Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಯಕ ಬಂಧುಗಳು ಸೇತುವೆಯಿದ್ದಂತೆ :ಇಓ ರಾಮಲಿಂಗಯ್ಯ

ಕಾಯಕ ಬಂಧುಗಳು ಗ್ರಾಮ ಪಂಚಾಯಿತಿ ಮತ್ತು ಕೂಲಿಕಾರರ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆಂದು ಮಳವಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಅಭಿಪ್ರಾಯಪಟ್ಟರು.

ಮಳವಳ್ಳಿಯ ತಾ.ಪಂ.ಸಭಾಂಗಣದಲ್ಲಿ ಜನವಾದಿ ಮಹಿಳಾ ಸಂಘಟನೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ನಡೆದ ಸ್ವಸಹಾಯ ಗುಂಪುಗಳ ಮಹಿಳೆಯರ ಹಾಗೂ ಕಾಯಕ ಬಂಧುಗಳ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಕೂಲಿಕಾರರು ಮತ್ತು ಕಾಯಕ ಬಂಧುಗಳು ಗ್ರಾಮಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ.ಸ್ಥಳೀಯ ಮಟ್ಟದಲ್ಲಿ ಬಾಳಿಕೆ ಬರುವ ಆಸ್ತಿ ಸೃಜನೆ ಮಾಡಿ ಮತ್ತು ಸ್ಥಳೀಯ ಜನರ ಕೈಗೆ 100 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದೆ ಎಂದರು.

ನರೇಗಾ ಯೋಜನೆಯಲ್ಲಿ ಮಹಿಳಾ ಪಾಳ್ಗೊಳ್ಳುವಿಕೆಯಲ್ಲಿ ಜಿಲ್ಲೆಯಲ್ಲಿ ಮಳವಳ್ಳಿ ತಾಲ್ಲೂಕು ಕಳೆದ ವರ್ಷ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ ವರ್ಷದಲ್ಲಿ ಈ ಸ್ಥಾನ ಕಾಯ್ದುಕೊಳ್ಳಲು ಎಲ್ಲರ ಸಹಕಾರ ಅಗತ್ಯವಿದ್ದು, ಕೂಲಿಕಾರರಿಗೆ ನಿರಂತರ ಉದ್ಯೋಗ ನೀಡುವ ಭರವಸೆಯನ್ನು ರಾಮಲಿಂಗಯ್ಯ ನೀಡಿದರು.

ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ದೇವಿ ಮಾತನಾಡಿ, ಮಂಡ್ಯ ಜಿಲ್ಲೆಯ ಪ್ರತಿ ಹಳ್ಳಿಗಳಿಗೂ ನರೇಗಾ ಯೋಜನೆಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸಂಘಟಿತರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ ಅವರು, ಪ್ರತಿ ಕುಟುಂಬವೂ ಯೋಜನೆಯ ಪ್ರಯೊಜನ ಪಡೆಯುವಂತಾಗಬೇಕು ಎಂದು ಆಶಿಸಿದರು.

ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ ಮುನಿರಾಜು ಮಾತನಾಡಿ, ಕೂಲಿಕಾರರು ಸಕಾಲಕ್ಕೆ ಕೂಲಿ ಪಡೆಯುವ ಬಗ್ಗೆ ಹಾಗೂ ಎನ್ಎಂಎಂಎಸ್ ಆ್ಯಪ್ ಮೂಲಕ ಕಡ್ಡಾಯ ಹಾಜರಾತಿ ಪಡೆಯುವ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಐಇಸಿ ಸಂಯೋಜಕಿ ರೇಖಾ ಕೀಲಾರ, ಕಾಯಕ ಬಂಧುಗಳ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಟ್ಟರು.

ಜನವಾದಿ ಸಂಘಟನೆಯ ಸುನೀತಾ, ಮಂಜುಳಾ, ಶೋಭಾ, ತಾಲ್ಲೂಕು ಸಹಾಯಕ ನಿರ್ದೇಶಕ ದೀಪು, ತಾಂತ್ರಿಕ ಸಂಯೋಜಕರಾದ ಸುಹಾಸ್, ತಾಲ್ಲೂಕು ಐಇಸಿ ಸುನೀಲ್ ಕುಮಾರ್, ಗುರುಸ್ವಾಮಿ, ಶಿವಣ್ಣ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!