Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಭಿವೃದ್ಧಿ ದೃಷ್ಟಿಯಿಂದ ಮಂಡ್ಯ ಜನರೇ ಚುನಾವಣೆ ನಡೆಸಿ ಗೆಲ್ಲಿಸಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ

‘ನನ್ನ ಗೆಲುವು, ಮಂಡ್ಯ ಜಿಲ್ಲೆ ಜನತೆಯ ಆಶೀರ್ವಾದ, ನನಗೆ ಸಿಕ್ಕಿದ ಈ ಸನ್ಮಾನ ಮಂಡ್ಯ ಜಿಲ್ಲೆ ಜನತೆಗೆ ಸಲ್ಲಬೇಕು. ಚುನಾವಣೆಯಲ್ಲಿ ಹಳ್ಳಿ ಹಳ್ಳಿಗೆ ಬರದೆ ಇದ್ರು ಜೆಡಿಎಸ್ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಗೆಲ್ಲಿಸಿದ್ದಾರೆ. ಜಿಲ್ಲೆ ಹಾಗೂ ರೈತರ ಅಭಿವೃದ್ಧಿ ದೃಷ್ಟಿಯಿಂದ ಮಂಡ್ಯ ಜನರೇ ಚುನಾವಣೆ ನಡೆಸಿ ಗೆಲ್ಲಿಸಿದ್ದಾರೆ’ ಎಂದು ಕಳೆದ ಲೋಕಸಭೆ ಚುನಾವಣೆಯ ಗೆಲುವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವ್ಯಾಖ್ಯಾನಿಸಿದರು.

ಪಾಂಡವಪುರದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ತಮ್ಮ ಕುಟುಂಬದ ಅಣ್ಣನೋ‌ ತಮ್ಮನೋ ಎಂಬ ರೀತಿ ಬೆಂಬಲಿಸಿದ್ದಾರೆ. ನಾನು ಕೇಂದ್ರ ಕೃಷಿ ಮಂತ್ರಿ ಆಗಬೇಕೆಂಬುದು ಜನರ ಬಯಕೆ ಇತ್ತು. ಆದರೆ ನಾನು ಕೃಷಿ ಸಚಿವನಾಗಲಿಕ್ಕೆ ಆಗಲಿಲ್ಲ. ನನಗೆ ನೋವಿದೆ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಇದು ನನ್ನ ಮನಸ್ಸಿನ ನೋವನ್ನ ಹೆಚ್ಚಿಸಿದೆ ಎಂದು ನುಡಿದರು.

ಜನತಾ ದರ್ಶನದಲ್ಲಿ 400 ಅರ್ಜಿ

ಕೇಂದ್ರ ಸಚಿವನಾದ ನಂತರ ಮಂಡ್ಯದಲ್ಲಿ ಜನತಾ ದರ್ಶನ ಮಾಡಿದೆ. ಬೆಳಿಗ್ಗೆ 12ಗಂಟೆಯಿಂದ ರಾತ್ರಿ 8ಗಂಟೆವರೆಗೆ ಅರ್ಜಿ ಸ್ವೀಕಾರ ಮಾಡಿದ್ದೇನೆ. 400ಕ್ಕೂ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು. ಆರ್ಥಿಕ ನೆರವಿಗೆ ಕೋರಿ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ನಿರುದ್ಯೋಗ ಸಮಸ್ಯೆ ಕುರಿತ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ‌. ನಿವೇಶನ, ಮನೆಗಳ ಬೇಡಿಕೆ ಇರುವ ಅರ್ಜಿಗಳು ಬಂದಿದೆ. ಮಂಡ್ಯದಲ್ಲಿ ಡಿಸಿ ಆಗಿ ಕೆಲಸ ಮಾಡಿದ ಕೃಷ್ಣಯ್ಯ ಅವ್ರನ್ನ ವಿಶೇಷಾಧಿಕಾರಿಯಾಗಿ ನೇಮಕ ಮಾಡಿದ್ದೇನೆ. ಅವರು ನಿಮ್ಮ ಸಮಸ್ಯೆ ಆಲಿಸಿ ನನ್ನ ಗಮನಕ್ಕೆ ತರುತ್ತಾರೆ. ಪ್ರತಿ ಮಂಗಳವಾರ, ಬುಧವಾರ ಸಂಸದರ ಕಚೇರಿಯಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದಾರೆ.

