Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಾಮೀಣ ಪ್ರದೇಶಗಳಲ್ಲಿ ರಂಗಕಲೆ ಜೀವಂತ – ತಿರುಮಲಾಪುರ ನಾರಾಯಣ್

ನಗರ ಪ್ರದೇಶಗಳಲ್ಲಿ ನಶಿಸಿಹೋಗಿರುವ ನಾಟಕ ಕಲೆಗಳು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತ ವಾಗಿರುವುದು ಸಮಾಧಾನ ತರುವ ವಿಷಯವಾಗಿದೆ ಎಂದು ಸಾಹಿತಿ ಹಾಗೂ ಅಬಕಾರಿ ನಿರೀಕ್ಷಕ ತಿರುಮಲಾಪುರ ಕೆ.ನಾರಾಯಣ್ ಹೇಳಿದರು.

ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗ ಮಂಟಪದಲ್ಲಿ ಶ್ರೀ ವೆಂಕಟೇಗೌಡ ಸೇವಾ ಸಮಿತಿ ಹಾಗೂ ರಂಗಕೃಷಿ ಸಾಂಸ್ಕೃತಿಕ ವೇದಿಕೆ ಕ್ಯಾತನಹಳ್ಳಿ ಹಾಗೂ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ದಿ.ಚಿಕ್ಕೇಗೌಡ-ಮಾಯಮ್ಮ ಹಾಗೂ ದಿ.ವೈ.ಸಿ.ಪುಟ್ಟೇಗೌಡ-ಸಾಕಮ್ಮರವರ ಸ್ಮರಣಾರ್ಥ ಆಯೋಜಿಸಿದ್ದ ಬಳ್ಳಾರಿಯ ಸಿರಿಗೆರೆಯ ಧಾತ್ರಿ ರಂಗಸಂಸ್ಥೆ ಅಭಿನಯಿಸಿದ ಶ್ರೀಕೃಷ್ಣ ಸಂಧಾನ ನಗೆ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ನಗರ ಪ್ರದೇಶಗಳಲ್ಲಿ ರಂಗಭೂಮಿ, ಕಲೆಗಳನ್ನು‌ ನೋಡಲು ಸಾಧ್ಯವಿಲ್ಲ. ಆದರೆ ಹಳ್ಳಿಗಳಲ್ಲಿ ಈ ಕಲೆಗಳು ಉಳಿದಿವೆ. ಈ ಹಿಂದೆ ಹಳ್ಳಿಗಳಲ್ಲಿ ನಾಟಕ ನೋಡಲು ಆ ಊರಿನ ಜನರಲ್ಲದೇ ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದರು. ಆದರೆ ಇಂದು ಫೇಸ್ ಬುಕ್, ವ್ಯಾಟ್ಸಪ್, ಟಿವಿ ಧಾರಾವಾಹಿ, ಸಿನಿಮಾಗಳ ಹಾವಳಿಯಿಂದ ರಂಗಕಲೆಗೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಗ್ರಾಮೀಣ ಜನರಲ್ಲೂ ರಂಗ ಕಲೆಗಳ ಬಗ್ಗೆ ಅಸಕ್ತಿ ಕಡಿಮೆಯಾಗಿದೆ. ಇದೊಂದು ಸಾಂಸ್ಕೃತಿಕ ದುರಂತ ಎಂದರು.

ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್ ಮಾತನಾಡಿ, ಸಾಂಸ್ಕೃತಿಕ ನಾಗಲೋಟದಲ್ಲಿ ಎಲ್ಲವನ್ನೂ ಮರೆಯುತ್ತಿರುವ ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಕಲೆ ಉಳಿವು ಕಷ್ಟ. ಆದರೂ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಉಳಿದಿದೆ. ಈ ಹಿಂದೆ ಎತ್ತಿನಗಾಡಿ ಕಟ್ಟಿಕೊಂಡು ಸೀನರಿ ಹಾಗೂ ಶೆ ಡ್ ಹಾಕಿ ನಾಟಕ ಮಾಡುತ್ತಿದ್ದ ದಿನಗಳನ್ನು ನಾವು ಕಾಣುತ್ತಿದ್ದೇವು. ಆದರೆ ಇತ್ತೀಚಿನ ದಿನಗಳಲ್ಲಿ ಇವೆಲ್ಲವೂ ಕಣ್ಮರೆಯಾಗುತ್ತಿರುವುದು ವಿಷಾದನೀಯ ಎಂದರು.

ಹಿರಿಯ ಕಲಾವಿದ ಡಾ.ಸಿ.ಶಂಕರ್, ಕ್ಯಾತನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್, ‌ಎಣ್ಣೆಹೊಳೆಕೊಪ್ಪಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ, ಶ್ರೀವೆಂಕಟೇಗೌಡ ಸೇವಾ ಸಮಿತಿ ಅಧ್ಯಕ್ಷ ಡಾ.ಕೆ.ವೈ.ಶ್ರೀನಿವಾಸ್, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ರಂಗಕೃಷಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ರಂಗನಾಥ್, ಕಲಾವಿದ ಪಾಪಣ್ಣ ಇತರರಿದ್ದರು. ಹಾಡುಗಾರ ಹರಳಹಳ್ಳಿ ಗೋವಿಂದರಾಜು ಕ್ರಾಂತಿಗೀತೆಗಳನ್ನು ಹಾಡಿ‌ ರಂಜಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!