Thursday, September 19, 2024

ಪ್ರಾಯೋಗಿಕ ಆವೃತ್ತಿ

ಊರಿಗೆ ಉಪಕಾರ ಮಾಡಿದವರನ್ನು ಬೆಂಬಲಿಸಬೇಕು; ಪ್ರಸನ್ನ ಎನ್.ಗೌಡ

ಮಹಿಳೆಯರು ಊರಿಗೆ ಉಪಕಾರ ಮಾಡಿದವರನ್ನು ಬೆಂಬಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕುಟುಂಬದ ಆರ್ಥಿಕತೆ, ಆರೋಗ್ಯ ವೃದ್ಧಿಸಲು ಗೃಹಿಣಿಯರ ಪಾತ್ರ ಅಪಾರವಾಗಿದ್ದು, ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಜನಚೇತನ ಟ್ರಸ್ಟ್ನ ಸಂಸ್ಥಾಪಕ ಹಾಗೂ ರೈತಸಂಘದ ಯುವ ಮುಖಂಡ ಪ್ರಸನ್ನ ಎನ್.ಗೌಡ ಕರೆ ನೀಡಿದರು.

ನಗರದ ಕಲಾಮಂದಿರದಲ್ಲಿ ಕೀರೆಮಡಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಎಲ್ಲರ ಮನೆ ಕಷ್ಟಸುಖಗಳು ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಪಕ್ಕದ ಮನೆಯವರ ಪರಿಚಯವೇ ಇರುವುದಿಲ್ಲ.

ನಾವು ನಮ್ಮ ಕಷ್ಟ ಸುಖಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡಾಗ ಮಾತ್ರ ನಮ್ಮ ಮನಸ್ಸು ಹಗುರಾಗುತ್ತದೆ. ಇದನ್ನು ಗ್ರಾಮೀಣ ಮಹಿಳೆಯರು ಮಾಡುತ್ತಿದ್ದಾರೆ. ಜೊತೆಗೆ ಸೊಪ್ಪು, ತರಕಾರಿ ಬಳಸುತ್ತಿರುವುದರಿಂದ ಮತ್ತು ಹೆಚ್ಚು ಕೆಲಸ ಮಾಡುತ್ತಿರುವುದರಿಂದ ಸಾಧ್ಯವಾದಷ್ಟೂ ರೋಗಗಳಿಂದ ದೂರವಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ಸಾಮಾಜಿಕ ಕಳಕಳಿ ಉಳ್ಳವರು ಸಮಾಜಸೇವಾ ಕ್ಷೇತ್ರಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಅಂತವರಲ್ಲಿ ಮಧುಚಂದನ್ ಕೂಡ ಒಬ್ಬರು. ಅವರು ಕೀರೆಮಡಿ ಮಹಿಳಾ ಸೌಹಾರ್ಧ ಸಹಕಾರ ಸಂಘ ಸ್ಥಾಪನೆಗೆ ಮುಂದಾಗಿದ್ದಾರೆ. ಆ ಮೂಲಕ ಗ್ರಾಮೀಣರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇಂತವರು ಜನಪ್ರತಿನಿಧಿಯಾಗಬೇಕೆಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿ: ಮಂಡ್ಯದ ಯುವ ಜನತೆ ಕೈಗಳಿಗೆ ಕೆಲಸ ಬೇಕಾಗಿವೆ| ಮಧುಚಂದನ್


 

ನಗರಸಭೆ ಮಾಜಿ ಸದಸ್ಯೆ ನಾಗರೇವಕ್ಕ ಮಾತನಾಡಿ, ಒಂದು ಕುಕ್ಕರ್, ಸೀರೆ ನೀಡುವ ರಾಜಕಾರಣಿಗಳಿಗೆ ಮತ ಮಾರಿಕೊಳ್ಳುವುದು ಎಷ್ಟು ಸರಿ ಎಂಬುದನ್ನು ಮಹಿಳೆಯರು ಯೋಚಿಸಬೇಕಿದೆ. ಇವತ್ತು ಹಣ ಹಾಕಿ ದುಪ್ಪಟ್ಟು ಹಣ ದೋಚುವುದರಲ್ಲೇ ತೊಡಗಿರುವ ರಾಜಕಾರಣಿಗಳು ಏನೇನು ಹಗರಣ ಮಾಡುತ್ತಿದ್ದಾರೆಂಬುದನ್ನು ಅರಿತುಕೊಳ್ಳಬೇಕು.

ಜನಪ್ರತಿನಿಧಿಯಾಗಲು ನಾಲಾಯಕ್ಕಾದ ವ್ಯಕ್ತಿ ಕುಕ್ಕರ್, ಸೀರೆ, ಮಿಕ್ಸಿ ಮುಂತಾದ ಆಮಿಷಗಳನ್ನು ನಿಮ್ಮ ಮುಂದಿರಿಸಿ ಯಾಮಾರಿಸುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಒಬ್ಬ ಸಮಾಜ ಸೇವೆಯಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡ ವ್ಯಕ್ತಿಯನ್ನು ನಾವು ದೂರ ಇಡುತ್ತ ಬಂದಿರುವುದು ಇಂದಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಇವತ್ತು ಒಬ್ಬ ಕೌನ್ಸಿಲರ್ ಚುನಾವಣೆ ಗೆಲ್ಲುವುದಕ್ಕೂ 30-40 ಲಕ್ಷ ರೂ. ವೆಚ್ಚ ಮಾಡುತ್ತಾರೆಂದರೆ ಯಾರು ಹೆಚ್ಚು ಭ್ರಷ್ಟರು ಎಂಬುದನ್ನು ಮೊದಲು ನಾವು ಅರಿಯಬೇಕಿದೆ. ಆದ್ದರಿಂದ ಮಹಿಳೆಯರು ಎಚ್ಚೆತ್ತುಕೊಂಡರೆ ಸಮಾಜದಲ್ಲಿ ಅಲ್ಪವಾದರೂ ಬದಲಾವಣೆ ತರಲು ಸಾಧ್ಯ ಎಂದು ಸಲಹೆ ನೀಡಿದರು.

ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ.ಹೇಮ ಶಿವಲಿಂಗಯ್ಯ ಅವರು ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳ ಪರಿಹಾರದ ಕುರಿತು ಸಲಹೆ, ಮಾಹಿತಿ ನೀಡಿದರು. ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಪ್ರಾಸ್ತಾವಿಕ ನುಡಿಯಾಡಿದರು.

ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಯಧುಶೈಲ ಸಂಪತ್, ಆರ್ಗ್ಯಾನಿಕ್ ಮಂಡ್ಯದ ಸಹ ಸಂಸ್ಥಾಪಕ ಬಿ.ಎಸ್.ಪ್ರಸನ್ನ, ಸಮಾಜ ಸೇವಕರಾದ ಎಂ.ಎನ್.ಚಂದ್ರಶೇಖರ್, ಸಿ.ಬಿ.ತಮ್ಮೇಗೌಡ, ಅರ್ಚನಾ ಮಧುಚಂದನ್ ಮತ್ತಿತರರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!