ರಾಜ್ಯದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿ ಅಹವಾಲು ಸ್ವೀಕರಿಸಿದರು.
ಸಭೆಯಲ್ಲಿ ಹೇಮಾವತಿ ಎಡದಂಡೆ ನಾಲೆಯ ಸರಪಳಿ ಯಲ್ಲಿರುವ 64 ನೇ ವಿತರಣಾ ನಾಲೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ನಾಲೆಯ ಆಧುನೀಕರಣ ಮಾಡಿಸುವಂತೆ ರೈತ ಮುಖಂಡ ರಾಜೇಗೌಡ ನೇತೃತ್ವದಲ್ಲಿ ತಾಲೂಕು ರೈತಸಂಘದ ಮುಖಂಡರು ರಾಜ್ಯದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಯವರನ್ನು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
66 ನೇ ವಿತರಣಾ ನಾಲೆ 29 ಕಿ.ಮೀ ಉದ್ದವಿದ್ದು 16,020 ಎಕರೆ ಅಚ್ಚಕಟ್ಟು ಪ್ರದೇಶ ಹೊಂದಿದೆ. 1984-85ರಲ್ಲಿ ಪೂರ್ಣಗೊಂಡ ಸದರಿ ನಾಲೆಯನ್ನು ಇದುವರೆಗೂ ಆಧುನೀಕರಣ ಮಾಡದೇ ಇರುವುದರಿಂದ ಅಚ್ಚಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ನಾಲಾ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ 27 ಸಣ್ಣ ಕೆರೆಗಳಿದ್ದು 18 ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ. 9-01-2023 ರಂದು ನಡೆದ 76ನೇ ನಿರ್ದೇಶಕ ಮಂಡಲಿಯ ಸಭೆಯಲ್ಲಿ ಕಾಮಗಾರಿ ಅಂದಾಜು ಪಟ್ಟಿಗೆ ಅನುಮೋದನೆ ದೊರಕಿದ್ದು ತಕ್ಷಣವೇ ಕಾಮಗಾರಿಗೆ ಅಗತ್ಯ ಅನುದಾನ ನೀಡಿ ರೈತರ ನೆರವಿಗೆ ನಿಲ್ಲುವಂತೆ ರೈತ ಮುಖಂಡರು ಆಗ್ರಹಿಸಿದರು.
ತೇಗನಹಳ್ಳಿ ಚಿಕ್ಕಕೆರೆ ಒತ್ತುವರಿ ತೆರವುಗೊಳಿಸಿ: ಪಟ್ಟಣದ ಹೊರವಲಯದ ತೇಗನಹಳ್ಳಿಯ ಚಿಕ್ಕಕೆರೆಯನ್ನು
ಪಿ.ಕೆ.ಜಯಕೃಷ್ಣೇಗೌಡ ಎನ್ನುವ ಪ್ರಭಾವಿ ಗುತ್ತಿಗೆದಾರರ ಕುಟುಂಬದವರು ಅತಿಕ್ರಮಿಸಿ ವಶಪಡಿಸಿಕೊಂಡು ತಮ್ಮ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರಿ ಕೆರೆಯಲ್ಲಿ ರೆಸಾರ್ಟ್ ಮಾದರಿಯ ಕಟ್ಟಡ ನಿರ್ಮಿಸಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ರೈತಸಂಘ ಹಲವು ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಸಾರ್ವಜನಿಕ ಕೆರೆಯನ್ನು ಖಾಸಗಿ ವ್ಯಕ್ತಿಯಿಂದ ತೆರವುಗೊಳಿಸುವ ಕಾರ್ಯಕ್ಕೆ
ಮುಂದಾಗಿಲ್ಲ. ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಲು ಮುಂದಾಗದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸವಂತೆ ರೈತ ಮುಖಂಡರು ಒತ್ತಾಯಿಸಿದರು.
