Thursday, September 19, 2024

ಪ್ರಾಯೋಗಿಕ ಆವೃತ್ತಿ

ಅವಕಾಶ ವಂಚಿತರಿಗೆ ಮೀಸಲಾತಿ ಸಿಗಬೇಕಿದೆ

ನಮ್ಮ ದೇಶದಲ್ಲಿ ಯಾರು ಅವಕಾಶ ವಂಚಿತರಾಗಿರುವರೋ ಅವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕಿದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ ಮಂಡ್ಯ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತ ವಿಚಾರಗೋಷ್ಠಿ ಹಾಗೂ ಮೀಸಲಾತಿ ಭ್ರಮೆ ಮತ್ತು ವಾಸ್ತವ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಚಾರ ಮಂಡಿಸಿದರು.

ಮೀಸಲಾತಿ ಕ್ಷೇತ್ರದಲ್ಲೂ ಸಾಕಷ್ಟು ವೈರುಧ್ಯಗಳಿವೆ.ಸರಿಯಾದ ಮೀಸಲಾತಿ ಮಾಡಿಲ್ಲ. ಆದಿವಾಸಿಗಳು, ಅಲೆಮಾರಿಗಳು, ಸಫಾಯಿ ಕರ್ಮಚಾರಿಗಳು ಮೊದಲಾದ ತಳ ಸಮುದಾಯಗಳಿಗೆ ಕನಿಷ್ಠ ಶಿಕ್ಷಣವೇ ಇಲ್ಲ. ಮೀಸಲಾತಿ ವಿರುದ್ಧ ಮಾತನಾಡುವವರು,ಚರ್ಚೆ ಮಾಡುವವರು ಅವಕಾಶ ವಂಚಿತರಾಗಿರುವ ಇಂತಹ ಜನರಿಗೆ ಮೀಸಲಾತಿ ಸೌಲಭ್ಯ ನೀಡಬೇಕೆಂದು ಮಾತನಾಡುತ್ತಿಲ್ಲ. ನಮ್ಮ ದೇಶದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವ ಹೆಣ್ಣು ಮಕ್ಕಳಿಗೆ ಕೆಲಸ ಸಿಕ್ಕಿಲ್ಲ. ನಾವು ಇವರ ಬಗ್ಗೆ ಮಾತನಾಡಬೇಕಾಗಿದೆ.ಯಾರಿಗೆ ಮೀಸಲಾತಿ ಸಿಕ್ಕಿಲ್ಲವೋ ಅವರಿಗೆ ಮೀಸಲಾತಿ ಸಿಗಬೇಕಿದೆ ಎಂದರು.

ನಮ್ಮ ದೇಶದಲ್ಲಿ ಎಲ್ಲಾ ವರ್ಗಗಳಲ್ಲೂ ಅಸಮಾನತೆ ಇದೆ. ವರ್ಣಭೇದ, ಲಿಂಗ, ಧರ್ಮ, ಭಾಷಾ, ವರ್ಗ,ಸಾಂಸ್ಕೃತಿಕ ಭೇದವಿದೆ. ಎಲ್ಲಾ ದೇಶಗಳಲ್ಲೂ ಅಸಮಾನತೆ ಇದೆ.ಎಲ್ಲಾ ದೇಶಗಳಲ್ಲೂ ಬಂಡಾಯ ಇತಿಹಾಸವನ್ನು ನಾವು ಕಾಣುತ್ತೇವೆ. ಸಾಮಾಜಿಕ ನ್ಯಾಯ, ಅಸಮಾನತೆಯ ದ್ವನಿ ಪ್ರತಿ ದೇಶದಲ್ಲೂ ಇದೆ‌. ಅದರಂತೆ ಭಾರತದಲ್ಲಿ ಜಾತಿ, ವರ್ಗ, ಪ್ರಾಂತ ಭೇದವಿದ್ದು, ಒಬ್ಬ ರೈತನ ಮಗ ರೈತನಾಗಿರಬೇಕು, ಮಡಿವಾಳನ ಮಗ ಮಡಿವಾಳ ವೃತ್ತಿಯೇ, ಮಾಡಬೇಕು, ಕ್ಷೌರಿಕನ ನಮಗ ಅದೇ ವೃತ್ತಿ ಮುಂದುವರಿಸಬೇಕು ಎಂಬುದು ಸರಿಯಲ್ಲ ಎಂದರು.

ಅಸಮಾನತೆ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಇದೆ. ಈ ದೇಶದಲ್ಲಿ ದೊಡ್ಡ ಸಮುದಾಯವಾದ ಎಸ್ಸಿ,ಎಸ್ಟಿ ಓ ಬಿ ಸಿ ಹೆಣ್ಣು ಮಕ್ಕಳಿಗೆ ನೀರಿನ ಹಕ್ಕು, ಆಸ್ತಿ ಹಕ್ಕು, ಸೈನ್ಯ ಸೇರುವ ಹಕ್ಕು ಎಲ್ಲದರಲ್ಲೂ ವಂಚಿತರಾಗಿ ಮಾಡಿದ್ದಾರೆ.ಇಂತಹ ಅಸಮಾನತೆಯ ವಿರುದ್ಧ ಬುದ್ಧ, ಬಸವ, ಪೆರಿಯಾರ್, ನಾರಾಯಣ ಗುರು,ಅಂಬೇಡ್ಕರ್ ಮೊದಲಾದ ಮಹನೀಯರು ಅಸಮಾನತೆ ವಿರುದ್ಧ ಧ್ವನಿ ಎತ್ತಿದರು.

