Thursday, September 19, 2024

ಪ್ರಾಯೋಗಿಕ ಆವೃತ್ತಿ

ತಹಶೀಲ್ದಾರ್ ಪರ ವಿವಿಧ ಸಂಘಟನೆಗಳ ಪ್ರತಿಭಟನೆ

ಮಂಡ್ಯ ತಹಶೀಲ್ಧಾರ್ ಕುಂಞ ಅಹಮದ್ ಅವರ ವಿರುದ್ಧ ಕೆಲವು ವ್ಯಕ್ತಿಗಳು ಷಡ್ಯಂತ್ರ ನಡೆಸಿ ಅವರ ತೇಜೋವಧೆ ನಡೆಸುತ್ತಿದ್ದು, ಇಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಂಡ್ಯನಗರದಲ್ಲಿ ಗುರುವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಮಂಡ್ಯನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರು, ಕನ್ನಡ ಪರ ಸಂಘಟನೆಗಳು, ರೈತರು ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಮುಸ್ಲಿಂ ಬಾಂಧವರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಪ್ರಾಮಾಣಿಕ ಅಧಿಕಾರಿ ವಿರುದ್ಧ ಸಂಚು ರೂಪಿಸಿರುವ ಭೂಗಳ್ಳರು ಹಾಗೂ ಆರ್.ಟಿ.ಐ. ಕಾರ್ಯಕರ್ತರ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಪಡಿತರ ಅಕ್ಕಿಯ ಅಕ್ರಮ ದಂಧೆ ನಡೆಯುತ್ತಿದ್ದು, ಬಡವರ ಪಾಲಿನ ಅಕ್ಕಿಯನ್ನು ಕಬಳಿಸಿ ವಿದೇಶಕ್ಕೆ ಮಾರಾಟ ಮಾಡುವ ಜಾಲವೊಂದು ಸಕ್ರಿಯವಾಗಿದ್ದು, ಇಂತಹ ಕಡೆಗಳಲ್ಲಿ ತಹಶೀಲ್ದಾರ್ ಅವರು ದಾಳಿ ನಡೆಸಿ  ಆಕ್ರಮವಾಗಿ ದಾಸ್ತಾನು ಇಟ್ಟುಕೊಟ್ಟಿದ್ದ ಅಕ್ಕಿಯನ್ನು ವಶಪಡಿಸಿಕೊಂಡು, ಅದನ್ನು ಬಹಿರಂಗ ಹರಾಜು ಹಾಕುವ ಮುಖಾಂತರ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಪ್ರಾಮಾಣಿಕ ಕೆಲಸ ಮಾಡುದ್ದಾರೆ.

ಅಲ್ಲದೇ ಬಹಳ ಹಿಂದಿನಿಂದಲೂ ಮಂಡ್ಯ ತಾಲ್ಲೂಕಿನಾದ್ಯಂತ ಸರ್ಕಾರಿ ಭೂಮಿಯನ್ನು ಕಬಳಿಸುವ ತಂಡ ಮತ್ತು ದಲ್ಲಾಳಿಗಳು ಸಕ್ರಿಯವಾಗಿದ್ದು, ಅವರ ಆಕ್ರಮಗಳಿಗೆ ತಹಶೀಲ್ದಾರ್‌ ಅವರು ಕಡಿವಾಣ ಹಾಕುವ ಕೆಲಸ ಮಾಡಿದ್ದು, ಇದು ಅಕ್ರಮ ಲೂಟಿಕೋರರು ಮತ್ತು ದಂಧೆಕೋರರಿಗೆ ನುಂಗಲಾರದ ತುತ್ತಾಗಿದೆ, ಇವರು ವೃತ್ತಿಪರ ಆರ್.ಟಿ.ಐ. ಕಾರ್ಯಕರ್ತನನ್ನು ‍‍ಛೂ ಬಿಟ್ಟು ಸುಳ್ಳನ್ನು ಸತ್ಯವೆಂದು ಹೇಳಿ ನಂಬಿಸುವ ಅಪಪ್ರಚಾರ ಮಾಡುತ್ತಿದ್ದಾರೆಂದು ದೂರಿದರು.

ಒಬ್ಬ ಪ್ರಾಮಾಣಿಕ ದಕ್ಷ ಅಧಿಕಾರಿಯಾಗಿ ಜನಪರವಾಗಿ ತಾಲ್ಲೂಕಿನಾದ್ಯಂತ ಬಡವರು, ದೀನ-ದಲಿತರ ಪರ ಹಗಲಿರುಳು ದುಡಿಯುತ್ತಿರುವ ದಕ್ಷ ಅಧಿಕಾರಿಯ ಮೇಲೆ ಲೂಟಿಕೋರರು, ಭೂಗಳ್ಳರು ಹಾಗೂ ಕೆಲ ಸಮಾಜ ಘಾತಕ ಶಕ್ತಿಗಳು ತೇಜೋವಧೆಗೆ ಷಡ್ಯಂತ್ರ ಮಾಡುತ್ತಿದ್ದು, ಅವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸರ್ಕಾರ ಜನರ ಹಿತಕ್ಕಾಗಿ ತಂದಿರುವ ಮಾಹಿತಿ ಹಕ್ಕು ಅಧಿನಿಯಮ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡುವ ಜೊತೆಗೆ ರೋಲ್‌ಕಾಲ್ ಮಾಡುತ್ತಿರುವ ಒಬ್ಬ ಆರ್.ಟಿ.ಐ. ಕಾರ್ಯಕರ್ತನನ್ನು ವಿಚಾರಣೆಗೆ ಒಳಪಡಿಸಿ ಕಾನೂನು ರೀತಿ ಗೂಂಡಾಕಾಯ್ದೆಯಡಿ ಕ್ರಮಕೈಗೊಳ್ಳಬೇಕೆಂದು  ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಸಿದ್ದರಾಜುಗೌಡ, ವರದರಾಜುಗೌಡ, ಜಿತೇಂದ್ರ, ದಲಿತ ಸಂಘಟನೆಯ ನಂಜುಂಡ ಮೌರ್ಯ, ಕರುನಾಡ ಸೇವಕರು ಸಂಘಟನೆಯ ಶಿವಳ್ಳಿ ಚಂದ್ರಣ್ಣ, ಜುಬೇದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!