Friday, June 21, 2024

ಪ್ರಾಯೋಗಿಕ ಆವೃತ್ತಿ

ಪರಿಪರಿಯಾಗಿ ಬೇಡಿದರೂ… ಮೋದಿ ಸರ್ಕಾರ ಬರ ಪರಿಹಾರ ನೀಡಲಿಲ್ಲ… ; ಚಲುವರಾಯಸ್ವಾಮಿ

ರಾಜ್ಯದ 223 ತಾಲ್ಲೂಕುಗಳಲ್ಲಿ ತೀವ್ರವಾದ ಬರವಿದೆ, ನಾವು ರೈತರ ನೆರವಿಗೆ ಧಾವಿಸಬೇಕು, ಸಕಾಲಕ್ಕೆ ಬರ ಪರಿಹಾರ ನೀಡುವಂತೆ ನಾವು ಹಲವು ಬಾರಿ ದೆಹಲಿ ದಂಡಯಾತ್ರೆ ನಡೆಸಿ, ಪ್ರಧಾನಿ ಮೋದಿ ಸೇರಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪರಿ, ಪರಿಯಾಗಿ ಬೇಡಿದರೂ ಕೇಂದ್ರ ಸರ್ಕಾರ ಪರಿಹಾರ ನೀಡಲಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದ ಸುಮರವಿ ಕಲ್ಯಾಣ ಮಂಟಪದಲ್ಲಿ ನಡೆದ ”ಕರ್ನಾಟಕಕ್ಕಾದ ಬರ ಪರಿಹಾರ ವಂಚನ ರೈತರ ಗಾಯದ ಮೇಲೆ ಬರೆ” ಕುರಿತ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಪ್ರಧಾನಿವರ ಬಗ್ಗೆ ತುಂಬು ಗೌರವವಿದೆ, ಆದರೆ ರಾಜ್ಯದ 27 ಮಂದಿ ಬಿಜೆಪಿ ಸಂಸದರು ರಾಜ್ಯದ ಜನಕ್ಕಾಗಿ ಯಾವತ್ತು ಮೋದಿಯವರನ್ನು ಪ್ರಶ್ನಿಸಲಿಲ್ಲ, ಇಂತಹ ಸಂಸದರು ನಮಗೆ ಬೇಕೆ ಎಂದು ಕಿಡಿಕಾರಿದರು.

ತಮಿಳುನಾಡಿನ ಕೇಂದ್ರ ಸಚಿವರು ಹಿಂದಿನ ಸರ್ಕಾರದಲ್ಲಿ ಅವರ ರಾಜ್ಯದ ಹಿತಕ್ಕಾಗಿ ಸರ್ಕಾರ ವಿರುದ್ದ ಪ್ರತಿಭಟನೆಗೆ ಮುಂದಾಗುತ್ತಾರೆ. ಆದರೆ ನಾವು ಪ್ರತಿಭಟಿಸಿದರೆ ಒಕ್ಕೂಟ ವ್ಯವಸ್ಥೆಗೆ ಅಪಾಯವೆಂದು ಬಣ್ಣಿಸುತ್ತಾರೆ. ಇದು ದುರಂತವಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1,77,000 ಕೋಟಿ ಅನುದಾನ ವಂಚನೆಯಾಗಿದೆ, ಕೃಷಿ ಸಬ್ಸಿಡಿ ಕಡಿತವಾಗಿದೆ. ಇವೆಲ್ಲವನ್ನು ಕೇಂದ್ರದ ಗಮನಕ್ಕೆ ತರಲು ಮತದಾನದ ಹಕ್ಕಿನಿಂದ ರಾಜ್ಯದ ಜನತೆ ಜಾಗೃತಿ ಮೂಡಿಸಬೇಕು, ಆ ಮೂಲಕ ಎನ್.ಡಿ.ಎ ತಿರಸ್ಕರಿಸಬೇಕೆಂದು ಕರೆ ನೀಡಿದರು.

ರಾಜ್ಯದ ಜನತೆ 26 ಮಂದಿ ಸಂಸದರನ್ನು ಆಯ್ಕೆ ಮಾಡಿದರೂ ಬಿಜೆಪಿ ಸರ್ಕಾರ ಮೇಕದಾಟು ಯೋಜನೆಗೆ ಅನುಮತಿ ನೀಡಿಲ್ಲ, ಹೋರಾಟ ಮಾತ್ರ. ಬರದ ಬೇಗುದಿಗೆ ಸ್ಪಂದಿಸದ ಮೈತ್ರಿ ಪಕ್ಷಗಳ ನಡೆ ವಿರುದ್ದ ಮತದಾರ ಜಾಗೃತನಾಗಬೇಕೆಂದರು.

ಮೈತ್ರಿ ಅಭ್ಯರ್ಥಿಯನ್ನು ಏಕೆ ಬೆಂಬಲಿಸಬೇಕು ?

