ಮಹಿಳೆಯರು ಸಂಘಟಿತರಾಗಿ, ಅನ್ಯಾಯದ ವಿರುದ್ಧ ಹೋರಾಡಿ, ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡಲು ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಕರೆ
ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಮಂಡ್ಯ ಜಿಲ್ಲಾ ಛಲವಾಧಿ ಮಹಾಸಭಾದ ಸಂಘಟನಾ ಸಭೆಯಲ್ಲಿ ಸಮಾಜಸೇವಕಿ ಪುಟ್ಟಗೌರಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದ ಕೆ.ಶಿವರಾಮ್ ರಾಷ್ಟ್ರದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು.
ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಾ ಕುಟುಂಬವನ್ನು ಮುನ್ನಡೆಸುವ ಜೊತೆಗೆ ದೇಶದ ಮುನ್ನಡೆಗೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಮಹಿಳೆಯರು ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಟೀಕೆ ಟಿಪ್ಪಣಿಗಳಿಗೆ ಜಗ್ಗದ್ದೇ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು.
ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಮಾಜಿಕ ಕಟ್ಟುಪಾಡುಗಳು ಹಾಗೂ ಅಸಮಾನತೆಯನ್ನು ಅಳಿಸಿಹಾಕಿ ಸಾಧನೆ ಮಾಡಬೇಕು. ಹೈನುಗಾರಿಕೆ, ಗಂಧದಕಡ್ಡಿ, ಹಪ್ಪಳ, ಉಪ್ಪಿನಕಾಯಿ ಸೇರಿದಂತೆ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಲಾಭಗಳಿಸುವ ಮೂಲಕ ಆರ್ಥಿಕವಾಗಿ ಸಬಲೀಕರಣ ಸಾಧಿಸಬೇಕು ಎಂದು ಕೆ.ಶಿವರಾಮ್ ಮನವಿ ಮಾಡಿದರು..
ಇದೇ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಛಲವಾಧಿ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಊಚನಹಳ್ಳಿ ನಟರಾಜ್ ಅವರನ್ನು ಕೆ.ಶಿವರಾಮ್ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡ್ಯ ಜಿಲ್ಲಾ ಛಲವಾಧಿ ಮಹಾಸಭಾದ ಅಧ್ಯಕ್ಷ ಮಾಂಬಳ್ಳಿ ಜಯರಾಂ ವಹಿಸಿದ್ದರು.
ಸಭೆಯಲ್ಲಿ ಪುರಸಭೆಯ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್, ಸೌಭಾಗ್ಯ ಉಮೇಶ್, ಕಲ್ಪನಾದೇವರಾಜ್, ಮುಖಂಡರಾದ ಸಿಂದಘಟ್ಟ ಸೋಮಸುಂದರ್, ಮುದುಗೆರೆ ಮಹೇಂದ್ರ, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಅಂಬೇಡ್ಕರ್ ನಗರದ ನಾಗರಾಜು, ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.