HMT ಕಂಪನಿ ಸಮಸ್ಯೆ ಬಗೆಹರಿಸಬೇಕಿದೆ

ಪ್ರಧಾನಮಂತ್ರಿಗಳು ನನಗೆ ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಹೆಸರಿಗೆ ಭಾರೀ ಕೈಗಾರಿಕಾ ಖಾತೆ ಅನ್ನೋದು ಇದೆ. ಆದರೆ ಭಾರೀ ಕೈಗಾರಿಕೆಯಲ್ಲಿ ಏನಿದೆ ಅನ್ನೋದನ್ನ ಸಾರ್ವಜನಿಕವಾಗಿ ಹೇಳಲು ಆಗಲ್ಲ. ಇನ್ನು ಉಕ್ಕು ಖಾತೆಯಲ್ಲಿ ಬದಲಾವಣೆ ತರಬೇಕಿದೆ. ದುಬಾರಿ ವಾಚ್ ತಯಾರಿಸುತ್ತಿದ್ದ HMT ಕಂಪನಿ 1970ರಲ್ಲೇ 250ಕೋಟಿ ಲಾಭದಲ್ಲಿತ್ತು. ಇವತ್ತಿಗೆ ಲೆಕ್ಕ ಹಾಕಿದರೆ 20,000 ಕೋಟಿ ಲಾಭ. ಆದರೆ ಇವತ್ತು ಆ ಕಾರ್ಖಾನೆ ಮುಚ್ಚುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳನ್ನ ಬಗೆಹರಿಸಬೇಕು. ಮೈಸೂರು ಮಹಾರಾಜರು ನಿರ್ಮಾಣ ಮಾಡಿದ ಭದ್ರವಾತಿ ಕಾರ್ಖಾನೆಯಲ್ಲಿ 13,000 ಜನ ಕೆಲಸ ಮಾಡ್ತಿದ್ರು. ಇವತ್ತು 200-300 ಜನ ಕೆಲಸ ಮಾಡ್ತಿದ್ದಾರೆ. ಈ ರೀತಿಯ ಸವಾಲು ನನ್ನ ಮುಂದಿದೆ.

ಆರ್ಥಿಕ ನೆರವಿಗೆ ಬಂದು ಅರ್ಜಿ ಕೊಡುವವರು ನಿರಾಸೆ ಆಗಬೇಡಿ

ಯಾರಾದರೂ ಕಷ್ಟ ಹೇಳಿಕೊಂಡು ಬಂದಾಗ ನನ್ನ ಬಳಿ ಇದ್ದರೂ, ಇಲ್ಲದಿದ್ರು ಕೈಲಾದ ಸಹಾಯ ಮಾಡಿದ್ದೇನೆ. ಮನೆ ಕಟ್ಟಲೋ, ಕೃಷಿ ಭೂಮಿ ಅಭಿವೃದ್ಧಿಗೆ ಬ್ಯಾಂಕ್ ಸಾಲ‌ ಮಾಡಿ ನನ್ನನ್ನು ತೀರಿಸು ಎಂದರೆ ಎಲ್ಲಿ ಆಗುತ್ತದೆ. ಆ ಸಾಲ ತೀರಿಸಲು ಮುಂದೆ ದೇವರು ಶಕ್ತಿ ಕೊಡುತ್ತಾನೆ, ನಂಬಿಕೆ‌ ಇದೆ. 3 ಬಾರಿ ವಾಲ್ ರಿಪ್ಲೇಸ್‌ಮೆಂಟ್ ಆದರೂ ದೇವರು ನನ್ನನ್ನು ಬದುಕಿಸಿರುವುದು ಜನರಿಗಾಗಿ. ಗೆದ್ದಿದ್ದಾರಲ್ಲ ಕಾವೇರಿ ಸಮಸ್ಯೆ ಬಗೆಹರಿಸಲಿ ಎಂದು ಸ್ನೇಹಿತರು ಹೇಳ್ತಾರೆ ಎಂದರು.

