Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಪೃಶ್ಯ ಜಾತಿಗಳನ್ನು ಎಸ್ಸಿ ಮೀಸಲಾತಿಯಿಂದ ಕೈಬಿಡಲು ಆಗ್ರಹ


  • ಬಂಜಾರ, ಬೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳಿಂದ ಮೀಸಲಾತಿ ಕಬಳಿಕೆ 

  • ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಡಾ.ಅಂಬೇಡ್ಕರ್ ಪೀಪಲ್ ಪಾರ್ಟಿ ಪ್ರತಿಭಟನೆ

ರಾಜ್ಯದಲ್ಲಿ ಸ್ಪೃಶ್ಯ ಜಾತಿಗಳಾದ ಬಂಜಾರ, ಬೋವಿ, ಲಂಬಾಣಿ, ಕೊರಚ ಹಾಗೂ ಕೊರಮ ಸಮುದಾಯಗಳು ಪರಿಶಿಷ್ಷ ಜಾತಿ ಮೀಸಲಾತಿಯನ್ನು ಅಕ್ರಮವಾಗಿ ಪಡೆಯುತ್ತಿದ್ದು, ನೈಜ್ಯ ಅಸ್ಪೃಶ್ಯರನ್ನು ವಂಚಿಸುತ್ತಿದೆ, ಆದ್ದರಿಂದ ಈ ಜಾತಿಗಳನ್ನು ಎಸ್ಸಿ ಮೀಸಲಾತಿ ಪಟ್ಟಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಮಂಡ್ಯ ನಗರದಲ್ಲಿ ಡಾ.ಅಂಬೇಡ್ಕರ್ ಪೀಪಲ್ ಪಾರ್ಟಿ ಬುಧವಾರ ಪ್ರತಿಭಟನೆ ನಡೆಸಿದರು.

ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಡಾ.ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಸ್ಪೃಶ್ಯರು ಎಸ್ಸಿ ಮೀಸಲಾತಿ ಪಡೆಯುತ್ತಿರುವುದರಿಂದ ನೈಜ್ಯ ಅಸ್ಪೃಶ್ಯರಾದ ಹೊಲೆಯ-ಮಾದಿಗ ಹಾಗೂ ಇವುಗಳ 101 ಉಪಜಾತಿ ಸಮುದಾಯಗಳ ಜನರಿಗೆ ಘೋರವಾದ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಪಾರ್ಟಿಯ ಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣ ಸಿ.ಎಂ. ಮಾತನಾಡಿ, ಬಂಜಾರ, ಬೋವಿ, ಲಂಬಾಣಿ, ಕೊರಚ ಹಾಗೂ ಕೊರಮ ಸಮುದಾಯಗಳು ಸ್ಪೃಶ್ಯರಾಗಿದ್ದು, ಬೇರೆ ರಾಜ್ಯಗಳಲ್ಲಿ ಓಬಿಸಿ ಪಟ್ಟಿಯಲ್ಲಿವೆ, ಇವರನ್ನು ಎಸ್ಸಿ ಮೀಸಲು ಪಟ್ಟಿಯಿಂದ ತೆಗೆದುಹಾಕಲು ಸರ್ವೋಚ್ಚ ನ್ಯಾಯಾಲಯವು ಕಳೆದ ಫೆಬ್ರವರಿ 14, 2020ರಲ್ಲಿ ಆದೇಶ ನೀಡಿದೆ, ಅಲ್ಲದೆ ನವದೆಹಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಮಾರ್ಚ್ 12, 2020ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ, ಆದರೆ ರಾಜ್ಯ ಸರ್ಕಾರವು ದುರುದ್ದೇಶದಿಂದ ಪ್ರಸ್ತಾವ ವರದಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಸಲ್ಲಿಸಿದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ರಾಜ್ಯದ ಹೊಲೆಯ-ಮಾದಿಗ ಸಮುದಾಯದ ಅಗ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ, ವಿ.ಶ್ರೀನಿವಾಸ್ ಪ್ರಸಾದ್, ರಮೇಶ್‌ ಜಿಗಜಿಣಗಿ, ಗೋವಿಂದ ಕಾರಜೋಳ ಹಾಗೂ ರೂಪ ಶಶಿಧರ್ ಒಳಗೊಂಡಂತೆ ಹಲವು ನಾಯಕರು ಎಸ್.ಸಿ.ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿದ್ದು, ಈ ಮೀಸಲಾತಿ ವಂಚನೆಯ ವಿರುದ್ಧ ಧ್ವನಿ ಎತ್ತುತ್ತಿಲ್ಲ, ಇವರೆಲ್ಲಾ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಜೊತೆ ಅನೈತಿಕವಾಗಿ ಶಾಮೀಲಾಗಿ ಹೊಲೆಯ-ಮಾದಿಗ ಸಮುದಾಯಗಳಿಗೆ ವಂಚನೆ ಮಾಡುತ್ತಿದ್ದಾರೆಂದು ದೂರಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಜಿ.ಗಂಗರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಂಠ ಹೆಚ್.ಎಸ್.ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!