ಕುಷ್ಠರೋಗ ಮುಕ್ತ ಜಿಲ್ಲೆಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕುಷ್ಠ ರೋಗ ನಿರ್ಮೂಲನ ಕಛೇರಿ, ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿ ಶ್ರೀರಂಗಪಟ್ಟಣ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ ಶೆಟ್ಟಹಳ್ಳಿ ಹಾಗೂ ಗ್ರಾಮ ಪಂಚಾಯತಿ ಕೆ ಶೆಟ್ಟಹಳ್ಳಿ ಅವರ ನೇತ್ರತ್ವದಲ್ಲಿ ಆಯೋಜಿಸಿದ್ದ “ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎನ್ ಕೆ ವೆಂಕಟೇಶ್ ಮಾತನಾಡಿ, ಕುಷ್ಠ ರೋಗದ ಬಗ್ಗೆ ಸಮಾಜದಲ್ಲಿ ಬೇರೂರಿರುವ ತಪ್ಪು ತಿಳಿವಳಿಕೆಯನ್ನು ಹಾಗೂ ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ಹೋಗಲಾಡಿಸಿ ಎಂದರು.
ತಾಲ್ಲೂಕಿನಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಜ 30 ರಿಂದ ಫೆಬ್ರವರಿ 13 ರವರಿಗೆ ನಡೆಯಲಿದೆ.ಕುಷ್ಠ ರೋಗಕ್ಕೆ ಬಹು ಔಷಧಿ (ಎಂ ಡಿ ಟಿ )ಚಿಕಿತ್ಸೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತವೆ ಆದ್ದರಿಂದ ಗಾಂಧೀಜಿಯವರ ಕಂಡ ಕುಷ್ಠ ಮುಕ್ತ ಭಾರತದ ಕನಸು ನನಸು ಮಾಡಿ ಎಂದು ಸಲಹೆ ನೀಡಿದರು
ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ, ವ್ಯಕ್ತಿಯ ದೇಹದ ಮೇಲೆ ತಿಳಿ ಬಿಳಿ, ತಾಮ್ರವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಇದ್ದಲ್ಲಿ, ಅಲಕ್ಷಿಸದೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ , ಭಯ ಬೇಡ, ಕುಷ್ಠರೋಗ ಸಂಪೂರ್ಣ ಗುಣ ಮುಖ ಹೊಂದುವ ಖಾಯಿಲೆ, ಬನ್ನಿ ಕುಷ್ಠರೋಗದ ವಿರುದ್ದ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವನ್ನಾಗಿ ಮಾಡೋಣವೆಂದರು
ನಂತರ ಆಡಳಿತ ವೈದ್ಯಾಧಿಕಾರಿ ಉಷಾ ಮಾತನಾಡಿದರು. ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಜಿ ಮೋಹನ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಗ್ರಾ ಪಂ ಉಪಾಧ್ಯಕ್ಷೆ ಸುವರ್ಣ, ಸದಸ್ಯೆ ಮಹೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಪಣಿಂದ್ರ, ಸುರಕ್ಷಾಧಿಕಾರಿ ಮಮತಾ, ಮುಖ್ಯ ಶಿಕ್ಷಕಿ ವರಲಕ್ಷ್ಮೀ, ಆಶಾ ಕಾರ್ಯಕರ್ತೆ ಮೋಹನ್ ಕುಮಾರಿ ಹಾಗೂ ಗ್ರಾಮದ ಮುಖಂಡರು ಹಾಗೂ ತಾಯಂದಿರು ಹಾಜರಿದ್ದರು.