Friday, September 20, 2024

ಪ್ರಾಯೋಗಿಕ ಆವೃತ್ತಿ

150 ಸಂಸದರನ್ನು ಹೊರ ಹಾಕಿದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯೇ ನಡೆಯುತ್ತಿಲ್ಲ: ರಾಹುಲ್ ಗಾಂಧಿ ಕಿಡಿ

ಸಂಸತ್‌ನಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಪ್ರತಿಭಟಿಸುವ ವೇಳೆ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ದ ಸಂಸದರೊಬ್ಬರು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಅಣಕಿಸಿದ ಆರೋಪ ಕೇಳಿ ಬಂದಿದೆ.

ಸಂಸತ್‌ನಿಂದ ಅಮಾನತುಗೊಂಡಿರುವ ಸಂಸದರು ಹೊಸ ಸಂಸತ್‌ ಕಟ್ಟಡದ ‘ಮಕರ ದ್ವಾರ’ದ ಬಳಿ ಕುಳಿತು ಪ್ರತಿಭಟಿಸುತ್ತಿದ್ದರು. ಈ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಅಣಕಿಸಿದ್ದಾರೆ ಎನ್ನಲಾಗಿದೆ. ಕಲ್ಯಾಣ್ ಬ್ಯಾನರ್ಜಿ ಮಿಮಿಕ್ರಿ ಮಾಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದರು. ಇದನ್ನು ಹಲವಾರು ಮಾಧ್ಯಮಗಳು ಪ್ರಸಾರ ಮಾಡಿದ ನಂತರ ವಿವಾದವಾಗಿ ಪರಿಣಮಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ಸಂಸದರು ಅಲ್ಲಿ ಕುಳಿತಿದ್ದರು, ನಾನು ಅವರ ವಿಡಿಯೋವನ್ನು ಶೂಟ್ ಮಾಡಿದ್ದೇನೆ. ನನ್ನ ವೀಡಿಯೊ ನನ್ನ ಫೋನ್‌ನಲ್ಲಿದೆ. ಮಾಧ್ಯಮಗಳು ಅದನ್ನು ತೋರಿಸುತ್ತಿವಾ? ಅಲ್ಲಿ ಯಾರ ಬಗ್ಗೆಯೂ, ಏನನ್ನೂ ಹೇಳಿಲ್ಲ. ಸುಮಾರು 150ರಷ್ಟು ಸಂಸದರನ್ನು ಸದನದಿಂದ ಹೊರಹಾಕಲಾಗಿದೆ. ಆದರೆ, ಮಾಧ್ಯಮಗಳಲ್ಲಿ ಅದರ ಬಗ್ಗೆ ಯಾವುದೇ ಚರ್ಚೆ ಇಲ್ಲ” ಎಂದು ಮಾಧ್ಯಮಗಳ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

“ಮಾಧ್ಯಮಗಳಲ್ಲಿ ಅದಾನಿ ಹಗರಣ ಬಗ್ಗೆ ಯಾವುದೇ ಚರ್ಚೆ ಇಲ್ಲ, ರಫೇಲ್ ಬಗ್ಗೆ ಯಾವುದೇ ಚರ್ಚೆ ಇಲ್ಲ, ನಿರುದ್ಯೋಗದ ಬಗ್ಗೆ ಯಾವುದೇ ಚರ್ಚೆ ಇಲ್ಲ. ನಮ್ಮ ಸಂಸದರು ನಿರಾಶೆಗೊಂಡು ಹೊರಗೆ ಪ್ರತಿಭಟನೆ ಮಾಡುತ್ತಾ ಕುಳಿತಿದ್ದಾರೆ. ಆದರೆ ನೀವು ಮಿಮಿಕ್ರಿ ಮಾಡಿದ್ದಾರೆ ಎಂದು ಚರ್ಚಿಸುತ್ತಿದ್ದೀರಿ. ಸ್ವಲ್ಪವಾದರೂ ಇಂತಹ ಸುದ್ದಿಗಳ ಬಗ್ಗೆ ಗಮನಹರಿಸಿ. ಕೇವಲ ಒಂದನ್ನೇ ಇಟ್ಟುಕೊಂಡು ನೀವು ಅದನ್ನೇ ಚರ್ಚೆ ಮಾಡುವುದಾದರೆ ನಾವೇನು ಮಾಡೋಣ?” ಎನ್ನುವ ಮೂಲಕ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಅಣಕಿಸಿದ ಆರೋಪವನ್ನು ತಳ್ಳಿ ಹಾಕಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!