2018ರಲ್ಲಿ ಕಾಂಗ್ರೆಸ್ ನೆರವಿನಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಕುಟುಂಬ ರಾಜ್ಯದಲ್ಲಿ ಮೂರು ಬಾರಿ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿದೆ, ಅಧಿಕಾರದಲ್ಲಿದ್ಧಾಗ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಶಾಶ್ವತ ಯೋಜನೆ ನೀಡದ ಕುಮಾರಸ್ವಾಮಿ ಅವರು ಸಂಸದರಾಗಿ ಏನು ಮಾಡಲು ಸಾಧ್ಯ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ಅಧಿಕಾರ ಮುಖ್ಯವಲ್ಲ, ಜಿಲ್ಲೆಯ ರೈತರ ಬದುಕಿಗೆ ಭದ್ರತೆ ಒದಗಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ನಮ್ಮ ಸರ್ಕಾರ ಕೃಷಿ ವಿ.ವಿ, ಹೊಸ ಮೈಷುಗರ್ ಕಾರ್ಖಾನೆ ಮತ್ತು ಕೆ.ಆರ್.ಎಸ್ ಹಾಗೂ ಹೇಮಾವತಿ ನಾಲೆಗಳ ಆಧುನೀಕರಣಕ್ಕೆ ಆದ್ಯತೆ ನೀಡಿದ್ದೇವೆ ಎಂದು ತಿಳಿಸಿದರು.

ಪ್ರಸ್ತುತ ಎದುರಾಗಿರುವ ಲೋಕಸಭಾ ಚುನಾವಣೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಕಾಂಗ್ರೆಸ್ ಅಭ್ಯರ್ಥಿಯ ಚುನಾವಣೆಯಾಗಬಾರದು, ರೈತ ಚುನಾವಣೆಯಾಗಬೇಕೆಂದರು.

ಹಿಂಗಾರು ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಹಿಂದೆಯೇ ತಿಳಿಸಲಾಗಿತ್ತು, ನಾಲೆಗಳಿಗೆ ನೀರು ಹರಿಸಲು ಹತ್ತು ಟಿಎಂಸಿ ನೀರಿನ ಅವಶ್ಯಕತೆ ಇದೆ. ನಾನು ಇನ್ನೊಬ್ಬರಂತೆ ಸುಳ್ಳು ಹೇಳಿ, ಸುಮಲತಾ ಅವರನ್ನು ಕೆ.ಆರ್.ಎಸ್ ಬಾಗಿಲಿಗೆ ಮಲಗಿಸಿ ಅಥವಾ ಕನ್ನಂಬಾಡಿ ಕೀ ದೆಹಲಿಯಲ್ಲಿದೆ ಎಂದು ಹೇಳಿಕೆ ನೀಡುವುದಿಲ್ಲ ಎಂದು ಪರೋಕ್ಷವಾಗಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಛೇಡಿಸಿದರು.

ಉತ್ತಮ ಮಳೆಯಾಗಲಿದೆ

ನಾಲಾ ಆಧುನೀಕರಣದಿಂದ ಮುಂದಿನ 50 ವರ್ಷಗಳ ಕಾಲ ನದಿ ಪಾತ್ರದ ರೈತರಿಗೆ ನೆರವಾಗಲಿದೆ. ಕಡೆ ಭಾಗಕ್ಕೆ ನಿಗದಿತ ಸಮಯದಲ್ಲಿ ನೀರು ತಲುಪಲಿದೆ. ಮುಂದಿನ 15 ದಿನದಲ್ಲಿ ಉತ್ತಮ ಮಳೆಯಾಗಲಿದ್ದು, ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಜಿಲ್ಲೆಯ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸಲಿದ್ದು, ಇದನ್ನು ಮತದಾರರು ಅರ್ಥೈಸಿಕೊಂಡು ಧರ್ಮ, ಜಾತಿ, ಸುಳ್ಳು ಹಾಗೂ ಭಾವನಾತ್ಮಕ ಮಾತುಗಳನ್ನು ಧಿಕ್ಕರಿಸಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಬೇಕು. ಆ ಮೂಲಕ ಮಂಡ್ಯ ಜನರು ಎಚ್ಚರಿಕೆ ಗಂಟೆ ಭಾರಿಸಬೇಕೆಂದು ಮನವಿ ಮಾಡಿದರು.

ರಾಜ್ಯದ ತೆರಿಗೆ ಪಾಲಿನ ವಂಚನೆ, ಬರದ ಬೇಗುದಿಯಲ್ಲಿ ನಲುಗಿದ ರೈತರು ಹಾಗೂ ಜನಸಾಮಾನ್ಯರಿಗೆ ನೆರವಾಗದ ಕೇಂದ್ರ ಸರ್ಕಾರದ ಧೋರಣೆ ಹಾಗೂ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಸಾಧ್ಯವಾಗದ ಎನ್.ಡಿ.ಎ ನೇತೃತ್ವದ ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡಿದರೆ ಅದು ರಾಜ್ಯಕ್ಕೆ ಬಗೆದ ದ್ರೋಹದ ಕೆಲಸವಾಗುತ್ತದೆ, ಅದ್ದರಿಂದ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರಿಗೆ ವಿರುದ್ದವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಜನತೆ ಬೆಂಬಲಿಸಬೇಕೆಂದು ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!