ಕೆಲವು ಸ್ವಾಮೀಜಿಗಳು ಸರ್ಕಾರಕ್ಕೆ ನಮ್ಮ ಸಮುದಾಯಕ್ಕೆ ಇಂತಿಷ್ಟು ಮೀಸಲಾತಿ ಕೊಡಬೇಕು ಎಂದು ಡೆಡ್ ಲೈನ್ ಫಿಕ್ಸ್ ಮಾಡಿದ್ದಾರೆ.ನಿಮ್ಮ ಜಾತಿಯ ಬೇಡಿಕೆ ಈಡೇರಿಕೆಗಾಗಿ ಈ ರೀತಿ ಬೆದರಿಸುವ ತಂತ್ರ ಸರಿಯಲ್ಲ.ಇಂದು ಮೀಸಲಾತಿ ನೀತಿ ಪುನರ್ ರಚನೆ ಮಾಡುವ ಸಂದರ್ಭ ಬಂದಿದೆ. ಮೀಸಲಾತಿ ಶಾಶ್ವತವಾಗಿ ಒಂದೇ ರೀತಿ ಇರಬಾರದು. ಜನಸಂಖ್ಯೆ ಮತ್ತು ಸ್ಥಿತಿಗತಿಗಳಿಗೆ ಅನುಗುಣವಾಗಿ ಬದಲಾಗಬೇಕು. ಶಿಕ್ಷಣ,ಉದ್ಯೋಗ, ಆರೋಗ್ಯ,ಆಹಾರ ಇವು ಮೂಲಭೂತ ಹಕ್ಕಾಗಬೇಕು. ಇದರಿಂದ ವಂಚಿತರಾದವರಿಗೆ ಕೊಡುವ ಮೂಲಕ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು.

ಆರೋಗ್ಯ ಹದಗೆಟ್ಟಾಗ ಪ್ರತಿಯೊಬ್ಬರಿಗೂ ಚಿಕಿತ್ಸೆ ಸಿಗಬೇಕು.ಸರ್ಕಾರವೇ ಆರೋಗ್ಯ,ಶಿಕ್ಷಣ, ಅನ್ನ,ಉದ್ಯೋಗ ಇವೆಲ್ಲವನ್ನುಮೂಲಭೂತ ಹಕ್ಕಾಗಿ ಕೊಡಬೇಕು. ಇದರಿಂದ ಸರ್ಕಾರಕ್ಕೆ ಜವಾಬ್ದಾರಿ ಬರುತ್ತೆ. ಮುಂದೆ ಒಂದು ನೀತಿಯು ಆಗುತ್ತೆ. ಶಿಕ್ಷಣ ಉದ್ಯೋಗದ ಅವಕಾಶಗಳು ಸಿಕ್ರೆ ಏಕೆ ಮೀಸಲಾತಿ ಕೇಳುತ್ತಾರೆ? ಆದ್ಯತೆ ಮೇಲೆ ಮೀಸಲಾತಿ ಹಂಚಬೇಕು.ನೂರಾರು ವರ್ಷಗಳಿಂದ ಅವಕಾಶ ವಂಚಿತರಾದವರಿಗೆ ಮೀಸಲಾತಿ ನೀಡಬೇಕು ಎಂದರು.

ಮೆರಿಟ್ ಜೀವನದ ಮೌಲ್ಯ ಕಲಿಸುವುದಿಲ್ಲ. ಅವಕಾಶ ಸಿಕ್ಕಿದರೆ ಎಲ್ಲರೂ ತಮ್ಮಲ್ಲಿರುವ ಪ್ರತಿಭೆ, ಶಕ್ತಿಯನ್ನು ತೋರಿಸುತ್ತಾರೆ.ಅಂತಹ ವ್ಯವಸ್ಥೆ ಕಲ್ಪಿಸದ ಮೇಲೆ ಅಂತಹ ಜನರಿಗೆ ಮೀಸಲಾತಿ ಕಲ್ಪಿಸಬೇಕಾದ ಜವಾಬ್ದಾರಿ ಸರ್ಕಾರದ್ದಾಗಿದೆ. ಮೆರಿಟ್ ಎಂಬುದು ಮೇಲ್ಜಾತಿ ಮತ್ತು ಶ್ರೀಮಂತರ ಸ್ವತ್ತಲ್ಲ. ದಲಿತ ಹಿಂದುಳಿದ ವರ್ಗಗಳಲ್ಲೂ ಮೆರಿಟ್ ಪಡೆದುಕೊಳ್ಳುವ ಜನರ ಸಂಖ್ಯೆ ಜಾಸ್ತಿ ಇದೆ.ಬದುಕು ಕಟ್ಟಿಕೊಳ್ಳುವುದು ಮೆರಿಟ್ ಆಗಬೇಕೇ ಹೊರತು ಅದೇ ಮುಖ್ಯವಲ್ಲ ಎಂದರು.

ಹಿರಿಯ ವಕೀಲ ಎಚ್. ಬಸವಯ್ಯ ಮೀಸಲಾತಿ ಭ್ರಮೆ ಮತ್ತು ವಾಸ್ತವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ವಕೀಲರಾದ ಬಿ.ಟಿ. ವಿಶ್ವನಾಥ್, ಶ್ರೀನಿವಾಸ್ ಕುಮಾರ್, ಸಿದ್ದರಾಜು, ರಾಜೇಂದ್ರ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!