Monday, October 28, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡು | ರಾಜಕೀಯದಲ್ಲಿ ಸಂಚಲನ ಮೂಡಿಸಿದ ದಳಪತಿ ವಿಜಯ್ ; ಪ್ರಥಮ ಸಮ್ಮೇಳನದಲ್ಲಿ 3 ಲಕ್ಷ ಜನ ಭಾಗಿ

ತಮಿಳುನಾಡು ವಿಧಾನಸಭೆಗೆ 2026ರಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ನಟ ಹಾಗೂ ರಾಜಕಾರಣಿ ವಿಜಯ್ ಅವರ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)ನ ಮೊದಲ ರಾಜ್ಯ ಸಮ್ಮೇಳನ ಅಕ್ಟೋಬರ್ 27 ಭಾನುವಾರ ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿಯಲ್ಲಿ ನಡೆದಿದೆ.

ಮೊದಲ ಸಮ್ಮೇಳನದಲ್ಲೇ ಸುಮಾರು 3 ಲಕ್ಷದಷ್ಟು ಜನರನ್ನು ಸೇರಿಸುವ ಮೂಲಕ ವಿಜಯ್ ದೇಶದ ಗಮನ ಸೆಳೆದಿದ್ದಾರೆ. ಚೊಚ್ಚಲ ಸಮ್ಮೇಳನದಲ್ಲಿ ವಿಜಯ್ ತಮಿಳು ಜನತೆಗೆ ನೀಡಿರುವ ಪ್ರಮುಖ ಭರವಸೆಗಳು ಕೂಡ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಜನಸಂಖ್ಯೆಗೆ ಅನುಗುಣ ಪ್ರಾತಿನಿಧ್ಯ, ರಾಜ್ಯಪಾಲರ ಹುದ್ದೆಯನ್ನು ರದ್ದುಪಡಿಸುವುದು, ಜಾತಿ ಗಣತಿ ನಡೆಸುವುದು, ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳುವುದು ಮತ್ತು ಕಾಮರಾಜರ ಮಾದರಿ ಶಾಲೆಗಳನ್ನು ಸ್ಥಾಪಿಸುವ ಭರವಸೆಗಳನ್ನು ವಿಜಯ್ ನೀಡಿದ್ದಾರೆ.

ಟಿವಿಕೆ ಪಕ್ಷದ ಸಿದ್ಧಾಂತವು ಜಾತ್ಯತೀತ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಅದರ ಸೈದ್ಧಾಂತಿಕ ಶತ್ರು ಮತ್ತು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ರಾಜಕೀಯ ಶತ್ರು ಎಂದು ವಿಜಯ್ ಘೋಷಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ವಿರೋಧಿಸುವ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಕ್ರಮಗಳು ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ, ರಾಜ್ಯಪಾಲರ ಹುದ್ದೆಯನ್ನೇ ರದ್ದುಪಡಿಸಲು ಪಕ್ಷ ಪ್ರತಿಜ್ಞೆ ಮಾಡಿದೆ ಎಂದು ಟಿವಿಕೆ ಕಾರ್ಯಾಧ್ಯಕ್ಷೆ ಕ್ಯಾಥರೀನ್ ಪಾಂಡಿಯನ್ ಸಮ್ಮೇಳನದಲ್ಲಿ ಹೇಳಿದ್ದಾರೆ. ತಮಿಳು ಆಡಳಿತದ ಪ್ರಾಥಮಿಕ ಭಾಷೆಯಾಗಿರುವ ದ್ವಿಭಾಷಾ ನೀತಿಗೆ [ತಮಿಳು ಮತ್ತು ಇಂಗ್ಲಿಷ್] ಬದ್ಧವಾಗಿರಲು ಪಕ್ಷವು ಭರವಸೆ ನೀಡಿದೆ. ಜಾತಿ ಮತ್ತು ವರ್ಗ ಭೇದವನ್ನು ಹೋಗಲಾಡಿಸಲು ಮಧ್ಯಾಹ್ನದ ಊಟ ಮತ್ತು ಉಚಿತ ಸಮವಸ್ತ್ರವನ್ನು ನೀಡುವ ಕಾಮರಾಜರ ಮಾದರಿ ಶಾಲೆಗಳ ನಿರ್ಮಾಣಕ್ಕೆ ಒತ್ತು ನೀಡಲು ಪಕ್ಷವು ವಾಗ್ದಾನ ಮಾಡಿದೆ.