120-130 ವರ್ಷದ ಸಮಸ್ಯೆ ಬಗೆಹರಿಸಿ ಬಿಡಿ ಎಂದು ಸಲಹೆ ಕೊಡ್ತಿದ್ದಾರೆ

ಕಾವೇರಿಗಾಗಿ ರಾಜಕೀಯವಾಗಿ, ನ್ಯಾಯಾಲಯದಲ್ಲಿ ಹೋರಾಡಿದ ಮೊದಲಿಗರು ಇದ್ದರೆ ಅದು ದೇವೇಗೌಡರು. ಮಂತ್ರಿಯಾಗಿ ಇನ್ನು ಒಂದು ತಿಂಗಳಾಗಿಲ್ಲ. 120-130 ವರ್ಷದ ಸಮಸ್ಯೆ ಬಗೆಹರಿಸಿ ಬಿಡಿ ಎಂದು ಸಲಹೆ ಕೊಡ್ತಿದ್ದಾರೆ. ನನಗೆ ಸಲಹೆ ಕೊಡುವುದಾದರೆ ನಿಮಗೆ ಅಧಿಕಾರ ಕೊಟ್ಟಿದ್ಯಾಕೆ. ವರ್ಗಾವಣೆ ದಂದೆಯಲ್ಲಿ ಹಣ ಮಾಡಲಿಕ್ಕಾ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

SC,ST 187 ಹಣ ಲೂಟಿ ಹೊಡೆದು ರಾಜರೋಷವಾಗಿ ಓಡಾಡುವ ಬಂಡತನದ ರಾಜಕಾರಣ ನಾನು ಮಾಡಲ್ಲ. ಜೆಡಿಎಸ್ ನಿರ್ನಾಮ ಮಾಡಿದ್ದೇವೆ ಎಂಬ ನಿಮ್ಮ ಅಹಂಕಾರದ ಮಾತುಗಳು ನಾನು ಲೋಕಸಭೆಗೆ ನಿಲ್ಲುವಂತೆ ಮಾಡಿತು. ಜೆಡಿಎಸ್ ಪಕ್ಷವನ್ನ ಬಿಜೆಪಿ ಮುಂದೆ ಮಂಡಿಯೂರಿಸಿದ್ದಾರೆ ಬನ್ನಿ ನಮ್ಮ ಪಕ್ಷಕ್ಕೆ ಎಂದು ಕನಕಪುರದ ಸ್ನೇಹಿತರು ಹೇಳಿದ್ರು. ಜೆಡಿಎಸ್ ಪಕ್ಷ ಕಟ್ಟಿದ್ದು ಮಾನ್ಯ ದೇವೇಗೌಡರು. 90ನೇ ವಯಸ್ಸಿನಲ್ಲಿ ಇಂತಹ ಘಟನೆಗಳ ನೋವಿನ ನಡುವೆ ರಾಜ್ಯದ ಅಭಿವೃದ್ಧಿ ಅವರ ಹೃದಯದಲ್ಲಿದೆ. ನನ್ನ ಬಗ್ಗೆ ಎಷ್ಟಾದರೂ ಮಾತನಾಡಿ, ದೇವೇಗೌಡರ ಬಗ್ಗೆ ಲಘು ಮಾತುಗಳು ಆಡಬೇಡಿ ಎಂದು ಎಚ್ಚರಿಕೆ ನೀಡಿದರು.

ಕೊಡುಗೆಗಳನ್ನು ನಾವೆಲ್ಲರೂ ಮರೆಯುವಂತಿಲ್ಲ

ಪ್ರಾಸ್ತಾವಿಕ‌ ನುಡಿಯನ್ನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮೊದಲ ಬಾರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಅಂದು ಕುಮಾರಸ್ವಾಮಿಯವರು ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳನ್ನು ನಾವೆಲ್ಲರೂ ಮರೆಯುವಂತಿಲ್ಲ ಎಂದರು.

