ಇತಿಹಾಸ ಪ್ರಸಿದ್ಧ ಮದ್ದೂರು ಉಗ್ರ ನರಸಿಂಹಸ್ವಾಮಿ ರಥೋತ್ಸವಕ್ಕೆ ಇಂದು ತಹಶೀಲ್ದಾರ್ ನರಸಿಂಹಮೂರ್ತಿಯವರು ಚಾಲನೆ ನೀಡಿದರು.
ಮುಂಜಾನೆಯಿಂದ ಜರುಗಿದ ವಿವಿಧ ಪೂಜಾ ಕಾರ್ಯಕ್ರಮದ ಬಳಿಕ 12:15 ಗಂಟೆಗಳ ಸಮಯದಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರ ಗೋವಿಂದ.. ಗೋವಿಂದ.. ಎಂಬ ಉದ್ಘೋಷದ ನಡುವೆ ರಥೋತ್ಸವ ಜರುಗಿತು.
ಅರ್ಚಕರಾದ ನರಸಿಂಹ ಭಟ್ಟರು ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಕೊರೋನಾ ಮಹಾಮಾರಿಯ ಯಿಂದಾಗಿ ರಥೋತ್ಸವ ನಡೆದಿರಲಿಲ್ಲ.
ಈ ಬಾರಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಅವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ಜರುಗಿರುವುದು ಒಳ್ಳೆಯ ಸಂಕೇತ.
ಚೈತ್ರಮಾಸದ, ಕೃಷ್ಣಪಕ್ಷ ಶುಕ್ರವಾರದಂದು ರಥೋತ್ಸವ ನಡೆದಿದ್ದು, ಉಗ್ರ ನರಸಿಂಹ ಸ್ವಾಮಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.
ಬಂದಿದ್ದ ಭಕ್ತಾದಿಗಳು ರಥದ ಕಳಸಕ್ಕೆ ಹಣ್ಣು,ದವನವನ್ನು ಎಸೆದು ತಮ್ಮ ಭಕ್ತಿಪೂರ್ವಕವಾದ ನಮನದೊಟ್ಟಿಗೆ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.
ಕೋಟೆ ಬೀದಿಯ ಎರಡು ಬೀದಿಗಳಲ್ಲಿ ಮೆರವಣಿಗೆ ಭಕ್ತರ ಜೈಕಾರದೊಟ್ಟಿಗೆ ನಡೆಯಿತು.
ಪಾನಕ- ಮಜ್ಜಿಗೆ ವಿತರಣೆ
ವಿವಿಧ ಸಂಘ ಸಂಸ್ಥೆಗಳಿಂದ ಬಂದ ಭಕ್ತಾದಿಗಳಿಗೆ ಪ್ರಸಾದ,ಪಾನಕ, ಮಜ್ಜಿಗೆ ವಿತರಣೆಯನ್ನು ಮಾಡಲಾಯಿತು.
ಬಿಗಿ ಬಂದೋಬಸ್ತು
ಕಳ್ಳರ ಕೈಚಳಕ ಪ್ರತಿ ವರ್ಷವೂ ನಡೆಯುತ್ತಿತ್ತು. ಅದರೆ ವರ್ಷ ವಿಶೇಷ ವಾಗಿ ಪೋಲಿಸರು ಕ್ರಮ ವಹಿಸಿದ್ದರಿಂದ ಕಳ್ಳರ ಕೈ ಚಳಕ ಈ ಬಾರಿ ನಡೆಯಲಿಲ್ಲ.