ಕುಟುಂಬಕ್ಕೆ ಹೆಣ್ಣಿರಲಿ ಗಂಡಿರಲಿ ಮಗು ಒಂದಿರಲಿ ಎಂಬ ತತ್ವವನ್ನು ಎಲ್ಲರೂ ಅಳವಡಿಸಿ ಕೊಳ್ಳುವುದರಿಂದ ಏರುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಬಹುದೆಂದು ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಸಲಹೆ ನೀಡಿದರು.
ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ “ದಂಪತಿಗಳ ಸಂಪರ್ಕ ಪಾಕ್ಷಿಕ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರುಷರಿಗೆ ನೋ ಸ್ಕಾಲ್ ಪೆಲ್ ವ್ಯಾಸಕ್ಟಮಿ ಶಸ್ತ್ರ ಚಿಕಿತ್ಸೆ ಇದ್ದು, ಇದೊಂದು ಸರಳ ಹಾಗೂ ಸುರಕ್ಷಿತ ವಿಧಾನವಾಗಿದ್ದು ಗಾಯ, ಹೊಲಿಗೆ ಇಲ್ಲದೆ ಕೇವಲ 5 ರಿಂದ 10 ನಿಮಿಷದಲ್ಲಿ ಮಾಡಬಹುದು.
ಈ ಚಿಕಿತ್ಸೆಯಿಂದ ಯಾವುದೇ ರೀತಿ ದೈಹಿಕ ನಿಶ್ಯಕ್ತಿ ಉಂಟಾಗುವುದಿಲ್ಲ. ಹಾಗಾಗಿ ಈ ಶಸ್ತ್ರ ಚಿಕಿತ್ಸೆಗೆ ಪುರುಷರು ಮುಂದಾಗಬೇಕೆಂದರು.
ಮಹಿಳಾ ವೈದ್ಯಾಧಿಕಾರಿ ಡಾ. ಚಂದ್ರಿಕಾ ಅವರು,ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ದೊರೆಯುವ ಶಾಶ್ವತ ಹಾಗೂ ತಾತ್ಕಾಲಿಕ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಅರ್ಹ ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ. ನಾಗರಾಜ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಬೆನ್ನೂರ,ಪ್ರಾಥಮಿಕ ಆರೋಗ್ಯ ಸುರಕ್ಷಾ ಧಿಕಾರಿಗಳಾದ ಮಹದೇವಮ್ಮ,ರಬೆಕಾ,ಮಂಗಳಾ, ಪದ್ಮ ಹಾಗೂ ತಾಯಂದಿರು,ಮಕ್ಕಳು,ಸಾರ್ವಜನಿಕರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.