Wednesday, July 24, 2024

ಪ್ರಾಯೋಗಿಕ ಆವೃತ್ತಿ

ಪೊಲೀಸರ ರಕ್ಷಣೆಯಲ್ಲಿ ಕಲ್ಲು ಗಣಿಗಾರಿಕೆ ಪ್ರಾರಂಭ

ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಕಾನೂನುಬದ್ಧವಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿರುವ ಹಿನ್ನಲೆಯಲ್ಲಿ ಇಂದು ಪೋಲಿಸರ ರಕ್ಷಣೆಯಲ್ಲಿ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಪ್ರಾರಂಭವಾಯಿತು.

ಪಾಂಡವಪುರ ತಾಲ್ಲೂಕಿನ ಕಸಬಾ-2 ಹೋಬಳಿಯ ಕನಗನಮರಡಿ ಗ್ರಾಮದ ಸಮೀಪ ಎಲೆಚಾಕನಹಳ್ಳಿಯ ವೈ.ಬಿ.ಅಶೋಕ್ ಗೌಡ ಪಾಟೀಲ್ ಮಾಲೀಕತ್ವದಲ್ಲಿ ನಡೆಯುತ್ತಿರುವ ಮೆ.ಮಂಚಮ್ಮದೇವಿ ಸ್ಟೋನ್ ಕ್ರಷರ್ ಅನ್ನು 4.03 ಎಕರೆ ಪ್ರದೇಶ ಸರ್ಕಾರಿ ಗೋಮಾಳದ ಜಮೀನನ್ನು 20 ವರ್ಷಗಳ ಲೀಸ್ ಅವಧಿಗೆ ಸರ್ಕಾರದ ಎಲ್ಲಾ ಇಲಾಖೆಗಳ ಅನುಮತಿ ಪಡೆದು ನಡೆಸಿಕೊಂಡು ಬರಲಾಗುತ್ತಿತ್ತು.

ಕಲ್ಲು ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್ ನಿಂದ ರೈತರ ಬೆಳೆ,ರಸ್ತೆ ಹಾಳಾಗುತ್ತಿದೆ ಎಂದು ಆರೋಪಿಸಿ ಕನಗನಮರಡಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಕ್ರಷರ್ ಮುಂಭಾಗ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಲ್ಲಿ ಕ್ರಷರ್ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಿದ್ದರು. ಹೀಗಾಗಿ ಕೆಲ‌ ದಿನಗಳಿಂದ ಕ್ರಷರ್ ನಡೆಯುತ್ತಿರಲಿಲ್ಲ.

ಕ್ರಷರ್ ಮಾಲೀಕ ಅಶೋಕ್ ಪಾಟೀಲ್,ನಾನು ಸರ್ಕಾರದಿಂದ ಸಿ ಫಾರಂ ಪಡೆದು ಕಾನೂನು ಪ್ರಕಾರ ಅಧಿಕೃತವಾಗಿಯೇ ಕಲ್ಲುಗಣಿಗಾರಿಕೆ ಮತ್ತು ಕ್ರಷರ್ ನಡೆಸುತ್ತಿದ್ದೇನೆ. ಕೆಲವರು ರಾಜಕೀಯ ಸ್ವಾರ್ಥಕ್ಕಾಗಿ ನನ್ನ ಮೇಲೆ ಜನರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಿದ್ದಾರೆ. ನನ್ನ ಕ್ರಷರ್ ಕಾನೂನುಬದ್ಧವಾಗಿದೆ ಎಂದು ಹೇಳಿದರೂ ರೈತರೆಂದು ಹೆಸರೇಳಿಕೊಂಡು ಕೆಲವರು ಪ್ರತಿಭಟನೆ ಮಾಡಿರುವುದರ ಹಿಂದೆ ಕೆಲ ರಾಜಕಾರಣಿಗಳ ಹಿಂಬಾಲಕರ ಕೈವಾಡವಿದೆ ಎಂದು ಆರೋಪಿಸಿದ್ದರು.

ನಾನು ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆ,ಪರಿಸರ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ,ನೀರಾವರಿ ಇಲಾಖೆ,ಕಂದಾಯ ಇಲಾಖೆ ಸೇರಿದಂತೆ ಸುಮಾರು ಹದಿನಾಲ್ಕು ಇಲಾಖೆಗಳು ಅನುಮತಿ ನೀಡಿದೆ. ಇದೆಲ್ಲಾ ಆದ ಮೇಲೆ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ಅಡತಡೆಯಿಲ್ಲದೆ ಜಲ್ಲಿ ಕ್ರಷರ್ ಚೆನ್ನಾಗಿಯೇ ನಡೆಯುತ್ತಿತ್ತು.ಈ ಮಧ್ಯೆ ಕೆಲ ರಾಜಕಾರಣಿಗಳ ಹಿಂಬಾಲಕರು ನಮ್ಮ ಕ್ರಷರ್ ಮುಚ್ಚಿಸಲು ಷಡ್ಯಂತ್ರ ಮಾಡಿದ್ದರು. ಒಂದು ಗುಂಟೆ ಜಮೀನು ಇಲ್ಲದವರನ್ನು ರೈತರೆಂದು ಕರೆದುಕೊಂಡು ಹೋಗಿ ಪಾಂಡವಪುರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದ್ದರು.ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದರು.