ಹೇಮಾವತಿ ಎಡದಂಡೆ ನಾಲೆಯ 54ನೇ ವಿತರಣಾ ನಾಲೆಯ ಅಧುನೀಕರಣ ಕಾಮಗಾರಿಯಲ್ಲಿ ಕಾಮಗಾರಿ ಕೈಗೊಳ್ಳದಿದ್ದರೂ ಗುತ್ತಿಗೆದಾರ ನಿಗೆ ಮುಂಗಡವಾಗಿ ಬಿಲ್ ಪಾವತಿಸಲಾಗಿದೆ. ಸದರಿ ನಾಲಾ ಕಾಮಗಾರಿಯ ಗುತ್ತಿಗೆ
ಕಾಲಮಿತಿ 8-2-2024ಕ್ಕೆ ಮುಕ್ತಾಯಗೊಂಡಿದ್ದರೂ ಗುತ್ತಿಗೆದಾರ ಇದುವರೆಗೂ ಶೇ. 10 ರಿಂದ 20ರಷ್ಟು ಮಾತ್ರ ಕಾಮಗಾರಿ ಮಾಡಿದ್ದು ವಿಳಂಬ ಕಾಮಗಾರಿಯಿಂದ ರೈತರು ಬೆಳೆ ಬೆಳೆಯದೆ ನಷ್ಠಕ್ಕೆ ಸಿಲುಕಿದ್ದಾರೆ. ಕಾಮಗಾರಿ ನಡೆಯದಿದ್ದರೂ ಬಿಲ್ ಪಾವತಿಸಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು ಮತ್ತು ಶರವೇಗದಲ್ಲಿ ಕಾಮಗಾರಿ ಮುಗಿಸಿ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವಂತೆ ರೈತ ಮುಖಂಡರು ಆಗ್ರಹಿಸಿದರು.
ರಸ್ತೆ ಬಿಡಿಸಿಕೊಡಿ : ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ತೆಯವರು ಸಂಸ್ಥೆಯ ಆವರಣದಲ್ಲಿನ ಸಾರ್ವಜನಿಕ ರಸ್ತೆಯನ್ನು ಮುಚ್ಚಿದ್ದಾರೆ. ಇದರಿಂದಾಗಿ ಪಾಲಿಟೆಕ್ನಿಕ್ ಆವರಣದ ಹಿಂಭಾದಲ್ಲಿ ಕೃಷಿ ಜಮೀನು ಹೊಂದಿರುವ ನೂರಾರು ರೈತರ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಪಟ್ಟಣದಲ್ಲಿ ಸಾರ್ವಜನಿಕ ಸ್ಮಶಾನವಿಲ್ಲ. ಪಾಲಿಟೆಕ್ನಿಕ್ ಆವರಣದೊಳಗಿನ ಸಾರ್ವಜನಿಕ ರಸ್ತೆಯನ್ನು ಮುಚ್ಚಿರುವುದರಿಂದ ಸತ್ತವರ ಶವ ಸಾಗಿಸಿ ಅಂತ್ಯ ಸಂಸ್ಕಾರ ಮಾಡಲು ನಾಲ್ಕಾರು ಕಿ.ಮೀ ಸುತ್ತಿ ಬರಬೇಕಾಗಿದೆ. ತಕ್ಷಣವೇ ಪಾಲಿಟೆಕ್ನಿಕ್ ಆವರಣದೊಳಗೆ ಮೂಲ ನಕಾಶೆಯಲ್ಲಿರುವಂತೆ ಹಳೆಯ ರಸ್ತೆಯನ್ನು ಬಿಡಿಸಿಕೊಡಿ ಅಥವಾ ಪಾಲಿಟೆಕ್ನಿಕ್ ಆವರಣದೊಳಗೆ ಬಸ್ ಡಿಪೋಗೆ ಪಕ್ಕಕ್ಕೆ ಹೊಂದಿಕೊಂಡಂತೆ ತಾಲೂಕು ಆಡಳಿತ ಗುರುತಿಸಿರುವ ಹೊಸ ರಸ್ತೆಯನ್ನಾದರೂ ಬಿಡಿಸಿ ಕೊಡುವಂತೆ ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ನೇತೃತ್ವದಲ್ಲಿ ಪರಿಶಿಷ್ಠ ಜಾತಿ ವರ್ಗದ ಮುಖಂಡರು ಸಚಿವರಿಗೆ ಆಗ್ರಹ ಪೂರ್ವಕ ಮನವಿ ಸಲ್ಲಿಸಿದರು.
