Thursday, September 19, 2024

ಪ್ರಾಯೋಗಿಕ ಆವೃತ್ತಿ

ತಗ್ಗಹಳ್ಳಿ ವೆಂಕಟೇಶ್ ಕೆಲಸ ಸಾರ್ಥಕವಾದದ್ದು : ಕೆಟಿಎಸ್


  • ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಉಪನ್ಯಾಸ – ರಕ್ತದಾನ ಶಿಬಿರ

  • ನಿಮ್ಮೆಲ್ಲರ ಸಹಾಯ-ಸಹಕಾರ ನನ್ನ ಮೇಲೆ ಇರಲಿ-ವೆಂಕಟೇಶ್

ಹುಟ್ಟುಹಬ್ಬದ ಮೂಲಕ ರಕ್ತದಾನ ಶಿಬಿರ ಏರ್ಪಡಿಸಿ, ನೊಂದವರ ಜೀವ ಉಳಿಸುವ ಕೆಲಸ ಮಾಡುತ್ತಿರುವ ತಗ್ಗಹಳ್ಳಿ ವೆಂಕಟೇಶ್ ಅವರ ಕಾರ್ಯ, ಸಾರ್ಥಕವಾದದ್ದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಡ್ಯದ ಗುರುಭವನದಲ್ಲಿ ನಡೆದ ತಗ್ಗಹಳ್ಳಿ ವೆಂಕಟೇಶ್ ಅವರ ಜನ್ಮದಿನೋತ್ಸವದ ಅಂಗವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಉಪನ್ಯಾಸ, ರಕ್ತದಾನ ಶಿಬಿರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್, ಜಾಹೀರಾತು ಮೂಲಕ ದಿಡೀರ್ ನಾಯಕರಾಗುವ ವರ್ಗ ಹುಟ್ಟಿಕೊಂಡಿದೆ, ಜನರ ಕಷ್ಟ ಸುಖ ಕೇಳಿ ಹೋರಾಟದ ಮೂಲಕ ನಾಯಕತ್ವ ಕಟ್ಟಿಕೊಳ್ಳುವ ವರ್ಗವೊಂದು ಇದೆ, ಆ ವರ್ಗಕ್ಕೆ ವೆಂಕಟೇಶ್ ಸೇರಿದವರು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕಾರಣದಲ್ಲಿ ತೊಡಗಿಸಿಕೊಂಡ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡುವ ಮೂಲಕ ಜನಪ್ರಿಯತೆ ಗಳಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಕಾವೇರಿ ಚಳುವಳಿ, ಮೈಷುಗರ್ ಧರಣಿ, ಸಂಘಟನೆ ಮತ್ತು ಹೋರಾಟದ ಮೂಲಕ ಕೆಲಸ ಮಾಡುವ ವೆಂಕಟೇಶ್, ಜನಮಾನಸದ ನಾಯಕರು ಆಗಿದ್ದಾರೆ ಎಂದು ನುಡಿದರು.

ಮುಂದಿನ ದಿನಗಳಲ್ಲಿ ವೆಂಕಟೇಶ್ ಅವರಿಗೆ ಒಳ್ಳೆಯ ಭವಿಷ್ಯವಿದೆ, ಸರಿಯಾದ ರಾಜಕೀಯ ನಿರ್ಧಾರ ಮಾಡುವುದು ಅವರ ಕೈಯಲ್ಲಿದೆ ಎಂದರು.

ಉಪನ್ಯಾಸಕ ಚಮರಂ ಮಾತನಾಡಿ, ಪ್ರಜಾಪ್ರತಿನಿಧಿ ಸಭೆಯನ್ನು ಕ್ರಿಯಾಶೀಲಗೊಳಿಸಿದ್ದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ, ಬಹುಜನರಿಗೆ ಭಾರತದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ನಾಲ್ವಡಿಯವರ ಕುರಿತು ವಿಚಾರಧಾರೆಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ತಗ್ಗಹಳ್ಳಿ ವೆಂಕಟೇಶ್, ಅಧಿಕಾರ ಇರಲಿ, ಇಲ್ಲದಿರಲಿ ಜನರ ಅಳಿಲು ಸೇವೆ ಮಾಡುತ್ತೇನೆ. ನಿಮ್ಮೆಲ್ಲರ ಸಹಾಯ-ಸಹಕಾರ ನನ್ನ ಮೇಲೆ ಇರಲಿ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ 12 ವರ್ಷಗಳಾಗಿದ್ದರೂ ದಿನನಿತ್ಯ ಜನಗಳ ಜೊತೆ ಒಡನಾಟ ಇಟ್ಟುಕೊಂಡು ನ್ಯಾಯ ಪಂಚಾಯಿತಿ, ಆಸ್ಪತ್ರೆಗಳ ಕೆಲಸ, ಸಾರ್ವಜನಿಕರು ಕರೆದಾಗ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಅಳಿಲು ಮಾಡುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ನಡೆಸಿ, ಸಾಧಕರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಶ್ರೀರಂಗಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪೈ. ಮುಕುಂದ, ಜಿ.ಪಂ. ಮಾಜಿ ಸದಸ್ಯ ಹೆಚ್. ಎನ್.ಯೋಗೇಶ್, ಹೆಚ್.ಪಿ.ನಾಗಪ್ಪ, ಕಾಳೇಗೌಡ, ಶಶಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ಇದಕ್ಕೂ ಮುನ್ನ ನಡೆದ ರಕ್ತದಾನ ಶಿಬಿರದಲ್ಲಿ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಶ್ರೀರಂಗಪಟ್ಟಣ ಪುರಸಭಾ ಸದಸ್ಯ ಎಂ.ನಂದೀಶ್, ಶ್ರೀರಂಗಪಟ್ಟಣ ತಾ.ಪಂ. ಮಾಜಿ ಅಧ್ಯಕ್ಷ ಕೆಆರ್‌ಎಸ್ ರಾಮೇಗೌಡ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!