ಪಕ್ಷದ ಹೆಚ್ಚಿನ ಭರವಸೆಗಳು ಕಲ್ಯಾಣ ಪರ ಮತ್ತು ದ್ರಾವಿಡ ರಾಜಕೀಯಕ್ಕೆ ಅನುಗುಣವಾಗಿದ್ದರೂ, ಮೀಸಲಾತಿಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟೀಕರಿಸಿಲ್ಲ. ಸಮಾವೇಶದಲ್ಲಿ ಮಾತನಾಡಿದ ವಿಜಯ್, ರಾಜಕೀಯ ಮತ್ತು ಆರ್ಥಿಕ ಸಮಾನತೆ ಪಡೆಯಲು ಜನ ಸಂಖ್ಯೆಗೆ ಅನುಗುಣ ಪ್ರಾತಿನಿಧ್ಯ ಜಾರಿಯಾಗಬೇಕು. ಅದಕ್ಕಾಗಿ ಜಾತಿ ಗಣತಿ ನಡೆಸಬೇಕೆಂಬ ಬಹುದಿನಗಳಿಂದ ಬಾಕಿ ಉಳಿದಿರುವ ಮನವಿಯನ್ನು ಪೂರೈಸಬೇಕು. ಈ ಮೂಲಕ ಎಲ್ಲರಿಗೂ ಸಮಾನತೆಯನ್ನು ಸಾಧಿಸಲು ಸಾಧ್ಯ ಎಂದಿದ್ದಾರೆ.

ಪಕ್ಷವು ಶಿಕ್ಷಣ ಮತ್ತು ಆರೋಗ್ಯದ ಗುಣಮಟ್ಟವನ್ನು ಸುಧಾರಿಸುವ ಮತ್ತು ಜಾತಿ, ಧರ್ಮ, ಲಿಂಗ ಆಧಾರಿತ ತಾರತಮ್ಯ ಮಾಡದೆ ಎಲ್ಲರಿಗೂ ಶಿಕ್ಷಣ, ಆರೋಗ್ಯ ಒದಗಿಸುವ ಭರವಸೆ ನೀಡಿದೆ. ಇದಲ್ಲದೆ, ಮರಳು ಗಣಿಗಾರಿಕೆ, ಅಂತರ್ಜಲ ಮತ್ತು ಖನಿಜ ಸಂಪನ್ಮೂಲಗಳ ಅಕ್ರಮ ಬಳಕೆ ಕೊನೆಗೊಳಿಸಲು ಹೊಸ ನೀತಿಗಳನ್ನು ಅಳವಡಿಸಿಕೊಳ್ಳುವುದು, ಕೃಷಿ ಭೂಮಿ ಮತ್ತು ಜವುಗು ಪ್ರದೇಶಗಳ ಅತಿಕ್ರಮಣಗಳನ್ನು ತೆಗೆದು ಹಾಕುವುದು ಸೇರಿದಂತೆ ಹಲವು ಭರವೆಸಗಳನ್ನು ನೀಡಿದೆ.

ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ವಿಧಾನಸಭಾ ಸ್ಥಾನಗಳನ್ನು ಮೀಸಲಿಡುವುದಾಗಿ ಪಕ್ಷವು ವಾಗ್ದಾನ ಮಾಡಿದೆ. ನಿಧಾನವಾಗಿ, ಮೀಸಲಾತಿಯು 50% ವರೆಗೆ ಏರಿಸಲಾಗುವುದು ಎಂದು ಕ್ಯಾಥರೀನ್ ಘೋಷಿಸಿದ್ದಾರೆ. ಸರ್ಕಾರ ಮತ್ತು ಜನರ ನಡುವಿನ ಸಂಪರ್ಕ ಸುಲಭವಾಗಿಸಲು ಪಕ್ಷವು ಮಧುರೈನಲ್ಲಿ ರಾಜ್ಯ ಸೆಕ್ರೆಟ್ರೀಯೇಟ್ ಶಾಖೆಯನ್ನು ಸ್ಥಾಪಿಸಲಿದೆ ಎಂದು ಹೇಳಿದ್ದಾರೆ.

ಸಮಾವೇಶದಲ್ಲಿ ವಿಜಯ್ ಅವರು ಟಿವಿಕೆ 2026ರ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ಬಹುಮತದ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಪಕ್ಷವು ಇತರ ಪಕ್ಷಗಳೊಂದಿಗೆ ಮೈತ್ರಿಗೂ ಮುಕ್ತವಾಗಿದೆ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!