Thursday, September 19, 2024

ಪ್ರಾಯೋಗಿಕ ಆವೃತ್ತಿ

ಗುಂಡೇಟಿಗೆ ಟಿಎಂಸಿ ನಾಯಕ ಬಲಿ: ಶಂಕಿತನನ್ನು ಹೊಡೆದು ಕೊಂದ ಬೆಂಬಲಿಗರು

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನ ಹತ್ಯೆ ಮತ್ತು ಪ್ರತೀಕಾರವಾಗಿ ಗುಂಪು ಹತ್ಯೆಗಳು ಉದ್ವಿಗ್ನತೆಯನ್ನು ಉಂಟುಮಾಡಿದೆ.

ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಸಿಪಿಎಂ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ತೃಣಮೂಲ ನಾಯಕ ಸೈಫುದ್ದೀನ್ ಲಸ್ಕರ್ ಅವರನ್ನು ಇಂದು ಬೆಳಗ್ಗೆ ಜಾಯ್‌ನಗರದಲ್ಲಿರುವ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲಸ್ಕರ್ ಅವರು ಜಾಯ್ನಗರದ ಬಮುಂಗಾಚಿ ಪ್ರದೇಶದಲ್ಲಿ ತೃಣಮೂಲ ಘಟಕದ ಮುಖ್ಯಸ್ಥರಾಗಿದ್ದರು ಮತ್ತು ಅವರ ಪತ್ನಿ ಪಂಚಾಯತ್ ಅಧ್ಯಕ್ಷರಾಗಿದ್ದರು.

ಹತ್ಯೆ ಬಳಿಕ ಸೈಫುದ್ದೀನ್ ಲಸ್ಕರ್ ಅವರ ಬೆಂಬಲಿಗರು ಶಂಕಿತನನ್ನು ಹಿಡಿದು ಹೊಡೆದು ಕೊಲೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಆಡಳಿತ ಪಕ್ಷದ ಬೆಂಬಲಿಗರು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಸೈಫುದ್ದೀನ್ ಲಸ್ಕರ್ ಹತ್ಯೆ ಹಿಂದೆ ಸಿಪಿಎಂ ಬೆಂಬಲಿಗರ ಕೈವಾಡವಿದೆ ಎಂದು ಸ್ಥಳೀಯ ತೃಣಮೂಲ ಮುಖಂಡರು ಆರೋಪಿಸಿದ್ದಾರೆ.

ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಎಂ ನಾಯಕ ಸುಜನ್ ಚಕ್ರವರ್ತಿ ಅವರು, ಆರೋಪವನ್ನು ನಿರಾಕರಿದ್ದಾರೆ. ”ತೃಣಮೂಲದೊಳಗಿನ ಆಂತರಿಕ ಕಲಹದ ಪರಿಣಾಮ ಹತ್ಯೆ ನಡೆದಿದೆ. ಸಿಪಿಎಂ ಅನ್ನು ದೂಷಿಸಿ ಪ್ರಯೋಜನವಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಸಿ ಪಿತೂರಿಯನ್ನು ಬಯಲಿಗೆಳೆಯಬೇಕು” ಎಂದು ಹೇಳಿದ್ದಾರೆ.

ತೃಣಮೂಲ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!