ಸರ್ವೆ ನಂ.287 ಜಮೀನು ಪುರಸಭೆಗೆ ಹಸ್ತಾಂತರಿಸಿ: ಪಟ್ಟಣದ ಹೊರವಲಯದ ಸರ್ವೆ ನಂ 287ರಲ್ಲಿ ಬಡವರಿಗೆ ನಿವೇಶನ ಹಂಚಲು ಪುರಸಭೆ ನಿರ್ಧರಿಸಿತ್ತು. ಕಳೆದ ಮೂರು ದಶಕಗಳಿಮದ ಸರ್ವೆ ನಂಬರ್. 287ರಲ್ಲಿ ನಿವೇಶನಕ್ಕಾಗಿ ಹಣ ಕಟ್ಟಿ ಪಟ್ಟಣದ ಬಡವರು ಸೂರು ಕಟ್ಟಿಕೊಳ್ಳಲು ಕಾಯುತ್ತಿದ್ದಾರೆ. ಸರ್ವೆ.ನಂ 287 ರ ಜಮೀನನ್ನು ಪುರಸಭೆಗೆ ಹಸ್ತಾಂತರಿಸಿ ಬಡವರಿಗೆ ಆಸರೆಯಾಗಲು ಅನುಕೂಲ ಮಾಡಿಕೊಡುವಂತೆ
ಪುರಸಭೆ ಅಧ್ಯಕ್ಷೆ ಪಂಕಜ ಹಾಗೂ ಸದಸ್ಯರಾದ ಕೆ.ಆರ್.ರವೀಂದ್ರಬಾಬು, ಕೆ.ಬಿ.ಮಹೇಶ್ ಮತ್ತಿತರರು ಸಚಿವರಿಗೆ ಮನವಿ ಪತ್ರ ಅರ್ಪಿಸಿ ಮನವಿ ಮಾಡಿದರು.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಒದಗಿಸಿಕೊಡುವಂತೆ ಕಾಂಗ್ರೆಸ್ ಮುಖಂಡ ಬಸ್ತಿ ರಂಗಪ್ಪ ಮನವಿ ಮಾಡಿದರು.
ಪ್ರಯಾಣಿಕರ ತಂಗುದಾಣಕ್ಕೆ ಮನವಿ
ಕೆ.ಆರ್.ಪೇಟೆ ಪಟ್ಟಣದ ಚನ್ನರಾಯಪಟ್ಟಣ ರಸ್ತೆಯ ಹೇಮಾವತಿ ಕಛೇರಿ ವೃತ್ತದಲ್ಲಿ ಪ್ರಯಣಿಕರ ಬಸ್ ತಂಗುದಾಣ ಇಲ್ಲ. ಈ ವೃತ್ತದಿಂದ ಪಕ್ಕದ ಕಿಕ್ಕೇರಿ, ಚನ್ನರಾಯಪಟ್ಟಣ, ಹೊಳೇನರಸಿಪುರ, ಅರಸೀಕೆರೆ, ಶಿವಮೊಗ್ಗ ಮುಂತಾದ ಸ್ಥಳ ಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಮಳೆ ಬಿಸಿನಲ್ಲಿಯೇ ಕಾದು ನಿಂತು ಬಸ್ ಹತ್ತಬೇಕಾಗಿದೆ. ಆದ ಕಾರಣ ಹೇಮಾವತಿ ವೃತ್ತದಲ್ಲಿ ಸಾರ್ವಜನಿಕರಿಗೆ ಬಸ್ ತಂಗುದಾಣ ನಿರ್ಮಿಸುವಂತೆ ಹೇಮಾವತಿ ಮತ್ತು ಬಸವೇಶ್ವರ ಬಡಾವಣೆಯ ನಿವಾಸಿಗಳು ಸಚಿವರಿಗೆ ಮನವಿ ಸಲ್ಲಿಸಿದರು. ಸಾರ್ವಜನಿಕ ಸಮಸ್ಯೆಗಳಲ್ಲದೆ ವಿವಿಧ ಇಲಾಖೆಗಳಿಲ್ಲಿನ ತಮ್ಮ ತಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ನೂರಾರು ಜನ ಸಚಿವರಿಗೆ ಅಹವಾಲು ಸಲ್ಲಿಸಿದರು.
ತಹಸೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಎಸ್.ಯು.ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್,
ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮುಖಂಡರಾದ ವಿಜಯರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷ ಪಂಕಜ ಪ್ರಕಾಶ್, ಎಲ್.ಪಿ.ನಂಜಪ್ಪ, ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ರೈತ ಮುಖಂಡ ಮುದುಗೆರೆ ರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ
ಕಾರಿಗನಹಳ್ಳಿ ಪುಟ್ಟೇಗೌಡ, ಬೆಡದಹಳ್ಳಿ ಶ್ರೀ ಪಂಚ ಭೂತೇಶ್ವರ ಮಠದ ಪೀಠಾಧಿಪತಿ ಶ್ರೀರುದ್ರಮುನಿ ಸ್ವಾಮೀಜಿ ಸೇರಿದಂತೆ ನೂರಾರು ಜನರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




