ಹಳೇ ಮೈಸೂರು ಭಾಗದ ಜನರ ಜೀವನಾಡಿ ಕನ್ನಂಬಾಡಿ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ತಡೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಮಂಡ್ಯದಲ್ಲಿ ಟ್ರಯಲ್ ಬ್ಲಾಸ್ಟ್ ವಿರೋಧಿ ಹೋರಾಟಗಾರ್ತಿ ಸುನಂದ ಜಯರಾಂ, ಕನ್ನಡ ಸೇನೆಯ ಮಂಜುನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಮೈಸೂರು ಮಹಾರಾಜರ ಪರಿಶ್ರಮದಿಂದ ಅಣೆಕಟ್ಟೆ ನಿರ್ಮಾಣವಾಗಿದೆ, ಅಣೆಕಟ್ಟೆಯ ಸುರಕ್ಷತೆಯ ದೃಷ್ಠಿಯಿಂದ ಟ್ರಯಲ್ ಬ್ಲಾಸ್ಟ್ ಬೇಡವೇ ಬೇಡ ಎಂಬ ಅಭಿಪ್ರಾಯ ರೈತರದ್ದಾಗಿದೆ. ಕಳೆದ 8-10 ವರ್ಷದಿಂದ ಟ್ರಯಲ್ ಬ್ಲಾಸ್ಟ್ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ, ನ್ಯಾಯಾಲಯದ ಆದೇಶದಂತೆ ಟ್ರಯಲ್ ಬ್ಲಾಸ್ಟ್ ನಡೆಸಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಯೋಚಿಸಬೇಕಾಗಿದೆ. ಆದ್ದರಿಂದ ಹೆಚ್ಚುವತಿ ಅಡ್ವೋಕೇಟ್ ಗಳ ಮೂಲಕ ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿ ಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ರೈತ ಮುಖಂಡ ಕೆ.ಬೋರಯ್ಯ, ಬಿ.ಆರ್.ರಾಮಚಂದ್ರು, ಎಂ.ಎಲ್.ತುಳಸೀಧರ್ ಸೇರಿದಂತೆ ಮತ್ತಿತರು ಹಾಜರಿದ್ದರು.




