Wednesday, July 24, 2024

ಪ್ರಾಯೋಗಿಕ ಆವೃತ್ತಿ

ಮನುಷ್ಯತ್ವ ಇಲ್ಲದವರು ಮೃಗಕ್ಕೆ ಸಮಾನ

ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ದೊಡ್ಡದು. ಯಾವ ಮನುಷ್ಯರಿಗೆ ಮನುಷ್ಯತ್ವ ಇಲ್ಲವೋ, ಅವರು ನಿಜಕ್ಕೂ ಮೃಗಗಳಿಗೆ ಸಮಾನ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಳವಳ್ಳಿ ತಾಲ್ಲೂಕಿನ ಕಲ್ಲಾರೇಪುರ ಗ್ರಾಮದಲ್ಲಿ ಮಹದೇಶ್ವರ ಸೇವಾ ಟ್ರಸ್ಟ್ ನೂತನವಾಗಿ ನಿರ್ಮಿಸಿರುವ ಮಹದೇಶ್ವರ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮೊಳಗೆ ದೇವರಿದ್ದಾನೆ. ಮನಸ್ಸು ಶುದ್ಧವಾಗಿ ಇರಬೇಕೆಂದರೆ, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸದೇ ಒಳ್ಳೆಯದನ್ನು ಮಾಡುವ ಮನಸ್ಸು ಹೊಂದಿರಬೇಕು. ದೇವರನ್ನು ಕಣ್ಣು ತಪ್ಪಿಸಿ ಏನು ಮಾಡುವುದಕ್ಕೂ ಆಗದು. ದೇವರು ಎಲ್ಲರಲ್ಲಿಯೂ ಇದ್ದಾನೆ. ಹೀಗಾಗಿ ನಾವು ಏನೇ ಒಳ್ಳೆಯ, ಕೆಟ್ಟ ಕೆಲಸಗಳನ್ನು ಮಾಡಿದರೂ ದೇವರಿಗೆ ಗೊತ್ತಾಗುತ್ತದೆ ಎಂದರು.

ಇಂದು ಸಮಾಜದಲ್ಲಿ ಜಾತಿ ಬಹಳ ಮುಖ್ಯವಾಗಿದೆ. ಮನುಷ್ಯನ ವೃತ್ತಿಯ ಆಧಾರದ ಮೇಲೆ ಜಾತಿ ನಿರ್ಮಾಣವಾಗಿದ್ದು, ಜಾತಿ ವ್ಯವಸ್ಥೆಯನ್ನು ಹುಟ್ಟಿ ಹಾಕಿರುವವರು ಸ್ವಾರ್ಥಿಗಳು. ಸಮಾಜದಲ್ಲಿ ಜಾತಿ ವ್ಯವಸ್ಥೆ ಇದ್ದರೆ ಗೌರವ ಸಿಗುತ್ತದೆ. ಹೀಗಾಗಿ ಶೋಷಣೆ ಮಾಡಲು ಅವಕಾಶ ಸಿಗುವ ಕಾರಣಕ್ಕಾಗಿ ಕೆಲವರು ಜಾತಿ ವ್ಯವಸ್ಥೆ ಮಾಡಿದ್ದಾರೆ. ಇದು ಶೋಚನೀಯ ಸಂಗತಿ ಎಂದು ಹೇಳಿದರು.

ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದೇವಸ್ಥಾನ ಚೆನ್ನಾಗಿ ನಿರ್ಮಾಣವಾಗಿದ್ದು, ಗ್ರಾಮಸ್ಥರು ಸೇವಾ ಮನೋಭಾವದಿಂದ ದೇವರನ್ನು ಪೂಜಿಸುವುದರ ಜೊತೆಗೆ ನಾಡಿನ ಅಭಿವೃದ್ಧಿಗೆ ಕೈಜೋಡಿಸಬೇಕು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಸೇವಾ ಪ್ರಾಧಿಕಾರ ರಚನೆ ಮಾಡಿ, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆ ಎಂದರು.

ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಇಂದು ರಾಜ್ಯದಲ್ಲಿ ಅರಾಜಕತೆ ತುಂಬಿದೆ. ಜನರ ಪರವಾದ ಆಡಳಿತ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಆಡಳಿತವನ್ನು ಮತ್ತೊಮ್ಮೆ ಸುಭಿಕ್ಷೆಯಿಂದ ನಡೆಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಬೇಕೆಂದ ಅವರು, ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಸಹಕಾರ ಬೇಕು ಎಂದರು. ಬಸವಣ್ಣನವರ ವಚನದಂತೆ ಕಾಯಕವೇ ಕೈಲಾಸ ಎಂಬ ಕಾಯಕ ತತ್ವದ ಮೂಲಕ ಜವಾಬ್ದಾರಿಯ ಹೆಜ್ಜೆಯನ್ನು ಇಟ್ಟಿರುವ ಸಿದ್ದರಾಮಯ್ಯ ಅವರ ಅಣತಿಯಂತೆ ನಿಮ್ಮ ಸೇವೆಯನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಮಾಡುವಂತೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ಅನ್ನದಾನಿ ಮಾತನಾಡಿ, ನಿಮ್ಮೆಲ್ಲರಂತೆ ನಾನು ಕೂಡ ಸಿದ್ದರಾಮಯ್ಯನವರ ಅಭಿಮಾನಿ. ಪಕ್ಷಕ್ಕೂ ಅಭಿಮಾನಕ್ಕೂ ಸಂಬಂಧವಿಲ್ಲ. ಒಂದು ಕಾಲದಲ್ಲಿ ಅವರ ಕೈ ಕೆಳಗಡೆ ರಾಜಕೀಯ ಮಾಡಿದ್ದೇನೆ. ಕೆಲವು ಸಂದರ್ಭದಲ್ಲಿ ಅವರು ನನಗೆ ಎಚ್ಚರಿಕೆ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಅವರು ಉನ್ನತ ಹುದ್ದೆ ಏರುವಂತಾಗಲಿ ಎಂದರು.

ಕೆ.ಪಿ.ಸಿ.ಸಿ.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ, ನಾವು ಬಸವಣ್ಣ ಹಾಗೂ ಕನಕದಾಸರನ್ನು ನೋಡಿಲ್ಲ. ಆದರೆ ಸಿದ್ದರಾಮಯ್ಯ ಅವರು ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಯಾಗಿ ಸಮ ಸಮಾಜ ನಿರ್ಮಾಣ ಮಾಡಲು ಪಣತೊಟ್ಟಿದ್ದಾರೆ. ಅವರ ಐದು ವರ್ಷದ ಆಡಳಿತದ ಸಂದರ್ಭದಲ್ಲಿ ಇಡೀ ರಾಷ್ಟ್ರವೇ ಮೆಚ್ಚುವಂತಹ ಆಡಳಿತ ನಡೆಸಿದ್ದಾರೆ. ಮತ್ತೊಮ್ಮೆ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿಮಾಡಿದರು.

ಕರ್ನಾಟಕ ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಪುಟ್ಟಬಸವಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುಷ್ಮಾ ರಾಜು, ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿಕ್ಕಲಿಂಗಯ್ಯ, ಚನ್ನಪಿಳ್ಳೆಕೊಪ್ಪಲು ಸಿದ್ದೇಗೌಡ ಸೇರಿದಂತೆ ಹಲವರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!