್ಷಗಳಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿಯುತ್ತಿದ್ದೇನೆ. ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಗೆಲುವಿನಲ್ಲಿ ನನ್ನ ಪರಿಶ್ರಮವಿದೆ. ಜೆಡಿಎಸ್ ವರಿಷ್ಠರು ಅವಕಾಶ ಕಲ್ಪಿಸಲಿದ್ದಾರೆ ಎಂಬ ವಿಶ್ವಾಸವಿದ್ದು, ಬಿ.ಫಾರಂ ಸಿಗಲಿ ಅಥವಾ ಸಿಗದಿರಲಿ ನನ್ನ ಸ್ಪರ್ಧೆ ಖಚಿತ ಎಂದು ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಘೋಷಣೆ ಮಾಡಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಜನತೆ ಅದಕ್ಕೆ ಕಿವಿಗೊಡಬಾರದು ಎಂದು ಮಂಡ್ಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಬೆಂಬಲಿಗರು ಜೆಡಿಎಸ್ ವರಿಷ್ಠರ ಮೂಲಕ ತಗ್ಗಹಳ್ಳಿ ವೆಂಕಟೇಶ್ ಅವರ ಮನವೊಲಿಸಲಿದ್ದಾರೆ, ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವದಂತಿ ಹಬ್ಬಿಸಿದ್ದಾರೆ. ರಮೇಶ್ ಬಂಡಿಸಿದ್ದೇಗೌಡ ಹಾಗೂ ಬಿಜೆಪಿ ಮುಖಂಡ ಸಚ್ಚಿದಾನಂದ ಅವರು ಸಹ ತಗ್ಗಹಳ್ಳಿ ವೆಂಕಟೇಶ್ ನಮಗೆ ಬೆಂಬಲ ಸೂಚಿಸುತ್ತಾರೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ, ಆದರೆ ನಾನೂ ಯಾವುದೇ ಪಕ್ಷಕ್ಕೆ ಮಾರಾಟವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ತಗ್ಗಹಳ್ಳಿ ವೆಂಕಟೇಶ್ ಹಣಕ್ಕೆ ವ್ಯಾಪಾರವಾಗುವ ವ್ಯಕ್ತಿಯಲ್ಲ. ತತ್ವಸಿದ್ಧಾಂತ, ಮಾನವೀಯ ಮೌಲ್ಯಗಳಿಂದ ಜನ ಸೇವೆ ಮಾಡಿಕೊಂಡು ಹಂತ-ಹಂತವಾಗಿ ಈ ಹಂತಕ್ಕೆ ಬೆಳೆದಿದ್ದೇನೆ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಸಾಮಾನ್ಯ ಜನರ ನಡುವೆ ಬೆಳೆದವನು ನಾನು. ನಿಮ್ಮ ಹಾಗೆ ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಬಂದವನಲ್ಲ. ಕ್ಷೇತ್ರದ ಮೂರು ಪಕ್ಷಗಳ ಸಂಭವನೀಯ ಅಭ್ಯರ್ಥಿಗಳು ನನ್ನೊಟ್ಟಿಗೆ ಪಕ್ಷೇತರವಾಗಿ ಸ್ಪರ್ಧಿಸಿ ತಮ್ಮ ಸಾಮಥ್ಯ ಸಾಬೀತುಪಡಿಸಿ, ನಿಮಗಿಂತ ಒಂದು ಮತ ಕಡಿಮೆ ಪಡೆದರೆ, ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆಂದು ಸವಾಲು ಹಾಕಿದರು.

ಮಂಡ್ಯ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಹಾಗೂ ನನ್ನ ನಡುವೆ ಪಕ್ಷ ರಾಜಕಾರಣ ಮೀರಿದ ವಿಶ್ವಾಸವಿದೆ. ಅವರ ಸೇವಾಹಿರಿತನ ಹಾಗೂ ಪಕ್ಷ ನಿಷ್ಠೆ ಗಮನಿಸಿ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದಂತೆ ಒತ್ತಡ ತಂದು ನನ್ನನ್ನು ನಿಯಂತ್ರಿಸಲು ಮುಂದಾದರೆ ಎಂ.ಶ್ರೀನಿವಾಸ್ ಅವರ ಸಖ್ಯ ತೊರೆಯಲು ಹಿಂದೆ ಮುಂದೆ ನೋಡುವುದಿಲ್ಲ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮೂಲಕ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಾಲ್ಕೈದು ಗಂಟೆಗಳ ಸುದೀರ್ಘ ಮಾತುಕತೆ ನಡೆಸಿ, ಆಮಿಷ ತೋರಿಸಲಾಯಿತು. ನಾನೂ ಆಮಿಷಕ್ಕೆ ಬಲಿಯಾಗಿದ್ದಾರೆ ಅಂದೇ ಪಕ್ಷ ತ್ಯಾಗ ಮಾಡುತ್ತಿದ್ದೆ. ಈ ಹಿನ್ನೆಲೆಯಲ್ಲಿ ನನ್ನ ನಿರ್ಧಾರ ಅಚಲವಾಗಿದ್ದು, ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ತಾ.ಪಂ.ಮಾಜಿ ಸದಸ್ಯ ಮುರುಳಿ, ಮುಖಂಡರಾದ ಹನಿಯಂಬಾಡಿ ಸುರೇಶ್, ಹರಕೆರೆ ಸಿದ್ದರಾಜು, ಸಂತೆಕಸಲಗೆರೆ ಜಗದೀಶ್, ಮಂಜು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!