ಇದರ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಫಿಲ್ಟರ್ ಮಣ್ಣು ಮಾರುವವರ ಕೈವಾಡವಿದೆ. ನಮ್ಮ ಕ್ರಷರ್ ಬಂದ ನಂತರ ಅವರ ಫಿಲ್ಟರ್ ಮರಳಿಗೆ ಬೇಡಿಕೆ ಕಡಿಮೆಯಾಗಿತ್ತು. ಇದರಿಂದ ಸಿಟ್ಟಾದ ಕೆಲವರು ಕಾಂಗ್ರೆಸ್ ಪಕ್ಷದ ಡಾ.ರವೀಂದ್ರ ಅವರನ್ನು ದಾರಿತಪ್ಪಿಸುವ ಮೂಲಕ ಪ್ರತಿಭಟನೆ ಮಾಡಿಸಿದ್ದಾರೆ. ಇಲ್ಲಿನ ಜನರಿಗೆ ಮನೆ ಕಟ್ಟಲು ಜಲ್ಲಿ, ಎಂ.ಸ್ಯಾಂಡ್ ಬೇಕು.ಈ ಭಾಗದ ರೈತರಾಗಲೀ,ಜನರಿಂದಾಗಲೀ ಯಾವುದೇ ತೊಂದರೆ ಇಲ್ಲ. ಅಲ್ಲದೆ ಈ ಭಾಗದ ಕೆಲವು ಮುಖಂಡರು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ನಾನು ಕೊಡದ ಕಾರಣ ರೈತರಲ್ಲದ ಕೆಲ ಜನರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿದ್ದಾರೆ ಎಂದು ಕ್ರಷರ್ ಮಾಲೀಕರು ಆರೋಪಿಸಿದ್ದರು.

ಅಲ್ಲದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಅಶೋಕ್ ಪಾಟೀಲ್ ಪತ್ರ ಬರೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಪತ್ರ ಬರೆದಿದ್ದರು. ಅದರಂತೆ ಅಧಿಕಾರಿಗಳ ತಂಡ ಕಲ್ಲಗಣಿಗಾರಿಕೆ ಮತ್ತು ಕ್ರಷರ್ ದಾಖಲೆಗಳನ್ನು ನೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ಈ ಹಿನ್ನಲೆಯಲ್ಲಿ ತಾಂತ್ರಿಕ ಅಧಿಕಾರಿಗಳು ಜಂಟಿ ಸ್ಥಳ‌ ಪರಿಶೀಲನೆ ನಡೆಸಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994ರ ನಿಯಮ 6 (2) ರಂತೆ ಷರತ್ತುಗಳು ಮತ್ತು ಕರ್ನಾಟಕ ಕ್ರಷರ್ ಘಟಕಗಳ ನಿಯಂತ್ರಣ ಅಧಿನಿಯಮ 2011( ತಿದ್ದುಪಡಿ 2013 ) ರ ಸೆಕ್ಷನ್ 6(1) ರಂತೆ ಷರತ್ತುಗಳು ಪೂರ್ಣಗೊಂಡಿದ್ದ ನಂತರವಷ್ಟೇ ಮಂಜೂರು ಮಾಡಲಾಗಿರುತ್ತದೆ. ಯಾವುದೇ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಕಂಡು ಬಂದಿರುವುದಿಲ್ಲ ಎಂದು ಉಲ್ಲೇಖ 3 ರಲ್ಲಿ ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಡ್ಯ ಜಿಲ್ಲೆ, ಇವರು ವರದಿ ನೀಡಿರುತ್ತಾರೆ.

ಇಷ್ಟೆಲ್ಲಾ ನಿಯಮಾನುಸಾರ ಪಾಲಿಸಿ ಮಾಡುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮವಲ್ಲ, ಕಾನೂನು ಬದ್ಧವಾಗಿದೆ ಎಂದು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿ ಅಧಿಕೃತ ಪತ್ರದ ಮೂಲಕ ದೃಢಪಡಿಸಿದ್ದಾರೆ. ಈ ಬಗ್ಗೆ ಪಾಂಡವಪುರ ತಹಶೀಲ್ದಾರ್ ನಯನ ಕೂಡ ಕಾನೂನು ಬದ್ಧವಾಗಿ, ಅಧಿಕೃತವಾಗಿ ಕ್ರಷರ್ ನಡೆಯುತ್ತಿದೆ ಎಂದು ಪೋಲಿಸ್ ಇಲಾಖೆಗೆ ಪತ್ರಬರೆದು ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಕೇಳಿಕೊಂಡಿದ್ದರು.

ಈ ಆದೇಶದ ಹಿನ್ನೆಲೆಯಲ್ಲಿ ಇಂದು ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಕನಗನಮರಡಿಯಲ್ಲಿ ಇಂದಿನಿಂದ ಅಶೋಕ್ ಪಾಟೀಲ್ ಒಡೆತನದ‌ ಕಲ್ಲು ಗಣಿಗಾರಿಕೆ ಇಂದು ಮತ್ತೆ ಪ್ರಾರಂಭಿಸಲಾಗಿದೆ.

ಗಣಿಗಾರಿಕೆ ಮತ್ತೆ ಆರಂಭವಾದ ವಿಷಯ ತಿಳಿದು ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಮತ್ತೆ ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಮಂಡ್ಯಕ್ಕೆ ಕರೆದುಕೊಂಡು ಹೋದರೆಂದು ಸ್ಥಳದಲ್ಲಿದ್ದ ಪತ್ಯಕ್ಷದರ್ಶಿಗಳು ತಿಳಿಸಿದರು.

ಇದನ್ನು ಓದಿ: ಕನಗನಮರಡಿ ಕಲ್ಲುಗಣಿಗಾರಿಕೆ ವಿರುದ್ದ ಸಿಡಿದೆದ್ದ ರೈತಾಪಿ ಜನ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!