ಕೃಷಿ ರಂಗದಲ್ಲಿ ಉದ್ಯಮಿಗಳಾಗಲು ಬಹಳಷ್ಟು ಅವಕಾಶಗಳಿದ್ದು, ಯುವ ಜನತೆ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡು ಉದ್ಯಮಿಗಳಾಗಲು ಕೌಶಲ್ಯ ಬೆಳಸಿಕೊಳ್ಳಬೇಕಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂನಲ್ಲಿ ಸೋಮವಾರ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಆತ್ಮ ನಿರ್ಭರ ಯೋಜನೆಯಡಿ 10 ಸಾವಿರ ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಉದ್ದಿಮೆ ಪ್ರಾರಂಭಿಸಲು ಸಹಾಯಧನ ನೀಡಲಾಗುತ್ತಿದೆ ಎಂದರು.
ರೈತಗೀತೆ ಕಡ್ಡಾಯ
ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ರೈತಗೀತೆಯನ್ನು ಕಡ್ಡಾಯ ಗೊಳಿಸಲಾಗುವುದು. ರೈತನ ಸ್ಥಾನವನ್ನು ಯಾರು ಕೂಡ ತುಂಬಲು ಸಾಧ್ಯವಿಲ್ಲ. ರೈತ ಇದ್ದರೆ ಮಾತ್ರ ದೇಶ. ಜೈಕಿಸಾನ್ ಎಂದು ಎಲ್ಲರಿಗೂ ನಮಸ್ಕರಿಸಿ ಇದರಿಂದ ರೈತನಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಸಕ ಸಿ.ಎಸ್ ಪುಟ್ಟರಾಜು ಅವರು ಮಾತನಾಡಿ, ಹಣವಂತರು ಹವ್ಯಾಸಕ್ಕಾಗಿ ಕೃಷಿ ಮಾಡುವ ಪರಿಸ್ಥಿತಿ ಎದುರಾಗುತ್ತಿದೆ. ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿದೆ. ರೈತರಿಗೆ ಸಹಕಾರಿಸುವಂತೆ ಹೆಚ್ಚು ಯೋಜನೆಗಳು ರೂಪುಗೊಳ್ಳಬೇಕು. ಕೃಷಿ ಲಾಭದಾಯಕವಾಗಿ ಮಾರ್ಪಡಾಗಬೇಕು, ಆಗ ಮಾತ್ರ ಹೆಚ್ಚಿನ ಜನರು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ ಎಂದರು.
ಮೈಷುಗರ್ ಸಕ್ಕರೆ ಕಾರ್ಖಾನೆ ಹಾಗೂ ವಿ.ಸಿ.ಫಾರಂ ಅಭಿವೃದ್ಧಿ, ಜಿಲ್ಲೆಯ ರೈತರಿಗೆ ಬೇಕಿರುವ ಎರಡು ಮುಖ್ಯ ಅಂಶಗಳು. ವಿ.ಸಿ.ಫಾರಂನಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳು ರೈತರಿಗೆ ಪೂರಕವಾಗಿ ನಡೆಯಬೇಕು ಎಂದರು.
10.5ಕೋಟಿ ರೂ.ಗಳ ಕಾಮಗಾರಿಗಳ ಉದ್ಘಾಟನೆ

ವಿ.ಸಿ.ಫಾರ್ಮ್ ನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ, ಕಮಾನು, ಡಿಪ್ಲೋಮೊ ಕಾಲೇಜಿನ ವಸತಿ ನಿಲಯ, ಪ್ರಯೋಗಾಲಯ ಹಾಗೂ ವಿವಿಧ ಕಾಮಗಾರಿ ಸೇರಿದಂತೆ 10.5 ಕೋಟಿ ರೂ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಸಚಿವರು ನೇರವೇರಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ 31,687 ರೈತರು 10,832 ಹೆ.ಪ್ರದೇಶದ ಮುಂಗಾರು ಹಂಗಾಮಿನ ಅಧಿಸೂಚಿಸಿದ ಬೆಳೆಗಳಿಗೆ ವಿಮೆಯನ್ನು ಮಾಡಿಸಿದ್ಧಾರೆ ಎಂದರು.
ಕಳೆದ 3 ವರ್ಷಗಳಲ್ಲಿ ಜಿಲ್ಲೆಯ ಎಲ್ಲಾ ಹಂಗಾಮುಗಳಲ್ಲಿ 55,571 ಸಂಖ್ಯೆಯ ರೈತರು 47,286 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ಮಾಡಿಸಲಾಗಿದ್ದು, ರೂ.137.06 ಲಕ್ಷ ಪ್ರೀಮಿಯಂ ಪಾವತಿಗೆ ರೂ. 2087.43 ಲಕ್ಷ ಮೊತ್ತದ ವಿಮೆ ಪರಿಹಾರವನ್ನು ರೈತರು ಪಡೆದಿದ್ದಾರೆ ಎಂದರು
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಡೀನ್ (ಕೃಷಿ) ಡಾ.ಎಸ್.ಎಸ್.ಪ್ರಕಾಶ್, ಸಹ ಸಂಶೋಧನಾ ನಿರ್ದೇಶಕ ಡಾ. ಎನ್.ಶಿವಕುಮಾರ್, ಸಹ ವಿಸ್ತರಣಾ ನಿರ್ದೇಶಕ ಡಾ.ಡಿ.ರಘುಪತಿ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ರಾಮಾಂಜಿನಿಗೌಡ, ಅರವಿಂದ್ ಟಿ.ಎಂ, ದಯಾನಂದ, ಸುರೇಶ್ ,ಶ್ರೀರಾಮ ಸೇರಿದಂತೆ ಇತರರು ಉಪಸ್ಥಿತರಿದ್ದರು.