2018 ರಲ್ಲಿ ಕಾಂಗ್ರೆಸ್ ನವರು ಸಹವಾಸ ಬೇಡ ಎಂದಿದ್ವಿ. ಸ್ವತಹ ಪ್ರಧಾನಮಂತ್ರಿ ಮೋದಿಯವರೇ ಕುಮಾರಸ್ವಾಮಿಯವರಿಗೆ ರಾಜೀನಾಮೆ ನೀಡಿ ಬಿಜೆಪಿ ಜೊತೆ ಬನ್ನಿ ಎಂದಿದ್ರು‌. ಆದ್ರೆ ದೇವೇಗೌಡರು ಅಂದು ಒಪ್ಪಲಿಲ್ಲ. ಈ ಬಾರಿ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ಸೇರಿದ್ದೆವು. ಯಡಿಯೂರಪ್ಪ, ಕುಮಾರಸ್ವಾಮಿ ಒಟ್ಟಿಗೆ ಸೇರಿದ್ರು. ಹಳೆ ಮೈಸೂರು ಭಾಗದ 14 ಸೀಟ್ ಗಳಲ್ಲಿ 12 ಸೀಟು ಗೆದ್ದಿದ್ದೇವೆ. 2023 ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್ ಪೇಟೆ ಬಿಟ್ಟರೇ ನಾವೆಲ್ಲ ಸೋತಿದ್ದೆವೆ, ಆಗ ನಾವು ರಾಜಕೀಯ ಬೇಡ ಎಂದು ತೀರ್ಮಾನ ಮಾಡಿದ್ದೆವು. ಇದೀಗ ಲೋಕಸಭಾ ಚುನಾವಣೆಯಲ್ಲಿ ಕುಮಾರಣ್ಣರಿಗೆ ಪ್ರಚಂಡ ಬಹುಮತ ನೀಡಿ ಗೆಲ್ಲಿಸಿದ್ದೀರಿ.‌ ಮೇಲುಕೋಟೆ ಕ್ಷೇತ್ರದಲ್ಲಿ 50 ಸಾವಿರಕ್ಕೂ ಅಧಿಕ ಲೀಡ್ ಕೊಟ್ಟಿದ್ದೀರಿ. ನಿಮಗೆ ಕೃತಜ್ಞತೆ ಸಲ್ಲಿಸಲು ಇಂದು ಕುಮಾರಸ್ವಾಮಿಯವರೇ ಬಂದಿದ್ದಾರೆ ಎಂದರು.

ಬಂದಾಗಲೆಲ್ಲ ಮಳೆ ಬರುತ್ತೆ

ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಬಂದಾಗಲೆಲ್ಲ ಮಳೆ ಬರುತ್ತೆ. ಕುಮಾರಣ್ಣ ಬಂದ್ರು ಅಂದ್ರೆ ಮಳೆ.
ಮಂಡ್ಯಕ್ಕೆ ಬರ್ತಿದ್ದಂತೆ ಕನ್ನಂಬಾಡಿ ಕಟ್ಟೆ ಅರ್ಧ ತುಂಬಿತು. ಇವತ್ತು ಕಾರ್ಯಕ್ರಮಕ್ಕೆ ಬಂದಿದ್ದಾರೆ ಭರ್ಜರಿ ಮಳೆ ಬರ್ತಿದೆ. ಇದು ಶುಭ ಸಂಕೇತದ ಸೂಚನೆಯಾಗಿದೆ. ಕಬಿನಿ ಜಲಾಶಯ ಭರ್ತಿಯಾಗಿ 20,000 ಕ್ಯೂಸೆಕ್ ನೀರು ಬಿಡ್ತಿದ್ದಾರೆ ಎಂದರು.

ಮಾಜಿ ಸಚಿವ ಜಿ‌.ಟಿ.ದೇವೇಗೌಡ ಮಾತನಾಡಿ, ಮಂಡ್ಯ ಅಂದರೆ ಇಂಡಿಯಾ ಎಂಬುದನ್ನ ಸಾಬೀತು ಮಾಡಿದ್ದೇವೆ. ಈ ಕೃತಜ್ಞತಾ ಕಾರ್ಯಕ್ರಮವನ್ನ ಇಡೀ ರಾಜ್ಯ ನೋಡುತ್ತಿದೆ. ಕುಮಾರಸ್ವಾಮಿ ಅವರು ಸಿಎಂ ಆದಾಗ ಕೊಟ್ಟಂತಹ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಇದೆ ಎಂದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ‌ ಅನ್ನದಾನಿ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸಮಾರಂಭದಲ್ಲಿ ಮಾತನಾಡಿದರು.

ಸಭೆಯಲ್ಲಿ ಶಾಸಕ ಹೆಚ್.ಟಿ.ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಸೇರಿದಂತೆ ಮೈತ್ರಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಸಾವಿರಾರು‌ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!